ಯಾವುದೇ ಗುರುತಿನ ಪುರಾವೆ ಇಲ್ಲದೆ ₹ 2000 ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ತಿರಸ್ಕರಿಸಿತು.
ಯಾವುದೇ ಮನವಿ ನಮೂನೆ (ರಿಕ್ವಿಸಿಷನ್ ಸ್ಲಿಪ್) ಮತ್ತು ಗುರುತಿನ ಪುರಾವೆಗಳನ್ನು ಪಡೆಯದೆ ನೋಟುಗಳ ವಿನಿಮಯಕ್ಕೆ ಅವಕಾಶ ನೀಡಿರುವುದು ಮನಸೋಇಚ್ಛೆಯಿಂದ ಕೂಡಿದ್ದು ಅತಾರ್ಕಿಕವಾದುದಾಗಿದೆ ಎಂದು ಉಪಾಧ್ಯಾಯ ಅವರು ಸಲ್ಲಿಸಿದ್ದ ಮನವಿಯಲ್ಲಿ ವಾದಿಸಲಾಗಿತ್ತು.
“ಚಲಾವಣೆಯಲ್ಲಿರುವ ₹ 2000 ಮುಖಬೆಲೆಯ ಬ್ಯಾಂಕ್ ನೋಟುಗಳ ಒಟ್ಟು ಮೌಲ್ಯ ₹ 6.73 ಲಕ್ಷ ಕೋಟಿಯಿಂದ ₹ 3.62 ಲಕ್ಷ ಕೋಟಿಗೆ ಕುಸಿದಿದೆ ಎಂದು ಆರ್‌ಬಿಐ ಪ್ಯಾರಾ-2 ರಲ್ಲಿ ಒಪ್ಪಿಕೊಂಡಿದೆ ಎಂದು ಹೇಳುವುದು ಅನಿವಾರ್ಯವಾಗಿದೆ. ಇದರಲ್ಲಿ ₹ 3.11 ಲಕ್ಷ ಕೋಟಿ ಮೊತ್ತ ವ್ಯಕ್ತಿಗಳ ಲಾಕರ್‌ನಲ್ಲಿ ಉಳಿದಿರಬಹುದು ಇಲ್ಲವೇ ಪ್ರತ್ಯೇಕತಾವಾದಿಗಳು, ಭಯೋತ್ಪಾದಕರು, ಮಾವೋವಾದಿಗಳು, ಡ್ರಗ್ ಸ್ಮಗ್ಲರ್‌ಗಳು, ಗಣಿ ಮಾಫಿಯಾಗಳು ಮತ್ತು ಭ್ರಷ್ಟರ ಬಳಿ ಸಂಗ್ರಹಗೊಂಡಿರಬುದು” ಎಂದು ಅರ್ಜಿ ಆತಂಕ ವ್ಯಕ್ತಪಡಿಸಿತ್ತು.
ಉಪಾಧ್ಯಾಯ ಅವರು, ಇಡಿಯಾಗಿ ಆರ್‌ಬಿಐನ ಅಧಿಸೂಚನೆ ಪ್ರಶ್ನಿಸಿರಲಿಲ್ಲ. ಬದಲಿಗೆ ಯಾವುದೇ ಗುರುತಿನ ಪುರಾವೆಗಳಿಲ್ಲದೆ ಕರೆನ್ಸಿ ವಿನಿಮಯಕ್ಕೆ ಅವಕಾಶ ನೀಡುವುದಕ್ಕೆ ಇರುವ ನಿಬಂಧನೆ ಉಲ್ಲಂಘಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
"ಮೊದಲ ಬಾರಿಗೆ ಜನರು ಹಣದೊಂದಿಗೆ ಬ್ಯಾಂಕ್‌ಗಳಿಗೆ ಬಂದು ಅದನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ, (ಇದರಿಂದ) ಪಾತಕಿಗಳು ಮತ್ತು ದುಷ್ಟಕೂಟಗಳು ಅವರ ಹಿಂಬಾಲಕರು ತಮ್ಮ ಹಣ ಬದಲಾಯಿಸಿಕೊಳ್ಳಬಹುದಾಗಿದೆ" ಎಂದು ಅವರು ಆರೋಪಿಸಿದ್ದರು.
ಮೇ 19ರಂದು ₹ 2000 ನೋಟುಗಳನ್ನು ಹಿಂತೆಗೆದುಕೊಳ್ಳುವ ಸೂಚನೆ ನೀಡಿದ್ದರೂ ಕರೆನ್ಸಿ ಕಾನೂನುಬದ್ಧವಾಗಿ ಮುಂದುವರಿಯಲಿದೆ ಎಂದು ಆರ್‌ಬಿಐ ಹೇಳಿತ್ತು. ತಮ್ಮ ಬ್ಯಾಂಕ್ ಖಾತೆಗಳಿಗೆ ₹ 2000 ಮುಖಬೆಲೆಯ ನೋಟುಗಳನ್ನು ಜಮಾ ಮಾಡಲು ಇಲ್ಲವೇ ಬ್ಯಾಂಕ್ ಶಾಖೆಗಳಲ್ಲಿ ಇತರೆ ಮುಖಬೆಲೆಯ ನೋಟುಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಆರ್‌ಬಿಐ ಜನರಿಗೆ ಸಲಹೆ ನೀಡಿತ್ತು.
ಈ ಮಧ್ಯೆ ₹ 2,000 ನೋಟುಗಳ ಹಿಂಪಡೆಯುವಿಕೆಯು ಆರ್‌ಬಿಐನ ಶಾಸನಬದ್ಧ ಕ್ರಮವಾಗಿದ್ದು ಇದು ನೋಟು ಅಮಾನ್ಯೀಕರಣವಲ್ಲ ಎಂದು ಕೂಡ ಆರ್‌ಬಿಐ ತಿಳಿಸಿತ್ತು.