Arvind Kejriwal and CBI Logo  Kejriwal image taken from Facebook
ಸುದ್ದಿಗಳು

ಅಬಕಾರಿ ನೀತಿ ಪ್ರಕರಣ: ಬಂಧನ ಪ್ರಶ್ನಿಸಿರುವ ಕೇಜ್ರಿವಾಲ್ ಮನವಿಗೆ ಸಿಬಿಐ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್

Bar & Bench

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಂಗಳವಾರ ಸಿಬಿಐ ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿ ಮಾಡಿದೆ.

ಮನವಿ ಕುರಿತಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿರುವ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಿದ್ದಾರೆ.

ಜಾರಿ ನಿರ್ದೇಶನಾಲಯ (ಇ ಡಿ) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಕೇಜ್ರಿವಾಲ್ ಅವರನ್ನು ಜೂನ್ 26 ರಂದು ಸಿಬಿಐ ಬಂಧಿಸಿತ್ತು.

ಇ ಡಿ ಪ್ರಕರಣದಲ್ಲಿ ಜೂನ್ 20 ರಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನನ್ನು ಬಳಿಕ ದೆಹಲಿ ಹೈಕೋರ್ಟ್ ತಡೆ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಜೂನ್ 26ರಂದು ಸಿಬಿಐ ಅವರನ್ನು ಬಂಧಿಸಿ, ಜೂನ್ 29 ರವರೆಗೆ ತನ್ನ ವಶಕ್ಕೆ ಪಡೆದುಕೊಂಡಿತ್ತು.

ಹೈಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ, ಕೇಜ್ರಿವಾಲ್ ಅವರು ತಮ್ಮ ಬಂಧನವು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 41 ಮತ್ತು 60 ಎ ಅಡಿಯಲ್ಲಿ ಸೂಚಿಸಲಾದ ಶಾಸನಬದ್ಧ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದಾರೆ.

ಜೂನ್ 29 ರಂದು ಸಿಬಿಐ ಕಸ್ಟಡಿ ಅವಧಿ ವಿಸ್ತರಿಸದಂತೆ ಕೋರದ ಹಿನ್ನೆಲೆಯಲ್ಲಿ ಕಸ್ಟಡಿ ಅವಧಿ ವಿಸ್ತರಿಸದಂತೆ ಕೋರದ ಹಿನ್ನೆಲೆಯಲ್ಲಿ ಜುಲೈ 12ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.

ದೆಹಲಿ ಅಬಕಾರಿ ನೀತಿ ಕರಡು ರಚನೆಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಇ ಡಿ ಮತ್ತು ಸಿಬಿಐ ಎರಡೂ ತನಿಖೆ ನಡೆಸುತ್ತಿವೆ.