Delhi High Court 
ಸುದ್ದಿಗಳು

ಖಾದಿ ವಾಣಿಜ್ಯ ಚಿಹ್ನೆ ಬಳಸದಂತೆ ಎರಡು ಖಾಸಗಿ ಸಂಸ್ಥೆಗಳಿಗೆ ದೆಹಲಿ ಹೈಕೋರ್ಟ್ ನಿರ್ಬಂಧ

ಭಾರತೀಯ ಖಾದಿ ವಿನ್ಯಾಸ ಮಂಡಳಿ ಮತ್ತು ಮಿಸ್ ಇಂಡಿಯಾ ಖಾದಿ ಪ್ರತಿಷ್ಠಾನ ತನ್ನ ವಾಣಿಜ್ಯ ಚಿಹ್ನೆ ಹಕ್ಕನ್ನು ಉಲ್ಲಂಘಿಸುತ್ತಿವೆ ಎಂದು ಆರೋಪಿಸಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಹೈಕೋರ್ಟ್ ಮೊರೆ ಹೋಗಿತ್ತು.

Bar & Bench

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ವಾಣಿಜ್ಯ ಚಿಹ್ನೆಯನ್ನು ಸ್ಪರ್ಧೆ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸುವ ಎರಡು ಖಾಸಗಿ ಸಂಸ್ಥೆಗಳು ಬಳಸದಂತೆ ದೆಹಲಿ ಹೈಕೋರ್ಟ್‌ ಇತ್ತೀಚೆಗೆ ಮಧ್ಯಂತರ ಆದೇಶ ನೀಡಿದೆ.

ಕೆವಿಐಸಿಯು ಗ್ರಾಮೀಣ ಪ್ರದೇಶಗಳಲ್ಲಿ ಖಾದಿ ಮತ್ತಿತರ ಗ್ರಾಮೋದ್ಯೋಗಗಳ ಅಭಿವೃದ್ಧಿಗಾಗಿ ರೂಪಿಸಲಾದ ಕೇಂದ್ರ ಸರ್ಕಾರದ ಸಂಸ್ಥೆಯಾಗಿದೆ. ಯೋಜನೆ, ಪ್ರಚಾರ, ಸಂಘಟನೆ ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅದು ಕಾರ್ಯನಿರ್ವಹಿಸುತ್ತದೆ.

ಭಾರತೀಯ ಖಾದಿ ವಿನ್ಯಾಸ ಮಂಡಳಿ ಮತ್ತು ಮಿಸ್‌ ಇಂಡಿಯಾ ಖಾದಿ ಪ್ರತಿಷ್ಠಾನ ಎಂಬ ಎರಡು ಸಂಸ್ಥೆಗಳು ತನ್ನ ವಾಣಿಜ್ಯ ಚಿಹ್ನೆಯನ್ನು ಉಲ್ಲಂಘಿಸಿದ್ದು ನಕಲಿನಲ್ಲಿ ತೊಡಗಿವೆ ಎಂದು ನ್ಯಾ. ಸಿ ಹರಿಶಂಕರ್‌ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ಸವಾಲಿನಲ್ಲಿರುವ ಚಿಹ್ನೆಗಳನ್ನು ಅದೇ ರೀತಿಯಲ್ಲಿ ಇಲ್ಲವೇ ಮೋಸಗೊಳಿಸುವ ರೀತಿಯಲ್ಲಿ ಪ್ರತಿವಾದಿಗಳು ಬಳಸಿದ್ದು ಮೊಕದ್ದಮೆ ಬಾಕಿ ಇರುವಾಗ ಪ್ರತಿವಾದಿ ಸಂಸ್ಥೆಗಳು ಮತ್ತು ಅವುಗಳ ಪರ ಕಾರ್ಯನಿರ್ವಹಿಸುವ ಇತರರು ನೇರ ಇಲ್ಲವೇ ಪರೋಕ್ಷವಾಗಿ ಖಾದಿ ಚಿಹ್ನೆಯನ್ನು ಅಥವಾ ಅದನ್ನು ಹೋಲುವಂತಹ ಚಿಹ್ನೆಯನ್ನು ಪದ, ವ್ಯಾಪಾರದ ಹೆಸರು ಅಥವಾ ಹೆಸರಿನ ಭಾಗವಾಗಿ ಬಳಸಲು ನಿರ್ಬಂಧ ಇರುವುದಾಗಿ ನ್ಯಾಯಾಲಯ ಹೇಳಿದೆ.

ಪ್ರತಿವಾದಿಗಳು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಸೇರಿದಂತೆ ಯಾವುದೇ ಸಾಮಾಜಿಕ ಮಾಧ್ಯಮ ಪುಟದಲ್ಲಿ ಅಥವಾ ಅವುಗಳ ಜಾಲತಾಣದಲ್ಲಿ ಖಾದಿ ವಾಣಿಜ್ಯ ಚಿಹ್ನೆಯನ್ನು ಬಳಸದಂತೆ ನಿರ್ಬಂಧ ವಿಧಿಸಲಾಗಿದೆ.

ಪ್ರತಿವಾದಿಗಳು 2019ರ ಡಿಸೆಂಬರ್‌ನಲ್ಲಿ ಗೋವಾದಲ್ಲಿ ರಾಷ್ಟ್ರೀಯ ಖಾದಿ ವಿನ್ಯಾಸಕರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮತ್ತು ಮಿಸ್‌ ಇಂಡಿಯಾ ಖಾದಿ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಅಲ್ಲಿ ತನ್ನ ವಾಣಿಜ್ಯ ಚಿಹ್ನೆಯನ್ನು ಲಾಂಛನವನ್ನಾಗಿ ಬಳಸಲಾಗಿತ್ತು ಎಂದು ತನ್ನ ಅರಿವಿಗೆ ಬಂದಿದೆ ಎಂಬುದಾಗಿ ದೂರಿ ಕೆವಿಐಸಿ ಹೈಕೋರ್ಟ್‌ ಮೊರೆ ಹೋಗಿತ್ತು.

ಮೇಲ್ನೋಟಕ್ಕೆ ಚಿಹ್ನೆ ಉಲ್ಲಂಘಿಸಿರುವುದು ಕಂಡುಬಂದಿರುವುದರಿಂದ ದಾವೆದಾರರ ಪರವಾಗಿ ಮಧ್ಯಂತರ ಆದೇಶ ನೀಡಿರುವುದಾಗಿ ತಿಳಿಸಿರುವ ಹೈಕೋರ್ಟ್‌ ಪ್ರಕರಣವನ್ನು ಮೇ 16ಕ್ಕೆ ಮುಂದೂಡಿದೆ.