Chaayos and Delhi HC  
ಸುದ್ದಿಗಳು

ಚಾಯೋಸ್ ಹೋಲುವ ಟ್ರೇಡ್‌ಡ್ರೆಸ್‌, ಪ್ಯಾಕೇಜಿಂಗ್‌ ತಯಾರಿಸದಂತೆ ಟೀಕರಿ, ಜಸ್ಟ್ ವೇದಿಕ್‌ಗೆ ದೆಹಲಿ ಹೈಕೋರ್ಟ್ ನಿರ್ಬಂಧ

Bar & Bench

ಟೀ ಕೆಫೆ ಚಾಯೋಸ್‌ ರೀತಿಯ ಟ್ರೇಡ್‌ ಡ್ರೆಸ್‌ (ಉತ್ಪನ್ನದ ಇಡಿಯಾದ ಚಿತ್ರಣ) ಹಾಗೂ ಪ್ಯಾಕೇಜಿಂಗ್‌ ತಯಾರಿಸುವಂತಿಲ್ಲ ಎಂದು ಚಹಾ ಬ್ರ್ಯಾಂಡ್‌ಗಳಾದ ಟೀಕರಿ ಮತ್ತು ಜಸ್ಟ್ ವೇದಿಕ್‌ಗಳಿಗೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ನಿರ್ಬಂಧ ವಿಧಿಸಿದೆ [ಸನ್‌ಶೈನ್‌ ಟೀ ಹೌಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಗ್ರೇ ಮಾತ್ರಾ ಸಲ್ಯೂಷನ್ಸ್‌ ನಡುವಣ ಪ್ರಕರಣ].

ಟೀಕರಿ ಮತ್ತು ಜಸ್ಟ್ ವೇದಿಕ್‌ ಬಳಸಿದ ಪ್ಯಾಕೇಜಿಂಗ್‌ ಮತ್ತು ಪ್ಲಾಸ್ಟಿಕ್‌ ಕಂಟೇನರ್‌ಗಳು ಚಾಯೋಸ್‌ ಉತ್ಪನ್ನಗಳಿಗೆ ಹೋಲಿಕೆಯಾಗುತ್ತವೆ ಎಂದು ನ್ಯಾ. ಪ್ರತಿಭಾ ಸಿಂಗ್‌ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ.

“ಚಾಯೋಸ್‌ ವಾಣಿಜ್ಯ ಚಿಹ್ನೆಗಾಗಿ ಫಿರ್ಯಾದಿ ಹಲವು ವಾಣಿಜ್ಯ ಚಿಹ್ನೆ ನೋಂದಣಿಗಳನ್ನು ಮಾಡಿಸಿದ್ದು ಪ್ಯಾಕೇಜಿಂಗ್‌ಗಾಗಿ ಲೇಬಲ್‌/ ಚಿಹ್ನೆ ಹಕ್ಕುಗಳನ್ನು ಹೊಂದಿದೆ.ಅಪ್ರತಿವಾದಿಗಳು ನಕಲು ಮಾಡಿರುವುದು ಸ್ಪಷ್ಟವಾಗಿದೆ. ವಾಣಿಜ್ಯ ಪೋಷಾಕಿನ ವಿಶಿಷ್ಟ ಅಂಶಗಳನ್ನು ಪ್ರತಿವಾದಿಗಳು ನಕಲಿಸಿದ್ದಾರೆ. ನಕಲು ಪಟ್ಟಿಗಳು ಮತ್ತು ಅವುಗಳಲ್ಲಿ ಬಳಸಲಾದ ಅಭಿವ್ಯಕ್ತಿಗಳು ಪ್ರತಿವಾದಿಗಳ ದುರುದ್ದೇಶವನ್ನು ಸೂಚಿಸುತ್ತಿದ್ದು ಅವರು ನಕಲು ಮಾಡಲು ಮುಂದಾಗಿದ್ದಾರೆ” ಎಂದು ಚಾಯೋಸ್‌ ಪರವಾಗಿ ಮಧ್ಯಂತರ ಪರಿಹಾರ ನೀಡುವ ವೇಳೆ ನ್ಯಾಯಾಲಯ ವಿವರಿಸಿದೆ.

ಚಾಯೋಸ್ ಉತ್ಪನ್ನಗಳ ಪ್ಯಾಕೇಜಿಂಗ್ ಹೋಲುವುದರಿಂದ ಟೀಕರಿ ಮತ್ತು ಜಸ್ಟ್‌ ವೇದಿಕ್‌ ಉತ್ಪನ್ನಗಳ ಪಟ್ಟಿಯನ್ನು ಅಮೆಜಾನ್ ಇ-ವಾಣಿಜ್ಯ ವೇದಿಕೆಯಿಂದ ತೆಗೆದುಹಾಕಬೇಕು. ಹಾಗೆ ಮಾಡದಿದ್ದರೆ ಫಿರ್ಯಾದಿಯು ಪಟ್ಟಿ ತೆಗೆದುಹಾಕುವಂತೆ ನಿರ್ದಿಷ್ಟ ಯುಆರ್‌ಎಲ್‌ಗಳನ್ನು ಅಮೆಜಾನ್‌ಗೆ ಉಲ್ಲೇಖಿಸಲು ಚಾಯೋಸ್‌ ಮುಕ್ತವಾಗಿದೆ ಎಂಬುದಾಗಿ ನ್ಯಾಯಾಲಯ ತಿಳಿಸಿದೆ.

ಪ್ಯಾಕೇಜಿಂಗ್ ಅಡಿಯಲ್ಲಿ ಈಗಾಗಲೇ ತಯಾರಿಸಲಾದ ಉತ್ಪನ್ನಗಳಿಗೆ ಸಂಬಂಧಿಸಿದಂತೆ ದಾಸ್ತಾನು ಮತ್ತದರ ವಿತ್ತೀಯ ಮೌಲ್ಯದ ದಾಖಲೆ ಒದಗಿಸುವಂತೆ ನ್ಯಾಯಾಲಯ ಪ್ರತಿವಾದಿಗಳಿಗೆ ನಿರ್ದೇಶನ ನೀಡಿದೆ.

ಟೀಕರಿ ಮತ್ತು ಜಸ್ಟ್ ವೇದಿಕ್ ಎಂಬ ಬ್ರಾಂಡ್‌ ಮೂಲಕ ಆನ್‌ಲೈನ್‌ನಲ್ಲಿ ವಿವಿಧ ರೀತಿಯ ಚಹಾ ಫ್ಲೇವರ್‌ಗಳನ್ನು ಮಾರಾಟ ಮಾಡುತ್ತಿರುವ ಗ್ರೇ ಮಂತ್ರ ಸೊಲ್ಯೂಷನ್ಸ್ ವಿರುದ್ಧ ಚಾಯೋಸ್ ಸಲ್ಲಿಸಿದ ಮೊಕದ್ದಮೆಯ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪಿತ್ತಿದೆ. ಪ್ರಕರಣದ ಮುಂದಿನ ವಿಚಾರಣೆ, 2024ರ ಜನವರಿ 21ರಂದು ನಡೆಯಲಿದೆ.