A1
A1
ಸುದ್ದಿಗಳು

ಇ- ಕಣ್ಗಾವಲು ಮಾಹಿತಿ ಬಹಿರಂಗ: ಕೇಂದ್ರದ ಮಾಹಿತಿ ಕೇಳಿದ ದೆಹಲಿ ಹೈಕೋರ್ಟ್

Bar & Bench

ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ) ಅಡಿಯಲ್ಲಿ ಸರ್ಕಾರಿ ಪ್ರಾಯೋಜಿತ ಎಲೆಕ್ಟ್ರಾನಿಕ್ ಕಣ್ಗಾವಲು ಕುರಿತ ಮಾಹಿತಿ ನೀಡುವಂತೆ ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್‌ ಕೇಳಿದೆ [ಅಪಾರ್‌ ಗುಪ್ತಾ ಮತ್ತು ಕೇಂದ್ರ ಮಾಹಿತಿ ಆಯೋಗ, ಗೃಹ ವ್ಯವಹಾರಗಳ ಸಚಿವಾಲಯ ನಡುವಣ ಪ್ರಕರಣ].

ಕೇಂದ್ರ ಸರ್ಕಾರದ ಸ್ಥಾಯಿ ವಕೀಲ ಅನುರಾಗ್ ಅಹ್ಲುವಾಲಿಯಾ ಅವರಿಗೆ ಉತ್ತರ ನೀಡುವಂತೆ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ತಿಳಿಸಿದ್ದಾರೆ. ಮುಂದಿನ ಎರಡು ವಾರಗಳಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.

ವಕೀಲ ಮತ್ತು ಇಂಟರ್ನೆಟ್ ಫ್ರೀಡಂ ಫೌಂಡೇಶನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅಪಾರ ಗುಪ್ತಾ ಅವರು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69ರ ಅಡಿಯಲ್ಲಿ ಜನವರಿ 2016 ಮತ್ತು ಡಿಸೆಂಬರ್ 2018 ರ ನಡುವೆ ಹೊರಡಿಸಲಾದ ಆದೇಶಗಳ ವಿವರಗಳನ್ನು ಆರ್‌ಟಿಐ ಕಾಯಿದೆಯಡಿ ಕೋರಿದ್ದರು. ಆದರೆ ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ದೊರೆತಿಲ್ಲ.

ವಿವಿಧ ತನಿಖಾ ಏಜೆನ್ಸಿಗಳಿಂದ ಎಲೆಕ್ಟ್ರಾನಿಕ್‌ ಕಣ್ಗಾವಲಿಗಾಗಿ ಬಂದ ಕೋರಿಕೆಗಳು, ಅನುಮತಿ ನೀಡಲಾಗದ ಕೋರಿಕೆಗಳು, ಹದಿನೈದು ದಿನಕ್ಕಿಂತ ಹೆಚ್ಚು ಅವಧಿಗೆ ಕಣ್ಗಾವಲಿಗಾಗಿ ಸಲ್ಲಿಸಿರುವ ಕೋರಿಕೆಗಳು ಮತ್ತಿತರೆ ವಿವರಗಳನ್ನು ಕೋರಲಾಗಿತ್ತು.

ಸರ್ಕಾರದ ಕಣ್ಗಾವಲಿನ ವ್ಯಾಪ್ತಿ ಅರ್ಥ ಮಾಡಿಕೊಳ್ಳುವ ಸಲುವಾಗಿ ತಾವು ಒಟ್ಟಾರೆ ಸಂಖ್ಯೆಯನ್ನು ಕೇಳುತ್ತಿದ್ದು ಯಾವುದೇ ವೈಯಕ್ತಿಕ ಮಾಹಿತಿ ಕೇಳಿಲ್ಲ. ಆದರೂ, ಕೇಂದ್ರ ಸಾರ್ವಜನಿಕ ಮಾಹಿತಿ ಕಚೇರಿ ವಿವರ ನೀಡಲು ಒಪ್ಪಿರಲಿಲ್ಲ. ಪ್ರಥಮ ಮೇಲ್ಮನವಿ ಪ್ರಾಧಿಕಾರವೂ ಸ್ಪಂದಿಸಿರಲಿಲ್ಲ. ಆದರೆ ಕೇವಲ ಸಂಖ್ಯಾತ್ಮಕ ವಿವರಗಳಾಗಿರುವುದರಿಂದ ಅದನ್ನು ಒದಗಿಸುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಸೂಚಿಸಿತ್ತು.

ಪ್ರತಿ ಆರು ತಿಂಗಳಿಗೊಮ್ಮೆ ಕಣ್ಗಾವಲು ವಿವರಗಳನ್ನು ಅಳಿಸಿಹಾಕುವುದರಿಂದ ಅವು ಲಭ್ಯವಿಲ್ಲ ಎಂದು ಸಿಪಿಐಒ ಹೇಳಿದ್ದರು. ಇದನ್ನು ಮತ್ತೆ ಗುಪ್ತಾ ಸಿಐಸಿಯಲ್ಲಿ ಪ್ರಶ್ನಿಸಿದ್ದರು. ಆದರೆ ಸೂಕ್ತ ಉತ್ತರ ದೊರೆಯದಿದ್ದುದರಿಂದ ಅವರು ಹೈಕೋರ್ಟ್‌ ಮೊರೆ ಹೋಗಿದ್ದಾರೆ.