ಮಾಜಿ ರಾಜತಂತ್ರಜ್ಞೆ ಲಕ್ಷ್ಮಿ ಪುರಿ ತಮ್ಮ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂದು ಮಾಡಿದ್ದ ಟ್ವೀಟ್‌ಗಳನ್ನು ಅಳಿಸಿ ಹಾಕುವಂತೆ ಪತ್ರಕರ್ತ ಸಾಕೇತ್ ಗೋಖಲೆ ಅವರಿಗೆ ದೆಹಲಿ ಹೈಕೋರ್ಟ್ ಸೂಚಿಸಿದೆ.
ಗೋಖಲೆ ಅವರು ಟ್ವೀಟ್ ಅಳಿಸಲು ವಿಫಲವಾದರೆ ಟ್ವಿಟರ್ ಸಂಸ್ಥೆ ಖುದ್ದಾಗಿ ಅವುಗಳನ್ನು ತೆಗೆದುಹಾಕಬೇಕೆಂದು ನ್ಯಾಯಮೂರ್ತಿ ಸಿ ಹರಿ ಶಂಕರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ. ಅಲ್ಲದೆ ಪುರಿ ಮತ್ತು ಅವರ ಪತಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ವಿರುದ್ಧ ಯಾವುದೇ ವೇದಿಕೆಯಲ್ಲಿ ಯಾವುದೇ ರೀತಿಯ ಮಾನಹಾನಿಕರ ವಿಷಯಗಳನ್ನು ಪ್ರಕಟಿಸುವುದಂತೆಯೂ ಗೋಖಲೆ ಅವರಿಗೆ ನಿರ್ಬಂಧ ವಿಧಿಸಲಾಗಿದೆ.
ಮುಖ್ಯ ಮೊಕದ್ದಮೆಗೆ ಸಂಬಂಧಿಸಿದಂತೆ ಸಮನ್ಸ್ ಜಾರಿಗೊಳಿಸಿದ ನ್ಯಾಯಾಲಯ ನಾಲ್ಕು ವಾರದೊಳಗೆ ಪ್ರತಿಕ್ರಿಯಿಸಲು ಕಾಲಾವಕಾಶ ನೀಡಿತು. ಬಳಿಕ ತಕರಾರು ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 10ರಂದು ನಡೆಯಲಿದೆ.
ಸ್ವಿಜರ್‌ಲೆಂಡ್‌ನಲ್ಲಿ ಮನೆ ಖರೀದಿಸಲು ಲಕ್ಷ್ಮಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಗೋಖಲೆ ಟ್ವೀಟ್ ಮಾಡಿದ್ದರು. ಅಲ್ಲದೆ ಅವರ ಪತಿ ಬಗ್ಗೆಯೂ ಟ್ವೀಟ್‌ನಲ್ಲಿ ಪ್ರಸ್ತಾಪಿಸಿದ್ದರು.
ಇತ್ತ ಲಕ್ಷ್ಮಿ ಅವರು ಟ್ವೀಟ್ ಅಳಿಸಿಹಾಕುವ ಜೊತೆಗೆ ರೂ 5 ಕೋಟಿ ಪರಿಹಾರ ಒದಗಿಸಬೇಕೆಂದು ಕೂಡ ಕೋರಿದ್ದರು. ಸುಳ್ಳು ಮಾಹಿತಿ ಆಧರಿಸಿ ಮಾನಹಾನಿಕರ ಮತ್ತು ದುರುದ್ದೇಶಪೂರ್ವಕ ಟ್ವೀಟ್‌ಗಳನ್ನು ಮಾಡಲಾಗಿದೆ ಎಂದು ಲಕ್ಷ್ಮಿ ಅವರು ಕಾನೂನು ಸಂಸ್ಥೆ ಕರಂಜವಾಲಾ ಆಂಡ್ ಕಂ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತಮ್ಮ ವಿರುದ್ಧದ ಆರೋಪಗಳು ಆಧಾರ ರಹಿತ ಎಂದು ಹೇಳಿದ್ದ ಅವರು ತಾವು ನೀಡಿದ್ದ ಸ್ಪಷ್ಟೀಕರಣದ ಹೊರತಾಗಿಯೂ ಗೋಖಲೆ ಸುಳ್ಳು ಆರೋಪ ಮಾಡುತ್ತಲೇ ಇದ್ದರು ಎಂದು ದೂರಿದ್ದರು.