toll booth
toll booth 
ಸುದ್ದಿಗಳು

ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಗಳಿಗೆ ಡಬಲ್ ಟೋಲ್ ತೆರಿಗೆ: ಕೇಂದ್ರದ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್

Bar & Bench

ಸಕ್ರಿಯ ಫಾಸ್ಟ್‌ಟ್ಯಾಗ್ ಇಲ್ಲದ ಪ್ರಯಾಣಿಕರು ದುಪ್ಪಟ್ಟು ಟೋಲ್‌ ಶುಲ್ಕ ಪಾವತಿಸುವ ಕ್ರಮ ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಶುಕ್ರವಾರ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರತಿಕ್ರಿಯೆ ಕೇಳಿದೆ [ರವೀಂದ್ರ್‌ ತ್ಯಾಗಿ ಮತ್ತು ಎನ್‌ಎಚ್‌ಎಐ ನಡುವಣ ಪ್ರಕರಣ].

ಈ ಸಂಬಂಧ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರಿದ್ದ ಪೀಠ ನಾಲ್ಕು ವಾರಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ. ಏಪ್ರಿಲ್ 18ರಂದು ಪ್ರಕರಣದ ವಿಚಾರಣೆ ನಡೆಯಲಿದೆ.

ದುಪ್ಪಟ್ಟು ಟೋಲ್‌ ಪಾವತಿಸುವಂತೆ ಪ್ರಯಾಣಿಕರನ್ನು ಒತ್ತಾಯಿಸುವುದು ತಾರತಮ್ಯ ಮತ್ತು ಮನಸೋಇಚ್ಛೆಯಿಂದ ಕೂಡಿದ್ದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿ ರವೀಂದರ್ ತ್ಯಾಗಿ ಎಂಬ ನ್ಯಾಯವಾದಿ ವಕೀಲ ಪ್ರವೀಣ್ ಅಗರವಾಲ್ ಅವರ ಮೂಲಕ ಅರ್ಜಿ ಸಲ್ಲಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹಣೆ) ತಿದ್ದುಪಡಿ ನಿಯಮಾವಳಿ-2020ರ 6 ರ ಉಪ-ನಿಯಮ (3) ರ ಎರಡನೇ ನಿಬಂಧನೆ, ಜುಲೈ 19, 2019ರಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪ್ರಕಟಿಸಿದ್ದ ಪತ್ರ ಹಾಗೂ ಮಾರ್ಚ್‌ 3 2021ರಂದು ಎನ್‌ಎಚ್‌ಎಐ ಹೊರಡಿಸಿದ್ದ ಸುತ್ತೋಲೆಯನ್ನು ಅವರು ಪ್ರಶ್ನಿಸಿದ್ದಾರೆ.

ಯಾವುದೇ ಗುರಿಸಾಧನೆಯ ಉದ್ದೇಶವಿಲ್ಲದೆ ದೇಶಾದ್ಯಂತ ಸರಕು ಸಾಗಣೆ ಮತ್ತು ಪ್ರಯಾಣಿಕರ ಸಂಚಾರದ ಮೇಲೆ ಸರ್ಕಾರ ಅವಿವೇಕದ ನಿರ್ಬಂಧಗಳನ್ನು ವಿಧಿಸಿದೆ. ಪ್ರಯಾಣಿಕರಿಗೆ ಎನ್‌ಎಚ್‌ಎಐ ಮತ್ತು ಸಚಿವಾಲಯ ನೀಡುತ್ತಿರುವ ಸೇವೆ ಒಂದೇ ಆಗಿದ್ದು ದುಪ್ಪಟ್ಟು ಮೊತ್ತ ಸಂಗ್ರಹಿಸುವುದರಲ್ಲಿ ಯಾವುದೇ ತರ್ಕವಿಲ್ಲ ಎಂದು ಅರ್ಜಿ ಹೇಳಿದೆ. 

ಆಡಳಿತಾತ್ಮಕ ಅನುಕೂಲದ (ಆನ್‌ಲೈನ್‌ ಮೂಲಕ ಟೋಲ್‌ ಸಂಗ್ರಹಣೆ ಮಾಡುವುದು) ಕಾರಣ ನೀಡಿ ಸರ್ಕಾರವು ತಾರತಮ್ಯವನ್ನು ಎಸಗಬಾರದು. ಅಂತಹ ಕಾರಣಗಳು ಯಾವುದೇ ನಿಯಮ, ಆದೇಶ, ಅಧಿಸೂಚನೆ, ಸುತ್ತೋಲೆಗಳನ್ನು ಹೊರಡಿಸಲು ಆಧಾರವಾಗಬಾರದು ಎಂದು ಮನವಿಯಲ್ಲಿ ವಿವರಿಸಲಾಗಿದೆ.