Aaj Tak, Farmers Protest 
ಸುದ್ದಿಗಳು

ಸಿಖ್‌ ಸಮುದಾಯದ ವಿರುದ್ಧ ಅಪಪ್ರಚಾರ: ಆಜ್‌ತಕ್‌ ಸುದ್ದಿವಾಹಿನಿ, ಕೇಂದ್ರದ ಪ್ರತಿಕ್ರಿಯೆ ಬಯಸಿದ ದೆಹಲಿ ಹೈಕೋರ್ಟ್‌

ರಾಜ್ಯಸಭಾ ಸದಸ್ಯ ಸುಖದೇವ್‌ ಸಿಂಗ್‌ ಧಿಂಡ್ಸಾ ಮತ್ತು ದೆಹಲಿ ಸಿಖ್‌ ಗುರುದ್ವಾರ ನಿರ್ವಹಣಾ ಸಮಿತಿಯ ಮಾಜಿ ಅಧ್ಯಕ್ಷ ಮಂಜಿತ್‌ ಸಿಂಗ್‌ ಜಿ ಕೆ ಮನವಿ ಸಲ್ಲಿಸಿದ್ದಾರೆ.

Bar & Bench

ಸಿಖ್‌ ಸಮುದಾಯದ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಮನವಿಯನ್ನು ಆಧರಿಸಿ ಸುದ್ದಿ ವಾಹಿನಿಯಾದ ಆಜ್‌ತಕ್‌, ಭಾರತೀಯ ಸುದ್ದಿ ಪ್ರಸಾರ ಸಂಸ್ಥೆ, ಭಾರತೀಯ ಮಾಧ್ಯಮ ಮಂಡಳಿ ಮತ್ತು ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದ್ದು, ಪ್ರತಿಕ್ರಿಯಿಸುವಂತೆ ಸೂಚಿಸಿದೆ (ಸುಖದೇವ್‌ ಸಿಂಗ್‌ ಧಿಂಡ್ಸಾ ವರ್ಸಸ್‌ ಆಜ್‌ತಕ್‌ ಮತ್ತು ಇತರರು) (ಮಂಜಿತ್‌ ಸಿಂಗ್‌ ಜಿಕೆ ವರ್ಸಸ್‌ ಆಜ್‌ ತಕ್‌ ವರ್ಸಸ್‌ ಇತರರು).

ರಾಜ್ಯಸಭಾ ಸದಸ್ಯ ಸುಖದೇವ್‌ ಸಿಂಗ್‌ ಧಿಂಡ್ಸಾ, ದೆಹಲಿ ಸಿಖ್‌ ಗುರುದ್ವಾರ ನಿರ್ವಹಣಾ ಸಮಿತಿಯ ಮಾಜಿ ಅಧ್ಯಕ್ಷರಾದ ಮಂಜಿತ್‌ ಸಿಂಗ್‌ ಜಿ ಕೆ ಅವರು ನಕಲಿ ಸುದ್ದಿಗಳನ್ನು ನಿಯಂತ್ರಿಸುವುದರ ಜೊತೆಗೆ ಹೊಣೆಗಾರಿಕಾ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿ ವಲಯಕ್ಕೆ ಸೂಚಿಸುವಂತೆ ಕೋರಿದೆ. ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ಡಿ ಎನ್‌ ಪಟೇಲ್‌ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್‌ ಅವರಿದ್ದ ವಿಭಾಗೀಯ ಪೀಠವು ನೋಟಿಸ್‌ ಜಾರಿಗೊಳಿಸಿದ್ದು, ವಿಚಾರಣೆಯನ್ನು ಫೆಬ್ರುವರಿ 26ಕ್ಕೆ ಮುಂದೂಡಲಾಗಿದೆ.

ಕೃಷಿ ಕಾಯಿದೆ ವಿರೋಧಿಸುತ್ತಿರುವ ರೈತರು ಉತ್ತರ ಪ್ರದೇಶದ ರಾಮ ಜನ್ಮಭೂಮಿ ದೇವಸ್ಥಾನದ ಸ್ತಬ್ಧಚಿತ್ರದ ಶಿಖರ ಗೋಪುರಕ್ಕೆ ಅಗೌರವ ತೋರಿದ್ದಾರೆ ಎಂದು ಆಜ್‌ ತಕ್‌ ಸುದ್ದಿ ವಾಹಿನಿಯು ವರದಿ ಮಾಡಿರುವ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಬೇಕಾಯಿತು ಎಂದು ಹೇಳಲಾಗಿದೆ.

“… 26.01.2021ರ ಸಮಾರಂಭಕ್ಕೆ ಸಂಬಂಧಿಸಿದಂತೆ ಕೆಲವು ಮಾಧ್ಯಮ ಸಂಸ್ಥೆಗಳು (ಆಜ್‌ ತಕ್‌) ದಾಳಿ ಆರಂಭಿಸಿದ್ದು, ಅದು ಸಿಖ್‌ ಸಮುದಾಯದ ವಿರುದ್ಧದ ಕೋಮುದ್ವೇಷದ ದಾಳಿಯಾಗಿದೆ. ಈ ಮೂಲಕ ಸಂಬಂಧ ಪಟ್ಟ ವಾಹಿನಿ, ಯೂಟ್ಯೂಬ್‌ ಮತ್ತು ಇತರೆ ಡಿಜಿಟಲ್‌ ಹಾಗೂ ಆನ್‌ಲೈನ್‌ ಮೂಲಕ ಪರಿಶೀಲನೆಗೆ ಒಳಪಡದ ವಿಡಿಯೋಗಳನ್ನು ಪ್ರಸಾರ ಮಾಡಲಾಗುತ್ತಿದೆ” ಎಂದು ಆರೋಪಿಸಲಾಗಿದೆ.

ಆಜ್‌ ತಕ್‌ ಸುದ್ದಿ ವಾಹಿನಿಯ ವರದಿಯು ಸತ್ಯಕ್ಕೆ ದೂರವಾಗಿದ್ದು, ಆಧಾರರಹಿತವಾಗಿವೆ. ಅಲ್ಲದೇ ಕಲ್ಪನೆಯಿಂದ ಕೂಡಿದೆ ಎಂದು ಮನವಿದಾರರು ಹೇಳಿದ್ದಾರೆ. “ದುರುದ್ದೇಶಪೂರಿತ ಹಾಗೂ ವಿಭಜನಕಾರಿಯಾದ ಅಂಶಗಳನ್ನು ಒಳಗೊಂಡಿರುವ ವಿಡಿಯೋಗಳ ದಾಳಿಯನ್ನು ಆರಂಭಿಸಿರುವುದು ಸಿಖ್‌ ಸಮುದಾಯದ ಘನತೆ, ನಮ್ರತೆ ಮತ್ತು ಸದ್ಭಾವನೆಗೆ ಧಕ್ಕೆ ಉಂಟು ಮಾಡಿದೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.

“… ಪರಿಸ್ಥಿತಿಯು ಕ್ಷೋಭೆಯಿಂದ ಕೂಡಿರುವ ಸಂದರ್ಭದಲ್ಲಿ ಸಾರ್ವಜನಿಕರ ಭಾವನೆಯನ್ನು ಕೆರಳಿಸುವಂಥ ದುರುದ್ದೇಶಪೂರಿತ ಅಪ್ರಚಾರ ನಡೆಸುವುದರಿಂದ ಸಮುದಾಯದ ಮೇಲೆ ಕೆಟ್ಟ ಪರಿಣಾಮ ಬೀಳುವುದರ ಜೊತೆಗೆ ಸಮುದಾಯಕ್ಕೆ ಸೇರಿದವರ ಜೀವಹಾನಿ, ಆಸ್ತಿ-ಪಾಸ್ತಿ ಹಾಗೂ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇದೆ” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಅರ್ಜಿಗಳನ್ನು ವಕೀಲರಾದ ಪರಮಿಂದರ್‌ ಸಿಂಗ್‌ ಗೋಯಿಂದಿ, ಬಿ ಎಸ್‌ ಬಗ್ಗಾ ಮತ್ತು ನವೀನ್‌ ಚೌಧರಿ ಅವರ ಮೂಲಕ ಮನವಿ ಸಲ್ಲಿಸಲಾಗಿದೆ.