Rajat Sharma and Ragini Nayak, Jairam Ramesh and Pawan Kherafacebook  
ಸುದ್ದಿಗಳು

ಕಾಂಗ್ರೆಸ್‌ ನಾಯಕಿಗೆ ನಿಂದನೆ: ಪತ್ರಕರ್ತ ರಜತ್‌ ಶರ್ಮಾ ಪರ ಆದೇಶ ನೀಡಿದ ದೆಹಲಿ ಹೈಕೋರ್ಟ್‌

ಕಾಂಗ್ರೆಸ್ ನಾಯಕರು ಘಟನೆಯನ್ನು ಅತಿ ರೋಚಕಗೊಳಿಸಿದ್ದು ವಾಸ್ತವಾಂಶಗಳನ್ನು ತಪ್ಪಾಗಿ ಬಿಂಬಿಸಿದ್ದಾರೆ ಎಂದ ಹೈಕೋರ್ಟ್‌ ರಜತ್‌ ಶರ್ಮಾ ಪರ ಏಕಪಕ್ಷೀಯ ಮಧ್ಯಂತರ ಆದೇಶ ನೀಡಿದೆ.

Bar & Bench

ಟಿವಿ ಕಾರ್ಯಕ್ರಮವೊಂದರ ನೇರ ಪ್ರಸಾರದ ವೇಳೆ ಪತ್ರಕರ್ತ ರಜತ್ ಶರ್ಮಾ ಅವರು ಅಸಭ್ಯ ಭಾಷೆ ಬಳಸಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷದ ನಾಯಕಿ ರಾಗಿಣಿ ನಾಯಕ್‌, ಪಕ್ಷದ ಹಿರಿಯ ಮುಖಂಡರಾದ ಜೈರಾಮ್ ರಮೇಶ್ ಹಾಗೂ ಪವನ್ ಖೇರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ನೀಡಿದ್ದ ಹೇಳಿಕೆಗಳನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್‌ ಆದೇಶಿಸಿದೆ.

ಕಾಂಗ್ರೆಸ್ ನಾಯಕರು ಘಟನೆಯನ್ನು ಅತಿ ರೋಚಕಗೊಳಿಸಿದ್ದು ವಾಸ್ತವಾಂಶಗಳನ್ನು ತಪ್ಪಾಗಿ ಬಿಂಬಿಸಿದ್ದಾರೆ ಎಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ಶುಕ್ರವಾರ ನೀಡಿದ ಏಕಪಕ್ಷೀಯ ಮಧ್ಯಂತರ ಆದೇಶದಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಹೇಳಿಕೆಗಳು ಉಳಿಯಲು ಬಿಟ್ಟರೆ  ಪತ್ರಕರ್ತ ಶರ್ಮಾ ಅವರಿಗೆ ಸರಿಪಡಿಸಲಾಗದಷ್ಟು ನಷ್ಟ ಉಂಟಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ವೀಡಿಯೊಗಳನ್ನು ಖಾಸಗಿಯಾಗಿ ಇಡುವುದು ಇಲ್ಲವೇ ಸಾರ್ವಜನಿಕ ವೇದಿಕೆಗಳಲ್ಲಿ ಲಭ್ಯವಾಗದಂತೆ ಮಾಡದಂತೆ ಕಾಂಗ್ರೆಸ್ ನಾಯಕರಿಗೆ ತಡೆಯಾಜ್ಞೆ ನೀಡುವುದರಿಂದ ಅವರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಯಾವುದೇ ರೀತಿಯಲ್ಲಿ ಉಲ್ಲಂಘನೆಯಾಗುವುದಿಲ್ಲ ಎಂದು ನ್ಯಾ. ನೀನಾ ತಿಳಿಸಿದರು.

 ಆದರೆ ಈ ಹೇಳಿಕೆಗಳು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಿದರೆ ಅದು ರಜತ್‌ ಅವರಿಗೆ ಅನಾನುಕೂಲಕರವಾಗಬಹುದು. ಇದು ಸರಿಪಡಿಸಲಾಗದಷ್ಟು ಹಾನಿ ಇಲ್ಲವೇ ಪರಿಹಾರ ನೀಡಲು ಸಾಧ್ಯವಾಗದ ಸ್ಥಿತಿ ಸೃಷ್ಟಿಸಬಹುದು. ಪ್ರತಿವಾದಿಗಳು ಈ ಹೇಳಿಕೆಗಳನ್ನು ಏಳು ದಿನಗಳಲ್ಲಿ ತೆಗೆದು ಹಾಕಬೇಕು ಎಂದು ಪೀಠ ಹೇಳಿದೆ.

ಪತ್ರಕರ್ತ ರಜತ್‌ ಶರ್ಮಾ ಅವರು ರಾಗಿಣಿ, ಖೇರಾ ಹಾಗೂ ಜೈರಾಂ ರಮೇಶ್ ವಿರುದ್ಧ ₹ 100 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಲೋಕಸಭೆ ಚುನಾವಣೆ ಫಲಿತಾಂಶದ ದಿನ ಕಾಂಗ್ರೆಸ್ ವಕ್ತಾರೆ ರಾಗಿಣಿ ನಾಯಕ್ ವಿರುದ್ಧ ಶರ್ಮಾ ಅಸಭ್ಯ ಭಾಷೆ ಬಳಸಿದ್ದಾರೆ ಎಂದು ದೂರಿ ರಜತ್‌ ಶರ್ಮಾ ಅವರ ಇಂಡಿಯಾ ಟಿವಿಯಲ್ಲಿ ಪ್ರಕಟವಾಗಿದ್ದ ವೀಡಿಯೊ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆಗಳನ್ನು ನೀಡಲಾಗಿತ್ತು. ಅಲ್ಲದೆ ಶರ್ಮಾ ವಿರುದ್ಧ ಪೊಲೀಸ್‌ ದೂರು ಕೂಡ ದಾಖಲಿಸಲಾಗಿತ್ತು.