ಸಂತಾನೋತ್ಪತ್ತಿ ತಂತ್ರಜ್ಞಾನ (ನಿಯಂತ್ರಣ) ಕಾಯಿದೆ, 2021 ಮತ್ತು ಬಾಡಿಗೆ ತಾಯ್ತನ (ನಿಯಂತ್ರಣ ಕಾಯಿದೆ, 2021 ಇವುಗಳ ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಾಂಘಿ ಮತ್ತು ನ್ಯಾಯಮೂರ್ತಿ ಸಚಿನ್ ದತ್ತಾ ಅವರಿದ್ದ ವಿಭಾಗೀಯ ಪೀಠವು ಪ್ರಕರಣವು ಪರಿಗಣನಾರ್ಹವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಈ ಕುರಿತು ಪ್ರತಿಕ್ರಿಯೆ ಸಲ್ಲಿಸಲು ಆರು ವಾರಗಳ ಗಡುವು ನೀಡಿತು. ಪ್ರಕರಣದ ವಿಚಾರಣೆಯನ್ನು ನವೆಂಬರ್ 19ಕ್ಕೆ ಮುಂದೂಡಿತು.
ಕರಣ್ ಬಲರಾಜ್ ಮೆಹ್ತಾ ಮತ್ತು ಡಾ. ಪಂಖುರಿ ಚಂದ್ರ ಎಂಬುವರು ವಕೀಲ ಆದಿತ್ಯ ಸಮದ್ದಾರ್ ಮೂಲಕ ಸಲ್ಲಿಸಿರುವ ಅರ್ಜಿ ಇದಾಗಿದೆ. ಮೆಹ್ತಾ ಅವರು ಅವಿವಾಹಿತರಾಗಿದ್ದು ವೃತ್ತಿಯಿಂದ ವಕೀಲರು. ಇನ್ನು, ಪಂಖುರಿಯವರು ವಿವಾಹಿತೆಯಾಗಿದ್ದು ಖಾಸಗಿ ಶಾಲೆಯೊಂದರಲ್ಲಿ ಮನಶ್ಶಾಸ್ತ್ರ ಬೋಧಿಸುವ ಶಿಕ್ಷಕಿಯಾಗಿದ್ದಾರೆ. ಈ ಇಬ್ಬರೂ ಮಕ್ಕಳನ್ನು ಪಡೆಯಲು ಬಾಡಿಗೆ ತಾಯ್ತನದ ಮೊರೆ ಹೋಗಬಯಸಿದ್ದರು.
ಆದರೆ, ಕಾಯಿದೆಗಳ ಕೆಲವು ನಿಬಂಧನೆಗಳು ಎಲ್ಲ ರೀತಿಯ ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನವನ್ನು ನಿರ್ಬಂಧಿಸುತ್ತವೆ. ಕೇವಲ ಪ್ರಾಮಾಣಿಕವಾದ ಬಾಡಿಗೆ ತಾಯ್ತನಕ್ಕೆ ಮಾತ್ರವೇ ಅವಕಾಶ ಕಲ್ಪಿಸುತ್ತವೆ. ಆ ಮೂಲಕ ಅರ್ಜಿದಾರರು ಬಾಡಿಗೆ ತಾಯ್ತನದ ಮುಖಾಂತರ ಮಕ್ಕಳನ್ನು ಹೊಂದುವ ಆಯ್ಕೆಯನ್ನು ಕಸಿದುಕೊಳ್ಳುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.