Delhi High Court
Delhi High Court  Khadija Khan
ಸುದ್ದಿಗಳು

ಭಾರತೀಯ ಒಲಿಂಪಿಕ್ಸ್ ಸಂಘದ ಅಧ್ಯಕ್ಷರಾಗಿ ಮುಂದುವರೆಯದಂತೆ ನರೀಂದರ್ ಧ್ರುವ್ ಬಾತ್ರಾಗೆ ದೆಹಲಿ ಹೈಕೋರ್ಟ್ ನಿರ್ಬಂಧ

Bar & Bench

ಭಾರತೀಯ ಒಲಿಂಪಿಕ್ಸ್‌ ಸಂಘದ (ಐಒಎ) ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸದಂತೆ ನರೀಂದರ್‌ ಧ್ರುವ್‌ ಬಾತ್ರಾ ಅವರಿಗೆ ದೆಹಲಿ ಹೈಕೋರ್ಟ್‌ ಶುಕ್ರವಾರ ನಿರ್ಬಂಧ ವಿಧಿಸಿದೆ.

ಐಒಎಯ ಹಿರಿಯ ಉಪಾಧ್ಯಕ್ಷ ಅನಿಲ್ ಖನ್ನಾ ಅವರು ಇನ್ನು ಅಧ್ಯಕ್ಷರ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕು ಹಾಗೂ ಅವರು ಕಾರ್ಯಕಾರಿ ಮಂಡಳಿ ಅಥವಾ ಸಾಮಾನ್ಯ ಸಭೆಯ ನಿರ್ದೇಶನದಂತೆ ಕಾರ್ಯನಿರ್ವಹಿಸಬೇಕು ಎಂದು ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಹೇಳಿದರು.

ಇದೇ ವೇಳೆ ನ್ಯಾಯಾಲಯ ʼಬಾತ್ರಾ ಮತ್ತು ಐಒಎಗೆ ನೋಟಿಸ್ ಜಾರಿ ಮಾಡಿದ್ದು,ತಮ್ಮ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಎಂಬುದನ್ನು ವಿವರಿಸುವಂತೆ ಸೂಚಿಸಿದೆ.

“ಕ್ರೀಡಾ ಒಕ್ಕೂಟದ ಕಾರ್ಯಚಟುವಟಿಕೆ ಯಾವುದೇ ಸಂದೇಹಕ್ಕಿಂತಲೂ ಅತೀತವಾಗಿರಬೇಕೆಂದು ನ್ಯಾಯಾಲಯ ಬಯಸುತ್ತದೆ. ಅಂತಹ ಒಕ್ಕೂಟಗಳ ಕಾರ್ಯನಿರ್ವಹಣೆಯಲ್ಲಿನ ಪರಿಶುದ್ಧತೆ ಎಂಬುದು ಸ್ಥಾನಗಳಲ್ಲಿರುವ ವ್ಯಕ್ತಿಗಿಂತ ಹೆಚ್ಚು ಮುಖ್ಯವಾಗಿದೆ ”ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಹೈಕೋರ್ಟ್‌ ಮೇ 25, 2022ರಂದು ನೀಡಿದ್ದ ಆದೇಶದ ಹೊರತಾಗಿಯೂ ಬಾತ್ರಾ ಅವರು ಹುದ್ದೆಯಲ್ಲಿ ಮುಂದುವರೆದಿದ್ದಾರೆ ಎಂದು ಆರೋಪಿಸಿ ಒಲಿಂಪಿಕ್ಸ್‌ ತಾರೆ ಮತ್ತು ಮಾಜಿ ಹಾಕಿ ಕ್ರೀಡಾಪಟು ಅಸ್ಲಾಂ ಶೇರ್ ಖಾನ್ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಪ್ರಕರಣವನ್ನು ಆಗಸ್ಟ್‌ 3ಕ್ಕೆ ರೋಸ್ಟರ್‌ ಪೀಠದ ಮುಂದೆ ಪಟ್ಟಿ ಮಾಡಲಾಗುತ್ತದೆ.

ಅರ್ಜಿದಾರ ಖಾನ್‌ ಪರವಾಗಿ ವಕೀಲ ಮೋಹಿತ್‌ ಮಾಥುರ್‌, ವಕೀಲ ವಂಶದೀಪ್‌ ದಾಲ್ಮಿಯಾ, ಬಾತ್ರಾ ಅವರ ಪರವಾಗಿ ವಕೀಲ ಶೈಲ್‌ ಟೆಹ್ರಾನ್‌, ಐಒಎ ಪರ ವಕೀಲರಾದ ರುಚಿರ್ ಮಿಶ್ರಾ ಮತ್ತು ಹೇಮಂತ್ ಫಾಲ್ಫರ್, ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಚೇತನ್ ಶರ್ಮಾ ಮತ್ತು ಕೇಂದ್ರ ಸರ್ಕಾರದ ಸ್ಥಾಯಿ ವಕೀಲ (ಸಿಜಿಎಸ್‌ಸಿ) ಪ್ರತಿಮಾ ಎನ್ ಲಾಕ್ರಾ ವಾದ ಮಂಡಿಸಿದರು.