PM Narendra Modi and Delhi High Court  PM Narendra Modi (FB)
ಸುದ್ದಿಗಳು

ದ್ವೇಷ ಭಾಷಣ ಆರೋಪ: ಪ್ರಧಾನಿ ಮೋದಿ ವಿರುದ್ಧ ಎಫ್ಐಆರ್ ಕೋರಿದ್ದ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಮೋದಿ ಮಾಡಿದ ಭಾಷಣಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದ್ದು ಬಿಜೆಪಿಯ ಅಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಿರುವುದನ್ನು ಹೊರತುಪಡಿಸಿ, ಮೋದಿ ವಿರುದ್ಧ ಇಸಿಐ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಲಾಗಿತ್ತು.

Bar & Bench

ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕೋಮುವಾದಿ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.

ಮನವಿ  ತಪ್ಪು ಗ್ರಹಿಕೆಯಿಂದ ಕೂಡಿದ್ದು ವಿಚಾರಣಾರ್ಹತೆ ಹೊಂದಿಲ್ಲ ಎಂದು ನ್ಯಾಯಮೂರ್ತಿ ಸಚಿನ್ ದತ್ತಾ ಅವರು ಹೇಳಿದರು.

“ಇಸಿಐ ಯಾರಿಗೆ ನೋಟಿಸ್ ನೀಡಬೇಕು ಎನ್ನುವುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ... ಅವರು ಏನನ್ನೂ ಮಾಡುವುದಿಲ್ಲ ಎಂದು ನಾವು ಊಹಿಸಲು ಸಾಧ್ಯವಿಲ್ಲ. ಅವರು ಮೊದಲು ಎಫ್‌ಐಆರ್ ದಾಖಲಿಸಿ ನಂತರ ಪ್ರತಿಕ್ರಿಯೆ ಪಡೆಯಲು ಸಾಧ್ಯವಿಲ್ಲ" ಎಂದು ಪೀಠ ಹೇಳಿತು.

ಇಸಿಐಯ ಸೂಕ್ಷ್ಮನಿರ್ವಹಣೆ ನ್ಯಾಯಾಲಯದಿಂದ ಸಾಧ್ಯವಿಲ್ಲ. ಇಸಿಐ ಸ್ವತಃ ಅದನ್ನು ಮಾಡಿಕೊಳ್ಳುತ್ತದೆ. ತಮ್ಮ ನೋಟಿಸ್‌ಗೆ ಪ್ರತಿಕ್ರಿಯೆ ದೊರೆಯಲಿ ಎಂದು ಇಸಿಐ ಹೇಳುತ್ತಿದೆ. ಅದು ಏನನ್ನೂ ಮಾಡದು ಎಂದು ನಾವು ಊಹಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.  

ಈ ಪ್ರಕರಣದಲ್ಲಿ ಅರ್ಜಿದಾರರ ಪರ ವಕೀಲ ನಿಜಾಮ್ ಪಾಷಾ ವಾದ ಮಂಡಿಸಿ, ಬಿಆರ್‌ಎಸ್ ನಾಯಕ ಕೆ ಚಂದ್ರಶೇಖರ್ ರಾವ್ ಅವರಂತಹ ನಾಯಕರ ವಿರುದ್ಧ ಇಸಿಐ ಕ್ರಮ ಕೈಗೊಂಡಿದೆ. ಆದರೆ ಮೋದಿಗೆ ನೋಟಿಸ್ ಕೂಡ ನೀಡಿಲ್ಲ ಎಂದು ಹೇಳಿದರು.

ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಮೋದಿ ಮಾಡಿದ ಭಾಷಣಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದ್ದು ಬಿಜೆಪಿ ಅಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಿರುವುದನ್ನು ಹೊರತುಪಡಿಸಿ,  ಮೋದಿ ವಿರುದ್ಧ ಇಸಿಐ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಲಾಗಿತ್ತು.

ಇಸಿಐ ಪರವಾಗಿ ವಕೀಲ ಸುರುಚಿ ಸೂರಿ ವಾದಿಸಿದರು ಮತ್ತು ನೋಟಿಸ್‌ಗೆ ಉತ್ತರಿಸಲು ಗಡುವು ವಿಸ್ತರಣೆ ಕೋರಿ ಚುನಾವಣಾ ಆಯೋಗವನ್ನು ಬಿಜೆಪಿ ಸಂಪರ್ಕಿಸಿದ್ದು ಮೇ 15 ರೊಳಗೆ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗಿದೆ ಎಂದು ವಾದಿಸಿದರು.

ಪಕ್ಷಕ್ಕೆ ನೋಟಿಸ್‌ ನೀಡಬೇಕೋ ಇಲ್ಲವೇ ಸ್ಟಾರ್‌ ಪ್ರಚಾರಕರಿಗೆ ನೋಟಿಸ್‌ ನೀಡಬೇಕೋ ಎಂಬುದನ್ನು ಚುನಾವಣಾ ಆಯೋಗಕ್ಕೆ ಬಿಡಬೇಕು ಎಂದು ಅವರು ತಿಳಿಸಿದರು.

ಪ್ರಕರಣದ ಕುರಿತಂತೆ ಮಾಡುವ ಯಾವುದೇ ಊಹೆ ತಪ್ಪು ಗ್ರಹಿಕೆಯಾಗುತ್ತದೆ. ಇಸಿಐ ಸ್ವತಂತ್ರ ನಿಲುವು ತಳೆಯಲಿದೆ ಎಂದ ಪೀಠ ಅರ್ಜಿ ತಪ್ಪು ಗ್ರಹಿಕೆಯಿಂದ ಕಡಿದ್ದು ವಿಚಾರಣಾರ್ಹತೆ ಇಲ್ಲದೆ ಇರುವುದರಿಂದ ಅದನ್ನು ತಿರಸ್ಕರಿಸುತ್ತಿರುವುದಾಗಿ ತಿಳಿಸಿತು.