Delhi High Court, Warner Bros 
ಸುದ್ದಿಗಳು

ವಾರ್ನರ್ ಬ್ರದರ್ಸ್‌ನ ಕಂಟೆಂಟ್ ಪ್ರಸಾರ ಮಾಡದಂತೆ ʼಅಕ್ರಮʼ ಟೊರೆಂಟ್‌ಗಳಿಗೆ ನಿರ್ಬಂಧ ವಿಧಿಸಿದ ದೆಹಲಿ ಹೈಕೋರ್ಟ್

ತಮ್ಮ ಹಕ್ಕುಸ್ವಾಮ್ಯ ಉಲ್ಲಂಘನೆಯನ್ನು ಯಶಸ್ವಿಯಾಗಿ ಸಮರ್ಥಿಸಿಕೊಳ್ಳುವ ನಿರೀಕ್ಷೆಯನ್ನು ಪ್ರತಿವಾದಿಗಳು (ಟೊರೆಂಟ್‌ಗಳು) ಹೊಂದಿಲ್ಲ ಎಂದು ವಾರ್ನರ್ ಬ್ರದರ್ಸ್ ಪರವಾಗಿ ಸಂಕ್ಷಿಪ್ತ ತೀರ್ಪು ನೀಡುವಾಗ ನ್ಯಾಯಾಲಯ ಅಭಿಪ್ರಾಯಪಟ್ಟಿತು.

Bar & Bench

ʼಅಕ್ರಮʼ ಟೊರೆಂಟ್‌ ಜಾಲತಾಣಗಳು ಜಾಗತಿಕ ಮನರಂಜನಾ ಕಂಪನಿಯಾದ ವಾರ್ನರ್‌ ಬ್ರದರ್ಸ್‌ನ ಕಂಟೆಂಟ್‌ ವಿತರಣೆ, ಪ್ರಸಾರ, ಸ್ಟ್ರೀಮಿಂಗ್‌ ಮಾಡದಂತೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಶಾಶ್ವತ ತಡೆಯಾಜ್ಞೆ ನೀಡಿದೆ [ವಾರ್ನರ್‌ ಬ್ರದರ್ಸ್‌ ಎಂಟರ್‌ಟೈನ್‌ಮೆಂಟ್‌ ಮತ್ತು http.otorrents.com ಇನ್ನಿತರರ ನಡುವಣ ಪ್ರಕರಣ].

ಪ್ರಶ್ನೆಯಲ್ಲಿರುವ ವೆಬ್‌ಸೈಟ್‌ಗಳನ್ನು ವಕೀಲರು ಪ್ರತಿನಿಧಿಸದ ಕಾರಣ ಮೊಕದ್ದಮೆಯನ್ನು ಸಂಕ್ಷಿಪ್ತವಾಗಿ ನಿರ್ಧರಿಸಬಹುದು ನ್ಯಾಯಮೂರ್ತಿ ನವೀನ್ ಚಾವ್ಲಾ ಅಭಿಪ್ರಾಯಪಟ್ಟರು.

“ತಮ್ಮ ಹಕ್ಕುಸ್ವಾಮ್ಯ ಉಲ್ಲಂಘನೆಯನ್ನು ಯಶಸ್ವಿಯಾಗಿ ಸಮರ್ಥಿಸಿಕೊಳ್ಳುವ ನಿರೀಕ್ಷೆಯನ್ನು ಪ್ರತಿವಾದಿಗಳು (ಟೊರೆಂಟ್‌ಗಳು) ಹೊಂದಿಲ್ಲ ಮತ್ತು ದಾವೆಯನ್ನು ಎದುರಿಸುವ ಆಯ್ಕೆ ಮಾಡಿಕೊಂಡಿಲ್ಲ. ಲಭ್ಯ ಸಾಕ್ಷ್ಯಗಳನ್ನು ಆಧರಿಸಿ ಮತ್ತು ಯುಟಿವಿ ಸಾಫ್ಟ್‌ವೇರ್‌ ಪ್ರಕರಣದಲ್ಲಿ ಈ ನ್ಯಾಯಾಲಯ ನೀಡಿದ್ದ ತೀರ್ಪನ್ನು ಗಮನದಲ್ಲಿಟ್ಟುಕೊಂಡು ಪ್ರತಿವಾದಿಗಳಾಗಿರುವ ನಂ. 1ರಿಂದ 51 ರವರೆಗಿನ ಜಾಲತಾಣಗಳು ಅಕ್ರಮ ವೆಬ್‌ಸೈಟ್‌ಗಳು ಎಂದು ಹೇಳಲು ಸಾಕಷ್ಟು ಪುರಾವೆಗಳಿವೆ ಎಂದು ನಾನು ಕಂಡುಕೊಂಡಿದ್ದೇನೆ. ವಾಣಿಜ್ಯ ವ್ಯಾಜ್ಯಗಳಲ್ಲಿ ಅನ್ವಯಿಸುವಂತೆ ಸಿಪಿಸಿ XIII ಎ ಪ್ರಕಾರ ಸಾರಾಂಶ ತೀರ್ಪು ನೀಡಲು ಇದು ಸೂಕ್ತ ಪ್ರಕರಣವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ ಯುಟಿವಿ ಸಾಫ್ಟ್‌ವೇರ್ ಕಮ್ಯುನಿಕೇಷನ್ ಲಿಮಿಟೆಡ್ ಪ್ರಕರಣದಲ್ಲಿ ತಾನು ಈ ಹಿಂದೆ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ ಅಫಿಡವಿಟ್‌ ಮತ್ತು ಪುರಾವೆಗಳಿರುವ ಸೂಕ್ತವಾದ ಅರ್ಜಿ ಸಲ್ಲಿಸುವ ಮೂಲಕ ತನ್ನ ಕಂಟೆಂಟ್‌ ಬಳಸಲು ಅವಕಾಶ ನೀಡುವ ಯಾವುದೇ ಪ್ರತಿರೂಪದ/ ಮರುನಿರ್ದೇಶಿತ/ ಆಲ್ಫಾನ್ಯೂಮೆರಿಕ್‌ ಜಾಲತಾಣಗಳನ್ನು ಪಕ್ಷಕಾರರನ್ನಾಗಿ ಮಾಡಿಕೊಳ್ಳಲು ವಾರ್ನರ್‌ ಬ್ರದರ್ಸ್‌ಗೆ ನ್ಯಾಯಾಲಯ ಅನುಮತಿ ನೀಡಿತು.

ಪ್ರತಿವಾದಿ ಜಾಲತಾಣಗಳು ತನ್ನ ಕಂಟೆಂಟ್‌ಗಳನ್ನು ಅಕ್ರಮವಾಗಿ ಸ್ಟ್ರೀಮಿಂಗ್ ಮತ್ತು ಹೋಸ್ಟ್ ಮಾಡುವ ಮೂಲಕ ತನ್ನ ಹಕ್ಕುಸ್ವಾಮ್ಯ ಉಲ್ಲಂಘಿಸುತ್ತಿವೆ ಎಂದು ವಾರ್ನರ್ ಬ್ರದರ್ಸ್ ಸಲ್ಲಿಸಿದ ಮೊಕದ್ದಮೆಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ʼಅಕ್ರಮʼ ವೆಬ್‌ಸೈಟ್‌ಗಳು ಹಕ್ಕು ಸ್ವಾಮ್ಯ ಉಲ್ಲಂಘಿಸುತ್ತಿರುವ ಕುರಿತು ಸ್ವತಂತ್ರ ತನಿಖಾಧಿಕಾರಿಯಿಂದ ತನಿಖೆ ನಡೆಸಲಾಗಿದೆ ಎಂದು ಕಂಪೆನಿ ವಾದಿಸಿದೆ.