ಕಳೆದ ವರ್ಷ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮಾಳವೀಯ ನಗರ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಸತೀಶ್ ಉಪಾಧ್ಯಾಯ ಅವರು ಚುನಾಯಿತರಾಗಿರುವುದನ್ನು ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸೋಮನಾಥ್ ಭಾರ್ತಿ ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶನಿವಾರ ತಿರಸ್ಕರಿಸಿದೆ.
ಸೋಮನಾಥ್ ಭಾರ್ತಿ ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ವಜಾಗೊಳಿಸಿದರು. "ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ನ್ಯಾಯಾಲಯ ಹೇಳಿದೆ. ವಿವರವಾದ ತೀರ್ಪು ಇನ್ನಷ್ಟೇ ಲಭ್ಯವಾಗಬೇಕಿದೆ.
ಮಾಳವೀಯ ನಗರದಿಂದ ಮೂರು ಬಾರಿ ಶಾಸಕರಾಗಿದ್ದ ಭಾರ್ತಿ ಅವರನ್ನು 2025ರ ವಿಧಾನಸಭಾ ಚುನಾವಣೆ ವೇಳೆ ಉಪಾಧ್ಯಾಯ ಸುಮಾರು 2,100 ಮತಗಳ ಅಂತರದಿಂದ ಸೋಲಿಸಿದ್ದರು. ಆ ಮೂಲಕ 2013ರಿಂದ ನಿರಂತರವಾಗಿ ಕ್ಷೇತ್ರದ ಮೇಲೆ ಭಾರ್ತಿ ಅವರು ಹೊಂದಿದ್ದ ಹಿಡಿತ ಕೊನೆಗೊಂಡಿತ್ತು.
ಫಲಿತಾಂಶದ ನಂತರ ಸೋಮನಾಥ್ ಭಾರ್ತಿ ಅವರು 1951 ರ ಜನ ಪ್ರಾತಿನಿಧ್ಯ ಕಾಯ್ದೆಯ ಅಡಿಯಲ್ಲಿ ಉಪಾಧ್ಯಾಯ ಅವರ ಆಯ್ಕೆಯನ್ನು ಪ್ರಶ್ನಿಸಿದ್ದರು. ಚುನಾವಣೆಯನ್ನು ಗೆಲ್ಲಲು ಅಕ್ರಮ ಮಾರ್ಗಗಳನ್ನು ಅನುಸರಿಸಲಾಗಿತ್ತು ಎಂದು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು.
ಉಪಾಧ್ಯಾಯ ಅವರು ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಮೇಲೆ ಬಾಕಿ ಇರುವ ಕ್ರಿಮಿನಲ್ ದೂರು ಅಥವಾ ಎಫ್‌ಐಆರ್‌ಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸಲು ವಿಫಲರಾಗಿದ್ದಾರೆ. ಆ ಮೂಲಕ ಚುನಾವಣಾ ಕಾನೂನಿನಡಿ ಸಲ್ಲಿಸಬೇಕಾದ ಕಡ್ಡಾಯ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ಭಾರ್ತಿ ದೂರಿದ್ದರು.
ಮತದಾರರಿಗೆ ಮಾಹಿತಿಯನ್ನು ಬಹಿರಂಗಪಡಿಸದಿರುವುದು ಚುನಾವಣಾ ಫಲಿತಾಂಶದ ಮೇಲೆ ಗಣನೀಯ ಪರಿಣಾಮ ಬೀರಿದೆ. ಅಲ್ಲದೆ, ಕಡ್ಡಾಯ ಮಾಹಿತಿಯನ್ನು ಮರೆಮಾಚಿದ ಉಪಾಧ್ಯಾಯ ಅವರ ನಾಮಪತ್ರವು ಅಸಿಂಧುವಾಗುತ್ತದೆ ಎಂದು ಭಾರ್ತಿ ವಾದಿಸಿದ್ದರು.
ಆದರೆ, ತಮ್ಮ ಮೇಲೆ ಮಾಡಲಾದ ಆರೋಪಗಳು ಸುಳ್ಳು ಎಂದು ಹೇಳುವ ಮೂಲಕ ಉಪಾಧ್ಯಾಯ ಅವರು ಭಾರ್ತಿ ಅವರ ಆಪಾದನೆಗಳನ್ನು ಪ್ರಶ್ನಿಸಿದ್ದರು.
ಪ್ರಕರಣದ ವಿಚಾರಣೆಯಲ್ಲಿ ವಕೀಲ ಆನಂದ್ ಪ್ರಕಾಶ್ ಗೌತಮ್ ಅವರೊಂದಿಗೆ ಸೋಮನಾಥ್ ಭಾರ್ತಿ ಖುದ್ದು ವಾದಿಸಿದರು.
ಹಿರಿಯ ವಕೀಲರಾದ ರಾಜೀವ್ ನಾಯರ್, ಜಯಂತ್ ಮೆಹ್ತಾ ಮತ್ತು ಗೌತಮ್ ನಾರಾಯಣ್, ವಕೀಲರಾದ ಸೌರಭ್ ಸೇಠ್, ಸುಮೇರ್ ದೇವ್ ಸೇಠ್, ನೀಲಂಪ್ರೀತ್ ಕೌರ್, ಅಭಿರೂಪ್ ರಾಥೋಡ್ ಮತ್ತು ಕಬೀರ್ ದೇವ್ ಅವರು ಸತೀಶ್ ಉಪಾಧ್ಯಾಯ ಪರವಾಗಿ ವಾದಿಸಿದರು.