ಬಂಕಿಮ್ ಚಂದ್ರ ಚಟರ್ಜಿ ಅವರ ʼಆನಂದ ಮಠʼ ಕಾದಂಬರಿಯಲ್ಲಿರುವ ಗೀತೆ ʼವಂದೇ ಮಾತರಂʼಗೆ ಕವಿ ರವೀಂದ್ರನಾಥ ಟ್ಯಾಗೋರ್ ವಿರಚಿತ ʼಜನ ಗಣ ಮನʼ ರಾಷ್ಟ್ರಗೀತೆಗೆ ನೀಡಿರುವಷ್ಟೇ ಸರಿಸಮನಾದ ಸ್ಥಾನಮಾನ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.
‘ವಂದೇ ಮಾತರಂ ಗೀತೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಐತಿಹಾಸಿಕ ಪಾತ್ರ ವಹಿಸಿದ್ದು ಅದನ್ನು ಗೌರವಿಸಬೇಕು ಮತ್ತು ರಾಷ್ಟ್ರಗೀತೆಗೆ ಸಮಾನ ಸ್ಥಾನಮಾನ ನೀಡಬೇಕು ಎಂದು ಬಿಜೆಪಿ ಮುಖಂಡ, ವಕೀಲ ಅಶ್ವಿನಿ ಉಪಾಧ್ಯಾಯ ಅವರು ಅರ್ಜಿ ಸಲ್ಲಿಸಿದ್ದರು.
ವಿಚಾರಣೆಗೂ ಮುನ್ನವೇ ಮಾಧ್ಯಮಗಳೊಂದಿಗೆ ಈ ಕುರಿತು ಮಾಹಿತಿ ಹಂಚಿಕೊಂಡದ್ದಕ್ಕೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಾಂಘಿ ಮತ್ತು ನ್ಯಾಯಮೂರ್ತಿ ಸಚಿನ್ ದತ್ತ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಅರ್ಜಿದಾರರ ಈ ನಡವಳಿಕೆ ಪ್ರಚಾರಪ್ರಿಯತೆಯ ತಂತ್ರದಂತೆ ತೋರುತ್ತದೆ ಎಂದು ಪೀಠ ಹೇಳಿತು.
ಮುಂದೆ ಇಂತಹ ವರ್ತನೆಯನ್ನು ತೋರದಂತೆ ಅರ್ಜಿದಾರರಿಗೆ ಹೇಳಿದ ಪೀಠವು, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾದ ಕಾರಣಕ್ಕೆ ಪ್ರಕರಣವನ್ನು ಆಲಿಸಲು ನಿರ್ಧರಿಸಿತು. ಕೇಂದ್ರ ಸರ್ಕಾರ ಮಾತ್ರವಲ್ಲದೆ ದೆಹಲಿ ಸರ್ಕಾರ ಮತ್ತು ಪಠ್ಯಪುಸ್ತಕಗಳನ್ನು ರೂಪಿಸುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಗೂ (ಎನ್‌ಸಿಇಆರ್‌ಟಿ) ನ್ಯಾಯಾಲಯ ಪ್ರತಿಕ್ರಿಯೆ ಕೇಳಿ ನೋಟಿಸ್ ನೀಡಿತು.