ಸಂಸತ್ ರೂಪಿಸಿರುವ ಅಪರಾಧಿಗಳ ಹಸ್ತಾಂತರ ಕಾಯಿದೆ ವ್ಯಾಪ್ತಿಗೆ ಭಾರತ ಮತ್ತು ಅರಬ್ ಸಂಯುಕ್ತ ಸಂಸ್ಥಾನದ ಹಸ್ತಾಂತರ ಒಪ್ಪಂದ ಒಳಪಟ್ಟಿದೆ ಎಂದು ಘೋಷಿಸುವಂತೆ ಅಗಸ್ಟಾವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದ ಆರೋಪಿ ಕ್ರಿಶ್ಚಿಯನ್ ಮಿಶೆಲ್ ಸಲ್ಲಿಸಿದ್ದ ಅರ್ಜಿ ಸಂಬಂಧ ದೆಹಲಿ ಹೈಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಗೃಹ ಸಚಿವಾಲಯ, ವಿದೇಶಾಂಗ ಸಚಿವಾಲಯ, ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳು ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿಗಳಾದ ವಿವೇಕ್ ಚೌಧರಿ ಮತ್ತು ಮನೋಜ್ ಜೈನ್ ಅವರಿದ್ದ ವಿಭಾಗೀಯ ಪೀಠ ಸೂಚಿಸಿದೆ.
ಪ್ರತಿವಾದಿಗಳು ಅರ್ಜಿಯ ನಿರ್ವಹಣೆ ಕುರಿತು ಆಕ್ಷೇಪ ವ್ಯಕ್ತಪಡಿಸಬಹುದು ಎಂದು ಪೀಠ ಹೇಳಿದ್ದು ಮುಂದಿನ ವಿಚಾರಣೆ ಜನವರಿ 9 ರಂದು ನಡೆಯಲಿದೆ.
ಸ್ಪಷ್ಟವಾಗಿ ಪಟ್ಟಿ ಮಾಡದ ಅಪರಾಧಕ್ಕೆ ಸಂಬಂಧಿಸಿದಂತೆ ಹಸ್ತಾಂತರಗೊಂಡ ವ್ಯಕ್ತಿಯ ವಿಚಾರಣೆ ನಡೆಸದಂತೆ ಹಸ್ತಾಂತರ ಕಾಯಿದೆಯ ಸೆಕ್ಷನ್ 21 ಹೇಳುತ್ತದೆ. ಕಾಯಿದೆಯ ವ್ಯಾಪ್ತಿಗೆ ಭಾರತ ಮತ್ತು ಅರಬ್ ಸಂಯುಕ್ತ ಸಂಸ್ಥಾನದ ಹಸ್ತಾಂತರ ಒಪ್ಪಂದ ಒಳಪಟ್ಟಿದೆ ಎಂದು ಘೋಷಿಸಬೇಕು. ಆದರೆ ಒಪ್ಪಂದ ಸ್ಪಷ್ಟವಲ್ಲದ ಅಪರಾಧ ಪ್ರಕರಣಗಳ ತನಿಖೆಗೂ ಅವಕಾಶ ಮಅಡಿಕೊಡುತ್ತದೆ ಹೀಗಾಗಿ ಒಪ್ಪಂದಕ್ಕಿಂತಲೂ ದೇಶಿಯವಾದ ಕಾಯಿದೆಗೆ ಆದ್ಯತೆ ಇದೆ ಎಂದು ನ್ಯಾಯಾಲಯ ಘೋಷಿಸಬೇಕು ಎಂಬುದಾಗಿ ಮಿಶೆಲ್ ಕೋರಿದ್ದಾರೆ.
ಜೈಲಿನಲ್ಲಿ ಕಳೆದಿರುವ ಅವಧಿ ಗರಿಷ್ಠ ಶಿಕ್ಷೆಯ ಅರ್ಧಕ್ಕಿಂತ ಹೆಚ್ಚಾದಾಗ, ವಿಚಾರಣೆ ಇನ್ನೂ ಮುಗಿಯದಿದ್ದರೂ, ಆರೋಪಿಯನ್ನು ಬಿಡುಗಡೆ ಮಾಡಲು ಅನುವು ಮಾಡಿಕೊಡುವ ಸಿಆರ್‌ಪಿಸಿ ಸೆಕ್ಷನ್ 436 ಎ ಅಡಿ ಬಿಡುಗಡೆ ಮಾಡಬೇಕು ಎಂದು ಕೋರಿದ್ದ ಅರ್ಜಿಯನ್ನು ಆಗಸ್ಟ್ 7ರಂದು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಆ ಆದೇಶವನ್ನು ಪ್ರಶ್ನಿಸಿರುವ ಮಿಶೆಲ್ ತಾನು ಈಗಾಗಲೇ ಗರಿಷ್ಠ ಶಿಕ್ಷೆಗೆ ಸಮಾನವಾದ ಅವಧಿಯನ್ನು ಜೈಲಿನಲ್ಲಿ ಕಳೆದಿದ್ದೇನೆ. ಆದ್ದರಿಂದ ಬಿಡುಗಡೆ ಮಾಡಲೇಬೇಕು ಎಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.
ಬ್ರಿಟಿಷ್ ಪ್ರಜೆಯಾದ ಮಿಶೆಲ್‌ನನ್ನು ಡಿಸೆಂಬರ್ 4, 2018 ರಂದು ದುಬೈನಿಂದ ಗಡೀಪಾರು ಮಾಡಲಾಗಿದ್ದು ಅಂದಿನಿಂದ ಆತ ಸೆರೆವಾಸ ಅನುಭವಿಸುತ್ತಿದ್ದಾರೆ.