Oreo biscuits and Parle's Fabio 
ಸುದ್ದಿಗಳು

ಒರಿಯೊ ಬಿಸ್ಕೆಟ್ ವಾಣಿಜ್ಯ ಚಿಹ್ನೆ ಉಲ್ಲಂಘನೆ: ಪಾರ್ಲೆ ಕಂಪೆನಿಯ 'ಫ್ಯಾಬಿಯೊ'ಗೆ ನಿರ್ಬಂಧ ವಿಧಿಸಿದ ದೆಹಲಿ ಹೈಕೋರ್ಟ್

ಇಂಥದ್ದೇ ಹೆಸರಿನ ಬೇರೆ ಬಿಸ್ಕೆಟ್ ಇಲ್ಲದಿರುವುದರಿಂದ ಎರಡೂ ಉತ್ಪನ್ನಗಳು ಗ್ರಾಹಕರನ್ನು ಗೊಂದಲಗೊಳಿಸುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

Bar & Bench

ಒರಿಯೊ ಕಂಪೆನಿಯ ಬಿಸ್ಕೆಟ್‌ಗಳನ್ನು ಹೋಲುವುದರಿಂದ 'FABIO' ಅಥವಾ 'FAB!O' ವಾಣಿಜ್ಯ ಚಿಹ್ನೆ ಇರುವ ಪೊಟ್ಟಣಗಳೊಂದಿಗೆ ತನ್ನ ವೆನಿಲ್ಲಾ ಕ್ರೀಮ್ ಭರಿತ ಚಾಕೊಲೇಟ್ ಸ್ಯಾಂಡ್‌ವಿಚ್ ಬಿಸ್ಕೆಟ್‌ಗಳನ್ನು ಮಾರಾಟ ಮಾಡದಂತೆ ಆಹಾರ ಸಂಸ್ಕರಣಾ ಕಂಪನಿಯಾದ ಪಾರ್ಲೆಗೆ ದೆಹಲಿ ಹೈಕೋರ್ಟ್ ಶುಕ್ರವಾರ ನಿರ್ಬಂಧಿಸಿದೆ [ಇಂಟರ್‌ಕಾಂಟಿನೆಂಟಲ್ ಗ್ರೇಟ್ ಬ್ರಾಂಡ್ಸ್ ಮತ್ತು ಪಾರ್ಲೆ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್ ನಡುವಣ ಪ್ರಕರಣ].

ತನ್ನ ಯಾವುದೇ ಉದ್ದೇಶಕ್ಕಾಗಿ 'FABIO' (ಫ್ಯಾಬಿಯೊ) ಅಥವಾ 'FAB!O' (ಫ್ಯಾಬ್‌ಓ) ಚಿಹ್ನೆಗಳನ್ನು ಪಾರ್ಲೆ ಬಳಸುವಂತಿಲ್ಲ ಎಂದು ನ್ಯಾ. ಸಿ ಹರಿಶಂಕರ್‌ ತಿಳಿಸಿದರು. ಈ ತಡೆಯಾಜ್ಞೆಯು ಪ್ರಸ್ತುತ ಪಾರ್ಲೆಯ ಅಧೀನದಲ್ಲಿರುವ ದಾಸ್ತಾನಿಗೆ ಕೂಡ ಅನ್ವಯಿಸಲಿದೆ. ಆದರೆ ಈಗಾಗಲೇ ಮಾರುಕಟ್ಟೆಗೆ ಬಿಡುಗಡೆಯಾದ ದಾಸ್ತಾನಿಗೆ ಅಲ್ಲ ಎಂದು ನ್ಯಾಯಾಲಯ ಹೇಳಿದೆ.

ಪಾರ್ಲೆಯ FABIO ಮತ್ತು FAB!O ತನ್ನ ವಾಣಿಜ್ಯ ಚಿಹ್ನೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಒರಿಯೊ ಬಿಸ್ಕೆಟ್‌ ಕಂಪೆನಿ ಮಾಲೀಕರು ದೂರು ಸಲ್ಲಿಸಿದ್ದರು.  ಇದುವರೆಗೆ FAB ಮತ್ತು FAB! ಎಂಬ ಬ್ರಾಂಡ್‌ಗಳನ್ನು ಪಾರ್ಲೆ ಬಳಸುತ್ತಿದೆ. ಜನವರಿ 2020ರಲ್ಲಿ FAB!O ಹೆಸರಿನಲ್ಲಿ ತನ್ನ ವೆನಿಲ್ಲಾ ಕ್ರೀಮ್ ಭರಿತ ಚಾಕೊಲೇಟ್ ಬಿಸ್ಕಟ್‌ಗಳನ್ನು ಮಾರಾಟ ಮಾಡಲಾರಂಭಿಸಿತು.

ಪಾರ್ಲೆಯ FAB!Oಗೂ ಒರಿಯೊ ವಾಣಿಜ್ಯ ಚಿಹ್ನೆಗೂ ಹೋಲಿಕೆ ಇದೆ. ಉಳಿದೆಲ್ಲಾ ಬಿಸ್ಕೆಟ್‌ಗಳಿಗೆ ಪಾರ್ಲೆ, FAB! ಹೆಸರಿನ ಚಿಹ್ನೆ ಬಳಸುತ್ತಿದೆ. ಬರಹದಲ್ಲಿ 'FAB!O' ಎಂದಿದ್ದರೂ ಅದನ್ನು 'FABIO' ಎಂದೇ ಉಚ್ಚರಿಸಲಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ವಾದಗಳನ್ನು ಆಲಿಸಿದ ಬಳಿಕ ಮತ್ತು ಪ್ಯಾಕಿಂಗ್‌ನಲ್ಲಿ ಮತ್ತು ಅದರೊಳಗಿನ ಬಿಸ್ಕೆಟ್‌ನಲ್ಲಿ ಸಾಮ್ಯತೆ ಇರುವುದನ್ನು ಗಮನಿಸಿದ ನ್ಯಾಯಾಲಯ FAB!Oದಲ್ಲಿ ʼIʼ ಪದ ವೇಷ ಮರೆಸಿಕೊಂಡಿದ್ದು ಈ ಎರಡಕ್ಕೂ ಧ್ವನಿಸಂಬಂಧಿತ ಹೋಲಿಕೆ ಇದೆ ಎಂದು ಪೀಠ ಹೇಳಿತು.

ʼಯೋʼ ಹೆಸರಿನಿಂದ ಅಂತ್ಯವಾಗುವ ಇನ್ನೊಂದು ಬಿಸ್ಕೆಟ್‌ ಮಾರುಕಟ್ಟೆಯಲ್ಲಿ ಇಲ್ಲದೇ ಇರುವುದರಿಂದ ಅದೇ ರೀತಿ ಅಂತ್ಯಗೊಳ್ಳುವ ಹೆಸರಿನ ಮತ್ತೊಂದು ಉತ್ಪನ್ನ ಅದೇ ಬಗೆಯ ಪ್ಯಾಕಿಂಗ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದಾಗ ಒರಿಯೊವನ್ನು ಸೇವಿಸಿರುವ ಗ್ರಾಹಕ ಫ್ಯಾಬಿಯೊಗೂ ಒರಿಯೊಗೂ ನಂಟಿದೆ ಎಂದು ಊಹಿಸುವ ಸಾಧ್ಯತೆಗಳಿವೆ ಎಂದು ನ್ಯಾ. ಹರಿಶಂಕರ್‌ ತಿಳಿಸಿದರು.

ಈ ಹಿನ್ನೆಲೆಯಲ್ಲಿ ನೋಂದಾಯಿತ ವಾಣಿಜ್ಯ ಚಿಹ್ನೆಯನ್ನು ಪಾರ್ಲೆ ಮೇಲ್ನೋಟಕ್ಕೆ ಉಲ್ಲಂಘಿಸಿದ್ದು ತನ್ನ FAB!O ಬ್ರ್ಯಾಂಡ್ ಬಿಸ್ಕೆಟ್‌ಗಳನ್ನು ಒರಿಯೊ ರೂಪದಲ್ಲಿ ಮಾರಾಟ ಮಾಡಲು ಯತ್ನಿಸಿತ್ತು ಎಂದು ಪೀಠ ತೀರ್ಮಾನಿಸಿತು. ಮೊಕದ್ದಮೆ ವಿಲೇವಾರಿಯಾಗುವವರೆಗೆ FABIO ಅಥವಾ FAB!O ಅನ್ನು ಪಾರ್ಲೆ ಬಳಸುವಂತಿಲ್ಲ ಎಂದು ನ್ಯಾಯಾಲಯ ಮಧ್ಯಂತರ ಆದೇಶ ನೀಡಿತು.