ದೀಪಿಕಾ ಪಡುಕೋಣೆ, ಲೋಟಸ್ ಸ್ಪ್ಲಾಶ್  ದೀಪಿಕಾ ಪಡುಕೋಣೆ (ಫೇಸ್ ಬುಕ್)
ಸುದ್ದಿಗಳು

ದೀಪಿಕಾ ಪಡುಕೋಣೆ ಕಂಪೆನಿಯಿಂದ 'ಲೋಟಸ್ ಸ್ಪ್ಲಾಶ್ʼ ಹೆಸರು ಬಳಕೆಗೆ ಆಕ್ಷೇಪ: ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

'ಲೋಟಸ್ ಸ್ಪ್ಲಾಶ್' ಎಂಬ ಗುರುತು ತನ್ನ 'ಲೋಟಸ್' ವಾಣಿಜ್ಯ ಚಿಹ್ನೆ ಉಲ್ಲಂಘಿಸುತ್ತದೆ ಎಂದು ಆರೋಪಿಸಿ ದೀಪಿಕಾ ಪಡುಕೋಣೆ ಮತ್ತು ಅವರ ಕಂಪನಿ ವಿರುದ್ಧ ಲೋಟಸ್ ಹರ್ಬಲ್ ಮೊಕದ್ದಮೆ ಹೂಡಿತ್ತು.

Bar & Bench

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರಿಗೆ ಸೇರಿದ ಸಂಸ್ಥೆ ಫೇಸ್ ವಾಶ್ / ಫೇಸ್ ಕ್ಲೆನ್ಸರ್ ಉತ್ಪನ್ನಕ್ಕೆ 'ಲೋಟಸ್ ಸ್ಪ್ಲಾಶ್' ಚಿಹ್ನೆ ಬಳಸದಂತೆ ಕೋರಿ ಪ್ರಸಾಧನ ಮತ್ತು ಸೌಂದರ್ಯ ವರ್ಧಕಗಳ ಉತ್ಪನ್ನ ಕಂಪೆನಿ ಲೋಟಸ್‌ ಹರ್ಬಲ್‌ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಈಚೆಗೆ ವಜಾಗೊಳಿಸಿದೆ.

ಪಡುಕೋಣೆ ಮತ್ತವರ ಕಂಪನಿ ಡಿಪಿಕೆಎ ಯೂನಿವರ್ಸಲ್ ಕನ್ಸ್ಯೂಮರ್ ವೆಂಚರ್ಸ್ ವಿರುದ್ಧ ಲೋಟಸ್ ಹರ್ಬಲ್ ಮೊಕದ್ದಮೆ ಹೂಡಿತ್ತು. ಡಿಪಿಕೆಎ ಯೂನಿವರ್ಸಲ್ ಕನ್ಸ್ಯೂಮರ್ ವೆಂಚರ್ಸ್ ತನ್ನ ಉತ್ಪನ್ನಕ್ಕೆ ಬಳಸಲಾದ 'ಲೋಟಸ್ ಸ್ಪ್ಲಾಶ್' ಗುರುತು ಲೋಟಸ್ ಹರ್ಬಲ್‌ನ 'ಲೋಟಸ್' ವಾಣಿಜ್ಯ ಚಿಹ್ನೆಯನ್ನು ಉಲ್ಲಂಘಿಸಿದೆ ಎಂದು ಅದು ಆರೋಪಿಸಿತ್ತು.

ಲೋಟಸ್ ಹರ್ಬಲ್ ಸಲ್ಲಿಸಿದ ಮಧ್ಯಂತರ ಪರಿಹಾರ ಅರ್ಜಿಯನ್ನು ಜನವರಿ 25ರಂದು ನ್ಯಾಯಮೂರ್ತಿ ಸಿ ಹರಿಶಂಕರ್ ಅವರು ತಿರಸ್ಕರಿಸಿದರು. ಕಮಲದಿಂದ ಸಂಸ್ಕರಿಸಲಾದ ಸಾಂದ್ರವು 'ಲೋಟಸ್ ಸ್ಪ್ಲಾಶ್' ಫೇಸ್‌ವಾಶ್‌ನ ಪ್ರಮುಖ ಅಂಶವಾಗಿದ್ದು ಉತ್ಪನ್ನದ ಹೆಸರಿನಲ್ಲಿ 'ಕಮಲ' ಬಳಕೆ ಈ ಅಂಶವನ್ನು ಸೂಚಿಸುತ್ತದೆ ಎಂದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಗ್ರಾಹಕರನ್ನು ಗೊಂದಲಕ್ಕೀಡು ಮಾಡುವ ಯಾವುದೇ ಯತ್ನವನ್ನು ಪಡುಕೋಣೆ ಅವರ ಕಂಪನಿ ಮಾಡಿಲ್ಲ ಮತ್ತು ವಾಣಿಜ್ಯ ಚಿಹ್ನೆ ಕಾಯಿದೆಯ ಸೆಕ್ಷನ್ 30 (2) (ಎ) ಅಡಿಯಲ್ಲಿ ರಕ್ಷಣೆಗೆ ಅವರು ಅರ್ಹರಾಗಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಕಾಯಿದೆಯ ಸೆಕ್ಷನ್ 30 (2) (ಎ) ಪ್ರಕಾರ, ಸರಕುಗಳು ಅಥವಾ ಸೇವೆಗಳ ವಿಧ, ಗುಣಮಟ್ಟ, ಪ್ರಮಾಣ, ಉದ್ದೇಶಿತ ಉದ್ದೇಶ, ಮೌಲ್ಯ, ಭೌಗೋಳಿಕ ಮೂಲ, ಸರಕುಗಳ ಉತ್ಪಾದನೆಯ ಸಮಯ ಅಥವಾ ಸೇವೆಗಳನ್ನು ಒದಗಿಸುವ ಅಥವಾ ಸರಕುಗಳು ಅಥವಾ ಸೇವೆಗಳ ಇತರ ಗುಣಲಕ್ಷಣಗಳನ್ನು ಸೂಚಿಸುವ ರೀತಿಯಲ್ಲಿ ನೋಂದಾಯಿತ ವಾಣಿಜ್ಯ ಚಿಹ್ನೆಯನ್ನು ಬಳಸುವುದು ವಾಣಿಜ್ಯ ಚಿಹ್ನೆಯ ಉಲ್ಲಂಘನೆಯಲ್ಲ ಎಂಬುದನ್ನು ನ್ಯಾಯಾಲಯ ತಿಳಿಸಿದೆ.

ನ್ಯಾಯಮೂರ್ತಿ ಸಿ ಹರಿಶಂಕರ್

ಲೋಟಸ್ ಹರ್ಬಲ್ ಮತ್ತು ಪಡುಕೋಣೆ ಅವರ ಕಂಪನಿ ನೀಡುವ ಉತ್ಪನ್ನಗಳು ನೋಟದಲ್ಲಿ ಸಂಪೂರ್ಣವಾಗಿ ಭಿನ್ನವಾಗಿವೆ ಮತ್ತು ಬೆಲೆಗಳಲ್ಲಿ ವ್ಯಾಪಕ ವ್ಯತ್ಯಾಸವಿದೆ ಎಂದು ನ್ಯಾಯಾಲಯ ತಿಳಿಸಿದೆ.

ತಾನು 1993ರಲ್ಲಿ ಕಮಲ ಎಂಬ ಚಿಹ್ನೆಯನ್ನು ಬಳಸಲು ಪ್ರಾರಂಭಿಸಿದ್ದು 'ಲೋಟಸ್ ಸ್ಪ್ಲಾಶ್" ಎಂಬ ಹೆಸರನ್ನು ಬಳಸುವುದು ವಾದಿಯ ನೋಂದಾಯಿತ ಕಮಲದ ಗುರುತುಗಳ ಉಲ್ಲಂಘನೆಯಾಗಿದೆ ಎಂದು ಲೋಟಸ್‌ ಹರ್ಬಲ್‌ ವಾದಿಸಿತ್ತು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Lotus Herbal Private Limited v DPKA Universal Consumer Ventures Private Limited & Ors.pdf
Preview