ಮಹುವಾ ಮೊಯಿತ್ರಾ, ದೆಹಲಿ ಹೈಕೋರ್ಟ್  Facebook
ಸುದ್ದಿಗಳು

ಫೆಮಾ ತನಿಖೆಯ ಮಾಹಿತಿ ಸೋರಿಕೆ ಮಾಡದಂತೆ ಮಹುವಾ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ತನಗೆ ಪ್ರಕರಣದ ಮಾಹಿತಿ ತಿಳಿಯುವ ಮೊದಲೇ ಅದು ಮಾಧ್ಯಮಗಳಿಗೆ ಸೋರಿಕೆಯಾಗುತ್ತಿದ್ದು ಇದು ಸಂವಿಧಾನದಡಿ ಒದಗಿಸಲಾದ ಹಕ್ಕುಗಳ ಉಲ್ಲಂಘನೆ ಎಂದು ಮಹುವಾ ದೂರಿದ್ದರು.

Bar & Bench

ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ- 1999 (ಫೆಮಾ) ಉಲ್ಲಂಘಿಸಿದ ಆರೋಪದ ಮೇಲೆ ತನ್ನ ವಿರುದ್ಧ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಸೂಕ್ಷ್ಮ ಮತ್ತು ಪರಿಶೀಲಿಸದ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡದಂತೆ ಜಾರಿ ನಿರ್ದೇಶನಾಲಯಕ್ಕೆ (ಇ ಡಿ) ನಿರ್ದೇಶನ ನೀಡಬೇಕೆಂದು ಕೋರಿ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.

ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಈ ಆದೇಶ ಪ್ರಕಟಿಸಿದರು.

ಫೆಮಾ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸೂಕ್ಷ್ಮ ಮತ್ತು ಪರಿಶೀಲಿಸದ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುತ್ತಿದೆ. ಹಾಗೆ ಮಾಡದಂತೆ ಅದಕ್ಕೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಮೊಯಿತ್ರಾ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಎಎನ್ಐ, ಬಿಸಿನೆಸ್ ಟುಡೇ, ಎಕನಾಮಿಕ್ ಟೈಮ್ಸ್, ಫೈನಾನ್ಷಿಯಲ್ ಎಕ್ಸ್‌ಪ್ರೆಸ್‌, ಹಿಂದೂಸ್ತಾನ್ ಟೈಮ್ಸ್, ಇಂಡಿಯಾ ಟಿವಿ, ಇಂಡಿಯನ್ ಎಕ್ಸ್‌ಪ್ರೆಸ್‌, ಮಿಂಟ್, ಮನಿಕಂಟ್ರೋಲ್, ಎನ್‌ಡಿಟಿವಿ, ಟೈಮ್ಸ್ ಗ್ರೂಪ್ ಮತ್ತಿತರ ಮಾಧ್ಯಮ ಸಂಸ್ಥೆಗಳನ್ನು ಪಕ್ಷಕಾರರನ್ನಾಗಿ ಮಹುವಾ ಉಲ್ಲೇಖಿಸಿದ್ದರು.

ತಾನು ಮಾಧ್ಯಮಗಳಿಗೆ ಯಾವುದೇ ಮಾಹಿತಿಯನ್ನು ಸೋರಿಕೆ ಮಾಡಿಲ್ಲ ಮತ್ತು ಈ ಪ್ರಕರಣದಲ್ಲಿ ಮೊಯಿತ್ರಾ ಅವರಿಗೆ ಸಮನ್ಸ್‌ ನೀಡಿದ್ದ ಮಾಹಿತಿಯನ್ನು ಮಾಧ್ಯಮಗಳಿಗೆ ಹೇಗೆ ತಿಳಿಸಲಾಯಿತು ಎಂಬುದು ತನಗೆ ತಿಳಿದಿಲ್ಲ ಎಂದು ಇ ಡಿ ನ್ಯಾಯಾಲಯಕ್ಕೆ ತಿಳಿಸಿತ್ತು.

ಕಳೆದ ವಾರ ಮಹುವಾ ಅವರಿಗೆ ಸಮನ್ಸ್ ಜಾರಿ ಮಾಡಿದ್ದ ಇ ಡಿ, ಫೆಬ್ರವರಿ 19 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಕೆಲವು ವಿದೇಶಿ ಹೂಡಿಕೆಗಳಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ದೆಹಲಿಯ ಇ ಡಿ ಪ್ರಧಾನ ಕಚೇರಿಗೆ ಹಾಜರಾಗುವಂತೆ ಅವರಿಗೆ ತಿಳಿಸಲಾಗಿತ್ತು. ಲೋಕಪಾಲ್ ಉಲ್ಲೇಖದ ಮೇರೆಗೆ ಸಿಬಿಐ ಕೂಡ ಅವರ ವಿರುದ್ಧದ ಆರೋಪಗಳ ಬಗ್ಗೆ ಪ್ರಾಥಮಿಕ ತನಿಖೆ ನಡೆಸುತ್ತಿದೆ.

ಮೊಯಿತ್ರಾ ಪರವಾಗಿ ಹಿರಿಯ ವಕೀಲೆ ರೆಬೆಕಾ ಜಾನ್ , ಎಎನ್ಐ ಪರವಾಗಿ ವಕೀಲ ಸಿದ್ಧಾಂತ್ ಕುಮಾರ್, ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ವಾದ ಮಂಡಿಸಿದ್ದರು. ವಾದಗಳನ್ನು ಆಲಿಸಿದ ನ್ಯಾಯಾಲಯ ಮನವಿ ವಜಾಗೊಳಿಸಿದೆ.