ಇತಿಹಾಸಕಾರ ವಿಕ್ರಂ ಸಂಪತ್ ಅವರು ವಿನಾಯಕ್ ದಾಮೋದರ್ ಸಾವರ್ಕರ್ ಕೃತಿ ರಚಿಸುವಾಗ ಕೃತಿಚೌರ್ಯ ಎಸಗಿದ್ದಾರೆ ಎಂದು ಆರೋಪಿಸಿರುವ ಇತಿಹಾಸಕಾರರಾದ ಆಡ್ರಿ ಟ್ರುಷ್ಕಿ, ಅನನ್ಯ ಚಕ್ರವರ್ತಿ ಮತ್ತು ರೋಹಿತ್ ಛೋಪ್ರಾ ಅವರು ಸಂಪತ್ ವಿರುದ್ಧ ಯಾವುದೇ ಮಾನಹಾನಿಕಾರ ವಿಷಯ ಪ್ರಕಟಿಸದಂತೆ ಶುಕ್ರವಾರ ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ (ಡಾ. ವಿಕ್ರಂ ಸಂಪರ್ ವರ್ಸಸ್ ಡಾ. ಆಡ್ರಿ ಟ್ರುಷ್ಕಿ ಮತ್ತು ಇತರರು).
ರಾಯಲ್ ಐತಿಹಾಸಿಕ ಸೊಸೈಟಿ (ಆರ್‌ಎಚ್‌ಎಸ್) ಅಧ್ಯಕ್ಷರಾದ ಎಮ್ಮಾ ಗ್ರಾಫಿನ್ ಅವರಿಗೆ ಸಂಪತ್ ಕೃತಿಚೌರ್ಯ ಎಸಗಿದ್ದಾರೆ ಎಂದು ಆರೋಪಿಸಿ ಪ್ರತಿವಾದಿಗಳು ಬರೆದಿರುವ ಪತ್ರವನ್ನು ಟ್ವೀಟಿಸಿರುವ ಟ್ವೀಟ್‌ಗಳ ಯುಆರ್‌ಎಲ್ ಅನ್ನು ಸಂಪತ್ ನೀಡಿದರೆ ಅವುಗಳನ್ನು ತೆಗೆಯಲಾಗುವುದು ಎಂಬ ಟ್ವಿಟರ್ ವಾದವನ್ನು ನ್ಯಾಯಮೂರ್ತಿ ಅಮಿತ್ ಬನ್ಸಲ್ ನೇತೃತ್ವದ ಏಕಸದಸ್ಯ ಪೀಠವು ದಾಖಲಿಸಿಕೊಂಡಿದೆ.
“ಪ್ರತಿವಾದಿಗಳು ಬರೆದಿರುವ ಪತ್ರವನ್ನು ನಿರಂತರವಾಗಿ ಪ್ರಕಟಿಸುವುದರಿಂದ ಫಿರ್ಯಾದುದಾರರ ಘನತೆ ಮತ್ತು ವೃತ್ತಿಗೆ ಧಕ್ಕೆಯಾಗುತ್ತದೆ. ಅನುಕೂಲತೆಯ ಸಮತೋಲನ ಕಾಪಾಡಬೇಕಿದ್ದು, ಅದು ಸಂಪತ್ ಅವರ ಪರವಾಗಿದೆ. ಸಂಪತ್ ಪರವಾಗಿ ಪ್ರತಿಬಂಧಕಾದೇಶ ಮಾಡದಿದ್ದರೆ ಅವರಿಗೆ ಸರಿಪಡಿಸಲಾಗದ ನಷ್ಟವಾಗಲಿದೆ. ಹೀಗಾಗಿ, ಮುಂದಿನ ವಿಚಾರಣೆಯವರೆಗೆ ಸಂಪತ್ ವಿರುದ್ಧ ಯಾವುದೇ ತೆರನಾದ ಪತ್ರ ಅಥವಾ ಮಾನಹಾನಿ ಉಂಟು ಮಾಡಬಹುದಾದ ವಿಚಾರಗಳನ್ನು ಟ್ವಿಟರ್, ಆನ್‌ಲೈನ್ ಅಥವಾ ಆಫ್‌ಲೈನಲ್ಲಿ ಪ್ರಕಟಿಸದಂತೆ ಪ್ರತಿವಾದಿಗಳನ್ನು ನಿರ್ಬಂಧಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಆದರೆ, ಟ್ವಿಟರ್ ವಿರುದ್ಧ ಯಾವುದೇ ತೆರನಾದ ಮಧ್ಯಂತರ ಆದೇಶ ಮಾಡಲಾಗಿಲ್ಲ. ಪ್ರತಿವಾದಿಗಳಿಗೆ ಸಮನ್ಸ್ ಜಾರಿ ಮಾಡಿರುವ ನ್ಯಾಯಾಲಯವು ವಿಚಾರಣೆಯನ್ನು ಏಪ್ರಿಲ್ 1ಕ್ಕೆ ಮುಂದೂಡಿದೆ.
ಆಡ್ರಿ ಟ್ರುಷ್ಕಿ ಸೇರಿದಂತೆ ಮತ್ತಿಬ್ಬರ ವಿರುದ್ಧ 2 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯನ್ನು ಸಂಪತ್ ಹೂಡಿದ್ದಾರೆ.