Britannia's Good Day cookies and Good Time cookies  
ಸುದ್ದಿಗಳು

ಬ್ರಿಟಾನಿಯಾ 'ಗುಡ್ ಡೇ' ನಕಲು: 'ಗುಡ್ ಟೈಮ್' ಬಿಸ್ಕೆಟ್‌ ಮಾರಾಟ ನಿರ್ಬಂಧಿಸಿದ ದೆಹಲಿ ಹೈಕೋರ್ಟ್

ಬ್ರಿಟಾನಿಯಾದ ಗುಡ್ ಡೇ ಕುಕೀಗಳು ಮಾರುಕಟ್ಟೆಯಲ್ಲಿ ಅಗಾಧವಾದ ಮನ್ನಣೆ ಮತ್ತು ಸದ್ಭಾವನೆಗಳಿಸಿದ್ದು ಮಧ್ಯಂತರ ತಡೆಯಾಜ್ಞೆ ಜಾರಿಗೊಳಿಸದಿದ್ದರೆ ಬ್ರಿಟಾನಿಯಾಗೆ ಭರಿಸಲಾಗದ ನಷ್ಟ ಉಂಟಾಗುತ್ತದೆ ಎಂದು ನ್ಯಾ. ಪ್ರತಿಭಾ ಎಂ ಸಿಂಗ್ ವಿವರಿಸಿದರು.

Bar & Bench

ಬ್ರಿಟಾನಿಯಾದ 'ಗುಡ್ ಡೇ' ಅಥವಾ 'ಗುಡ್ ಡೇ ಬಟರ್ ಕುಕೀಸ್'ಗೆ ಹಾಗೂ 'ಗುಡ್‌ ಟೈಮ್‌' ಬಿಸ್ಕೆಟ್‌ಗೆ ಬಹುತೇಕ ಒಂದೇ ರೀತಿಯ ಪ್ಯಾಕೇಜಿಂಗ್ ಇರುವ ಹಿನ್ನೆಲೆಯಲ್ಲಿ  ʼಗುಡ್ ಟೈಮ್' ಹೆಸರಿನಲ್ಲಿ ಬಟರ್‌ ಕುಕಿಗಳ ತಯಾರಿಕೆ ಮತ್ತು ಮಾರಾಟ ಮಾಡುವುದಕ್ಕೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ನಿರ್ಬಂಧ ವಿಧಿಸಿದೆ [ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಅಮರ್ ಬಿಸ್ಕೆಟ್ಸ್ ಪ್ರೈವೇಟ್‌ ಲಿಮಿಟೆಡ್ ಮತ್ತಿತರರ ನಡುವಣ ಪ್ರಕರಣ].

ಬಟರ್ ಕುಕೀಗಳು (ಬೆಣ್ಣೆ ಬಿಸ್ಕೆಟ್‌) ನಗರ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳು, ಅಕ್ಷರಸ್ಥರು ಮತ್ತು ಅನಕ್ಷರಸ್ಥರು ಖರೀದಿಸುವ ಉತ್ಪನ್ನಗಳಾಗಿದ್ದು ಬ್ರಿಟಾನಿಯಾದ ಗುಡ್ ಡೇ ಕುಕೀಗಳು ಮಾರುಕಟ್ಟೆಯಲ್ಲಿ ಅಗಾಧವಾದ ಮನ್ನಣೆ ಮತ್ತು ಸದ್ಭಾವನೆಗಳಿಸಿವೆ ಎಂದು ನ್ಯಾ. ಪ್ರತಿಭಾ ಎಂ ಸಿಂಗ್‌ ಮಧ್ಯಂತರ ಆದೇಶದಲ್ಲಿ ತಿಳಿಸಿದ್ದಾರೆ.

ಬ್ರಿಟಾನಿಯಾದ ಹೆಸರು, ಚಿಹ್ನೆ ಅಥವಾ ಪ್ಯಾಕೇಜಿಂಗ್ ಅನುಕರಿಸುವ ಯಾವುದೇ ಯತ್ನವನ್ನು ತಕ್ಷಣವೇ ನಿಲ್ಲಿಸಬೇಕು. ಏಕೆಂದರೆ ಗ್ರಾಹಕರು ಎರಡು ಬಗೆಯ ಉತ್ಪನ್ನಗಳ (ಗುಡ್ ಡೇ ಮತ್ತು ಗುಡ್ ಟೈಮ್ ಕುಕೀಸ್) ನಡುವೆ ಗೊಂದಲಕ್ಕೊಳಗಾಗುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ನುಡಿದಿದೆ.

ಮುಂದಿನ ವಿಚಾರಣೆಯ ದಿನಾಂಕದವರೆಗೆ ಪ್ರತಿವಾದಿಗಳು ಹಾಗೂ ಅವರ ಪರವಾಗಿ ಕಾರ್ಯನಿರ್ವಹಿಸುವ ಬೇರೆಲ್ಲರೂ ಬಟರ್‌ ಕುಕಿ ಬಿಸ್ಕೆಟ್‌ ಇಲ್ಲವೇ ಅರ್ಜಿದಾರ ಕಂಪೆನಿಯ ಹೆಸರನ್ನು ಹೋಲುವಂತಹ ಮೋಸಗೊಳಿಸುವಂತಹ ಉತ್ಪನ್ನಗಳ ತಯಾರಿಕೆ ಮಾರಾಟ ಮಾಡಲು ನಿರ್ಬಂಧಿತರಾಗಿರುತ್ತಾರೆ. ಪ್ರತಿವಾದಿಗಳು ಇದರ ಆನ್‌ಲೈನ್‌ ಲಭ್ಯತೆಯನ್ನೂ ಹ 48 ಗಂಟೆಗಳ ಒಳಗೆ ತೆಗೆದುಹಾಕಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಗುಡ್‌ ಟೈಮ್‌ ಬಿಸ್ಕೆಟ್‌ಗಳ ತಯಾರಕ ಅಮರ್ ಬಿಸ್ಕೆಟ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಆದೇಶ ಕೋರಿ ಬ್ರಿಟಾನಿಯಾ ಕಂಪೆನಿ ಹೈಕೋರ್ಟ್‌ ಮೊರೆ ಹೋಗಿತ್ತು. ಪ್ಯಾಕೇಜಿಂಗ್‌ ಮಾತ್ರವಲ್ಲದೆ ಉತ್ಪನ್ನದ ಬಣ್ಣದಲ್ಲೂ ಹೋಲಿಕೆ ಇದೆ ಎಂದು ಅದು ಅಳಲು ತೋಡಿಕೊಂಡಿತ್ತು