Delhi Government school  Image for representative purpose
ಸುದ್ದಿಗಳು

ಸರ್ಕಾರಿ ಶಾಲೆಗಳಲ್ಲಿ ದಿನಕ್ಕೆ 2 ಗಂಟೆ ಮಾತ್ರ ತರಗತಿ ಆರೋಪ: ಎಎಪಿ ಸರ್ಕಾರದ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್

ಈಶಾನ್ಯ ದೆಹಲಿ ಪ್ರದೇಶದ ಸರ್ಕಾರಿ ಶಾಲೆಗಳು ಎರಡು ಗಂಟೆಗಳ ಕಾಲ ಅಥವಾ ದಿನ ಬಿಟ್ಟು ದಿನ ಮಾತ್ರ ತರಗತಿಗಳನ್ನು ನಡೆಸುತ್ತಿವೆ ಎಂದು ದೂರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

Bar & Bench

ದೆಹಲಿ ಈಶಾನ್ಯ ಜಿಲ್ಲೆಯ ಸರ್ಕಾರಿ ಶಾಲೆಗಳು ಎರಡು ಗಂಟೆಗಳ ಕಾಲ ಅಥವಾ ಪರ್ಯಾಯ ದಿನಗಳಂದು ಮಾತ್ರವೇ ತರಗತಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ (ಪಿಐಎಲ್) ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಗುರುವಾರ ಎಎಪಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ [ಸೋಷಿಯಲ್‌ ಜ್ಯೂರಿಸ್ಟ್‌, ಎ ಸಿವಿಲ್‌ ರೈಟ್ಸ್‌ ಗ್ರೂಪ್‌ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].

ಮೂರು ದಿನಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಪ್ರಕರಣವನ್ನು ಡಿಸೆಂಬರ್ 7ಕ್ಕೆ ಪಟ್ಟಿ ಮಾಡಿತು.

ಸರ್ಕಾರದ ಪರ ವಾದ ಮಂಡಿಸಿದ ವಕೀಲ ಸಂತೋಷ್ ತ್ರಿಪಾಠಿ “ಸರ್ಕಾರಕ್ಕೆ ಪರಿಸ್ಥಿತಿಯ ಅರಿವಿದ್ದು ಆ ಪ್ರದೇಶದಲ್ಲಿ ಭೂಮಿ ಮತ್ತು ಮೂಲಸೌಕರ್ಯ ಸಮಸ್ಯೆ ಇದೆಯೇ ಎಂಬುದನ್ನು ಪರಿಶೀಲಿಸುತ್ತಿದೆ. ಕೋವಿಡ್‌ ಸಾಂಕ್ರಾಮಿಕದ ಬಳಿಕ ಸಾಕಷ್ಟು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಸೇರುತ್ತಿದ್ದಾರೆ” ಎಂದು ಪ್ರತಿಪಾದಿಸಿದರು.

ಬೋಧನೆಯ ಕೊರತೆ ಈ ಪ್ರದೇಶದಲ್ಲಿ ಕಲಿಯುತ್ತಿರುವ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಪತ್ರ ಬರೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆತಂಕ ವ್ಯಕ್ತಪಡಿಸಿ ನಾಗರಿಕ ಹಕ್ಕುಗಳ ಸಂಘಟನೆಯಾದ ಸೋಶಿಯಲ್ ಜ್ಯೂರಿಸ್ಟ್‌ ಎಂಬ ಸಂಘಟನೆ  ವಕೀಲ ಕುಮಾರ್ ಉತ್ಕರ್ಷ್ ಅವರ ಮೂಲಕ ಪಿಐಎಲ್ ಸಲ್ಲಿಸಿದೆ.