delhi-high-court-says-it-will-pass-order-protecting-personality-rights-of-aiswharya-rai-bachchan 
ಸುದ್ದಿಗಳು

ಐಶ್ವರ್ಯ ರೈ ಬಚ್ಚನ್ ವ್ಯಕ್ತಿತ್ವ ಹಕ್ಕು ರಕ್ಷಣೆ: ಆದೇಶಕ್ಕೆ ಮುಂದಾದ ದೆಹಲಿ ಹೈಕೋರ್ಟ್

ತನ್ನ ಚಿತ್ರ, ಹೆಸರು ಮತ್ತು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲಾದ ಹೋಲಿಕೆಯನ್ನು ವಾಣಿಜ್ಯ ಲಾಭಕ್ಕಾಗಿ ಅನಧಿಕೃತವಾಗಿ ಬಳಸಲಾಗುತ್ತಿದೆ ಎಂದು ನಟಿ ಆರೋಪಿಸಿದ್ದರು.

Bar & Bench

ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಪ್ರಚಾರ ಮತ್ತು ವ್ಯಕ್ತಿತ್ವ ಹಕ್ಕುಗಳನ್ನು ರಕ್ಷಿಸುವ ತಡೆಯಾಜ್ಞೆ ಹೊರಡಿಸುವುದಾಗಿ ದೆಹಲಿ ಹೈಕೋರ್ಟ್ ಮಂಗಳವಾರ ತಿಳಿಸಿದೆ.

ಆನ್‌ಲೈನ್ ವೇದಿಕೆಗಳು ಮತ್ತು ವ್ಯಕ್ತಿಗಳು ಐಶ್ವರ್ಯ ಅವರ ಚಿತ್ರಗಳನ್ನು ಮಾರ್ಫಿಂಗ್ ಮಾಡುವುದು ಅಥವಾ ಅನುಮತಿಯಿಲ್ಲದೆ ಅವರ ವ್ಯಕ್ತಿತ್ವವನ್ನು ಬಳಸುವುದಕ್ಕೆ ತಡೆ ನೀಡಲಾಗುವುದು ಎಂದು ನ್ಯಾಯಮೂರ್ತಿ ತೇಜಸ್ ಕರಿಯಾ ತಿಳಿಸಿದರು.

"ಪ್ರತಿಯೊಬ್ಬ ಪ್ರತಿವಾದಿಯ ವಿರುದ್ಧವೂ ಆದೇಶ ಹೊರಡಿಸಲಾಗುತ್ತದೆ. ಮಾಡಲಾದ ಮನವಿ ವಿಸ್ತೃತವಾದುದಾಗಿದೆ. ನಾವು ಸಾಮಾನ್ಯ ಆದೇಶವನ್ನು ನೀಡುವುದು ಸಾಧ್ಯವಾದರೆ ಹಾಗೆ ಮಾಡುತ್ತೇವೆ. ಪ್ರತ್ಯೇಕವಾಗಿ ಪ್ರತಿಬಂಧಕಾಜ್ಞೆ ಹೊರಡಿಸಲಾಗುವುದು" ಎಂದು ನ್ಯಾಯಾಲಯ ಹೇಳಿದೆ.

ಐಶ್ವರ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೀಪ್ ಸೇಥಿ  ನಟಿಯ ವರ್ಚಸ್ಸು, ಹೋಲಿಕೆ ಮತ್ತು ವ್ಯಕ್ತಿತ್ವವನ್ನು ಅನಧಿಕೃತ ವ್ಯಕ್ತಿಗಳು ಸರಕು ಮಾರಾಟ ಮಾಡಲು ಮಾತ್ರವಲ್ಲದೆ ಅಶ್ಲೀಲ ಉದ್ದೇಶಗಳಿಗಾಗಿಯೂ ಬಳಸುತ್ತಿದ್ದಾರೆ ಎಂದರು.

ಇದು ಆಘಾತಕಾರಿ. ಕೃತಕ ಬುದ್ಧಿಮತ್ತೆಯಿಂದ ತಯಾರಿಸಲಾದ ಆಕೆಯ ಮಾರ್ಫ್‌ ಮಾಡಿದ ಚಿತ್ರಗಳನ್ನು ಬಳಸಲಾಗುತ್ತಿದೆ. ಆ ಚಿತ್ರಗಳು ಐಶ್ವರ್ಯ ಅವರದ್ದೇ ಎಂಬಷ್ಟು ನಿಕಟವಾಗಿವೆ. ಆಕೆಯ ಚಿತ್ರ, ವ್ಯಕ್ತಿತ್ವ ಹಾಗೂ ಹೋಲಿಕೆಯನ್ನು ಯಾರದೋ ಲೈಂಗಿಕ ತೃಷೆ ಈಡೇರಿಸಲು ಬಳಸಾಗುತ್ತಿದೆ. ಅವರ ಹೆಸರು ಮತ್ತು ಮುಖ ಬಳಸಿಕೊಂಡು ಪ್ರತಿವಾದಿಗಳು ಹಣ ಸಂಗ್ರಹಿಸುತ್ತಿದ್ದಾರೆ ಎಂದು ಸೇಥಿ ವಿವರಿಸಿದರು.

ಐಶ್ವರ್ಯಾ ನೇಷನ್ ವೆಲ್ತ್ ಎಂಬ ಸಂಸ್ಥೆ ಐಶ್ವರ್ಯಾ ಅವರ ಚಿತ್ರವನ್ನು ತನ್ನ ಲೆಟರ್‌ಹೆಡ್‌ನಲ್ಲಿ ಬಳಸಿಕೊಂಡು ಆಕೆ ಸಂಸ್ಥೆಯ ಅಧ್ಯಕ್ಷೆ ಎಂದು ಹೇಳಿಕೊಂಡಿದೆ. ಇದಕ್ಕೂ ಐಶ್ವರ್ಯ ಅವರಿಗೂ ಯಾವುದೇ ಸಂಬಂಧ ಇಲ್ಲ, ಸಂಸ್ಥೆಯೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ. ವಂಚನೆಯ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಅವರು ದೂರಿದರು.