ಆದಾಯ ತೆರಿಗೆ (ಐಟಿ) ಇಲಾಖೆ ₹105 ಕೋಟಿಗಿಂತಲೂ ಹೆಚ್ಚಿನ ಬಾಕಿ ತೆರಿಗೆ ಪಾವತಿಸುವಂತೆ ತನಗೆ ನೀಡಿದ್ದ ನೋಟಿಸ್‌ಗೆ ತಡೆ ನೀಡಲು ನಿರಾಕರಿಸಿದ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ಆದೇಶ ಪ್ರಶ್ನಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ದೆಹಲಿ ಹೈಕೋರ್ಟ್ ಸೋಮವಾರ ಕಾಯ್ದಿರಿಸಿದೆ.
ತೀರ್ಪು ಕಾಯ್ದಿರಿಸಿದ ನ್ಯಾಯಮೂರ್ತಿಗಳಾದ ಯಶವಂತ್ ವರ್ಮಾ ಮತ್ತು ಪುರುಷೇಂದ್ರ ಕುಮಾರ್ ಕೌರವ್ ಅವರಿದ್ದ ವಿಭಾಗೀಯ ಪೀಠ ಐಟಿಎಟಿ ಆದೇಶದಲ್ಲಿ ಯಾವುದೇ ಮೂಲಭೂತ ದೌರ್ಬಲ್ಯಗಳಿಲ್ಲ ಎಂದಿದೆ.
ಪಕ್ಷಕ್ಕೆ ಸಂಬಂಧಿಸಿದಂತೆ 2021ರಲ್ಲೇ ತೆರಿಗೆ ವಸೂಲಾತಿ ಪ್ರಕ್ರಿಯೆಗಳು ಆರಂಭವಾಗಿರುವುದನ್ನು ಗಮನಿಸಿದ ಪೀಠ ಕಾಂಗ್ರೆಸ್ ಕಚೇರಿಯಲ್ಲಿ ಇಷ್ಟು ದಿನ ಯಾರೋ ಗಡದ್ದಾಗಿ ಮಲಗಿದ್ದರು ಎಂದು ತೋರುತ್ತದೆ. ಇಡೀ ವಿಷಯವನ್ನು ಕೆಟ್ಟದಾಗಿ ನಿರ್ವಹಿಸಲಾಗಿದೆ ಎಂದಿತು.
ಈ ಆದೇಶ (ಐಟಿಎಟಿ ಆದೇಶ) ನಾವು ಓದುತ್ತಿದ್ದಂತೆ ಅರ್ಜಿದಾರರು ತಮ್ಮನ್ನು ತಾವೇ ದೂಷಿಸಿಕೊಳ್ಳಬೇಕಾಗುತ್ತದೆ... ಆದಾಯ ತೆರಿಗೆ ಪಾವತಿಸಲು ಕಾಂಗ್ರೆಸ್ ಯಾವುದೇ ಯತ್ನ ಮಾಡಲಿಲ್ಲ ಎಂದು ತೋರುತ್ತದೆ. ಅರ್ಜಿದಾರರ ಕಚೇರಿಯಲ್ಲಿ ಯಾರೋ 2021ರಿಂದ ನಿದ್ರೆಗೆ ಜಾರಿದ್ದರು ಅನ್ನಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ನಾಳೆ (ಮಾರ್ಚ್ 13, ಬುಧವಾರ) ತೀರ್ಪು ಪ್ರಕಟಿಸುವ ಸೂಚನೆಯನ್ನು ಸಹ ಪೀಠ ನೀಡಿತು.
ಕಾಂಗ್ರೆಸ್ ಪರವಾಗಿ ಹಾಜರಾದ ಹಿರಿಯ ವಕೀಲ ವಿವೇಕ್ ತಂಖಾ, ಐಟಿ ಇಲಾಖೆಯ ಪರವಾಗಿ ಹಾಜರಾದ ವಕೀಲ ಜೊಹೆಬ್ ಹುಸೇನ್ ವಾದ ಮಂಡಿಸಿದರು.
2018-19ರ ತೆರಿಗೆ ನಿರ್ಧರಣಾ ಸಾಲಿನಲ್ಲಿ ಬಾಕಿ ಇರುವ ₹105 ಕೋಟಿ ರೂಪಾಯಿಗೂ ಹೆಚ್ಚಿನ ತೆರಿಗೆ ಪಾವತಿಸುವಂತೆ ಐಟಿ ಇಲಾಖೆ ಈ ಹಿಂದೆ ಕಾಂಗ್ರೆಸ್‌ಗೆ ನೋಟಿಸ್ ನೀಡಿತ್ತು.
ಕಾಂಗ್ರೆಸ್‌ಗೆ ಆದಾಯ ತೆರಿಗೆ ವಿನಾಯಿತಿ ನಿರಾಕರಿಸುವ ವಿಚಾರದಲ್ಲಿ ಐ ಟಿ ಅಧಿಕಾರಿಗಳು ಯಾವುದೇ ತಪ್ಪು ಮಾಡಿಲ್ಲ ಎಂದು ಮಾರ್ಚ್ 8, 2024 ರಂದು ಹೊರಡಿಸಿದ ಆದೇಶದಲ್ಲಿ ಐಟಿಎಟಿ ತೀರ್ಪು ನೀಡಿತು. ಅಧಿಕಾರಿಗಳ ವಿನಾಯಿತಿ ನಿರಾಕರಣೆ ವಿರುದ್ಧ ಬಲವಾದ ಪ್ರಾಥಮಿಕ ವಾದ ಮಂಡಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ ಎಂದು ಆಗ ಅದು ಹೇಳಿತ್ತು.
ತನಗೆ ಯಾವುದೇ ಆದಾಯ ಬರುತ್ತಿಲ್ಲ ಎಂದು ಕಾಂಗ್ರೆಸ್ ಘೋಷಿಸಿದ್ದನ್ನು ಜುಲೈ 2021ರಲ್ಲಿ ನಿರಾಕರಿಸಿದ್ದ ಐಟಿ ಅಧಿಕಾರಿಗಳು ₹105 ಕೋಟಿಗಿಂತಲೂ ಅಧಿಕ ತೆರಿಗೆ ಸಂದಾಯ ಮಾಡುವಂತೆ ಸೂಚಿಸಿದ್ದರು.
ನಿಗದಿತ ಅವಧಿ ಮೀರಿ ತೆರಿಗೆ ರಿಟರ್ನ್ ಸಲ್ಲಿಸಲಾಗಿದ್ದು ವಿವಿಧ ವ್ಯಕ್ತಿಗಳಿಂದ ಪಕ್ಷ 14,49,000 ರೂಪಾಯಿ ʼದೇಣಿಗೆʼ ಸ್ವೀಕರಿಸಿದೆ. ಪ್ರತಿಯೊಂದು ದೇಣಿಗೆ ಸ್ವೀಕಾರವೂ ₹2,000ಕ್ಕಿಂತ ಹೆಚ್ಚಿನ ಮೊತ್ತದ್ದಾಗಿದೆ ಎಂಬ ಆಧಾರದ ಮೇಲೆ ತೆರಿಗೆ ಸಂದಾಯ ಮಾಡುವಂತೆ ನೋಟಿಸ್ ನೀಡಲಾಗಿತ್ತು.
ರಾಜಕೀಯ ಪಕ್ಷಗಳಿಗೆ ತೆರಿಗೆಯಿಂದ ವಿನಾಯಿತಿ ಪಡೆಯಲು ಅವಕಾಶ ಕಲ್ಪಿಸುವ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 13ಎಯನ್ನು ಈ ನೋಟಿಸ್ ಉಲ್ಲಂಘಿಸುತ್ತದೆ ಎನ್ನಲಾಗಿತ್ತು.
ಐಟಿ ಇಲಾಖೆ ತನ್ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ ಎಂದು ಕಾಂಗ್ರೆಸ್ ಹೇಳಿದ ಹಿನ್ನೆಲೆಯಲ್ಲಿ 2024 ರ ಫೆಬ್ರವರಿಯಲ್ಲಿ ವಿವಾದ ತಲೆದೋರಿತ್ತು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಕ್ಕೆ ಸಂಕಷ್ಟ ತಂದೊಡ್ಡುವ ಉದ್ದೇಶ ತೆರಿಗೆ ಇಲಾಖೆಯು ಆರಂಭಿಸಿರುವ ವಸೂಲಾತಿ ಪ್ರಕ್ರಿಯೆಯ ಹಿಂದೆ ಇದೆ ಎಂದು ಐಟಿಎಟಿ ಎದುರು ಕಾಂಗ್ರೆಸ್ ಅಳಲು ತೋಡಿಕೊಂಡಿತ್ತು.
ಆದರೆ ತಾನು ಕಾಂಗ್ರೆಸ್ ಖಾತೆಗಳಿಗೆ ಸಂಬಂಧಿಸಿದ ವಹಿವಾಟು ಸ್ಥಗಿತಗೊಳಿಸಲು ಬ್ಯಾಂಕುಗಳಿಗೆ ಯಾವುದೇ ಆದೇಶ ಅಥವಾ ನಿರ್ದೇಶನ ನೀಡಿಲ್ಲ. ಬದಲಿಗೆ ತೆರಿಗೆ ಬಾಕಿ ಪಾವತಿಸುವಂತೆ ಮಾತ್ರ ಸೂಚಿಸಿದ್ದಾಗಿ ಐಟಿಎಟಿಗೆ ಹಣಕಾಸು ಸಚಿವಾಲಯದ ಕಂದಾಯ ಇಲಾಖೆ ತಿಳಿಸಿತ್ತು.
ಕಾಂಗ್ರೆಸ್ ನಿಗದಿತ ಗಡುವಿನೊಳಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕಿತ್ತು ಎಂದು ಐಟಿಎಟಿಯ ವಿಸ್ತೃತ ತೀರ್ಪಿನಲ್ಲಿ ವಿವರಿಸಲಾಗಿತ್ತು.