ನಾಗರಿಕ ವಿಮಾನಯಾನ ಅವಶ್ಯಕತೆ (ಸಿಎಆರ್) 2024 ನಿಯಮಾವಳಿಗೆ ಹೊಂದಿಕೆಯಾಗದ ಪೈಲಟ್ ವಿಶ್ರಾಂತಿ ಯೋಜನೆಗಳಿಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅನುಮೋದನೆ ನೀಡಿದೆ ಎಂದು ದೂರಿ ಭಾರತೀಯ ಪೈಲಟ್ಗಳ ಒಕ್ಕೂಟ (ಎಫ್‌ಐಪಿ) ಮತ್ತು ಭಾರತೀಯ ಪೈಲಟ್‌ಗಳ ಸಂಘ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ಡಿಜಿಸಿಎ ಪ್ರತಿಕ್ರಿಯೆ ನೀಡುವಂತೆ ದೆಹಲಿ ಹೈಕೋರ್ಟ್ ಮಂಗಳವಾರ ಆದೇಶಿಸಿದೆ [ಭಾರತೀಯ ಪೈಲಟ್ಗಳ ಒಕ್ಕೂಟ ಮತ್ತು ಫೈಜ್ ಅಹ್ಮದ್ ಕಿದ್ವಾಯಿ ನಡುವಣ ಪ್ರಕರಣ].
ಈ ಸಂಬಂಧ ಡಿಜಿಸಿಎಗೆ ನೋಟಿಸ್ ಜಾರಿ ಮಾಡಿದ ನ್ಯಾಯಮೂರ್ತಿ ಅಮಿತ್ ಶರ್ಮಾ ಅವರು ಏಪ್ರಿಲ್ 2026ರಲ್ಲಿ ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿದರು.
ಪೈಲಟ್‌ಗಳ ದಣಿವು ಶಮನ ಹಾಗೂ ವಿಮಾನಯಾನ ಸುರಕ್ಷತೆ ಉದ್ದೇಶದಿಂದ ಜಾರಿಗೊಳಿಸಲಾದ ಹಾರಾಟ ಮತ್ತು ಕರ್ತವ್ಯ ಸಮಯ ಮಿತಿ ನಿಯಮಾವಳಿ ಜಾರಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನಲ್ಲಿ ಬಹುಕಾಲದಿದಂದ ನಡೆಯುತ್ತಿರುವ ಪ್ರಕರಣಕ್ಕೆ ಹೊಂದಿಕೊಂಡಂತೆ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲಾಗಿತ್ತು.
ಜಾಗತಿಕ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ದೇಶದ ಪೈಲಟ್‌ಗಳ ಆಯಾಸ ನಿರ್ವಹಣಾ ನಿಯಮಾವಳಿಯನ್ನು ಸರಿದೂಗಿಸಬೇಕು ಎಂದು ಕೋರಿ 2012ರಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು.
ಏಪ್ರಿಲ್ 2025ರಲ್ಲಿ ನಾಗರಿಕ ವಿಮಾನಯಾನ ಅವಶ್ಯಕತೆ ನಿಯಮಾವಳಿ 2024 ಅಧಿಸೂಚನೆ ಪ್ರಕ್ರಿಯೆ ಆರಂಭಗೊಂಡಿದೆ ಎಂಬುದನ್ನು ದಾಖಲಿಸಿಕೊಂಡಿದ್ದ ದೆಹಲಿ ಹೈಕೋರ್ಟ್ ವಿಮಾನಯಾನ ಸಂಸ್ಥೆಗಳು ಆಯಾಸ ನಿರ್ವಹಣಾ ಯೋಜನೆಗಳ ವಿವರವನ್ನು ಡಿಜಿಸಿಎಗೆ ಸಲ್ಲಿಸುವಂತೆ ಸೂಚಿಸಿತ್ತು. ಯೋಜನೆ ಜಾರಿಗೆ ಬಾರದೆ ಇದ್ದರೆ ಪೈಲಟ್ ಸಂಘಟನೆಗಳು ಸೂಕ್ತ ನ್ಯಾಯಾಲಯದ ಮೊರೆ ಹೋಗಬಹುದು ಎಂದು ತಿಳಿಸಿತ್ತು.
ಆದರೆ ನವೆಂಬರ್ 2025ರಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ ಭಾರತೀಯ ಪೈಲಟ್ಗಳ ಒಕ್ಕೂಟ ನ್ಯಾಯಾಲಯದ ನಿರ್ದೇಶನಗಳನ್ನು ಡಿಜಿಸಿಎ ಉದ್ದೇಶಪೂರ್ವಕವಾಗಿ ಕಡೆಗಣಿಸಿದ್ದು 2024ರ ನಿಯಮಾವಳಿಗೆ ವಿರುದ್ಧವಾಗಿ ಹಲವು ವಿಮಾನ ಸಂಸ್ಥೆಗಳಿಗೆ ಸಂಸ್ಥೆಗಳಿಗೆ ಪೈಲಟ್‌ಗಳ ಕರ್ತವ್ಯ ಅವಧಿ ವಿಸ್ತರಣೆ ಅಥವಾ ಸಡಿಲಿಕೆಯ ಅಧಿಕಾರ ನೀಡಲಾಗಿದೆ ಎಂದು ದೂರಿತು. ಏರ್ ಇಂಡಿಯಾ, ಇಂಡಿಗೋ, ಸ್ಪೈಸ್‌ಜೆಟ್, ಅಲಯನ್ಸ್ ಏರ್, ಆಕಾಶ ಏರ್ ಸೇರಿದಂತೆ ಸರಕು ಸಾಗಣೆ ವಿಮಾನ ಸಂಸ್ಥೆಗಳಿಗೂ ಈ ಸಡಿಲಿಕೆ ಇದೆ ಎಂದು ಅರ್ಜಿ ಹೇಳಿತ್ತು. ಯಾವುದೇ ವಿಶೇಷ ಪರಿಸ್ಥಿತಿ ಇಲ್ಲದಿದ್ದರೂ ಪೈಲಟ್‌ಗಳು ವಿಶ್ರಾಂತಿ ರಹಿತವಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದ್ದು ಪ್ರಯಾಣಿಕರ ಸುರಕ್ಷತೆಗೆ ಅಪಾಯ ಉಂಟಾಗಿದೆ ಎಂದು ಸಂಘಟನೆಗಳು ವಾದಿಸಿದ್ದವು.
ಆದರೆ ಸಿಎಆರ್ ಎತ್ತಿಹಿಡಿಯುವ ನ್ಯಾಯಾಲಯದ ನಿರ್ದೇಶನ ಇಲ್ಲದಿರುವಾಗ ವಿಮಾನ ಕಾಯಿದೆ ಮತ್ತು ನಿಯಮಾವಳಿಗಳ ಅಡಿ ತಾತ್ಕಾಲಿಕ ಸಡಿಲಿಕೆ ಮಾಡುವ ಅಧಿಕಾರ ತನಗೆ ಇದೆ ಎಂದು ಡಿಜಿಸಿಎ ವಾದಿಸಿತು.
ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ, ಅಫಿಡವಿಟ್ ನಂತರ ಮಾಡಲಾದ ಸಡಿಲಿಕೆಗಳು ನ್ಯಾಯಾಂಗ ನಿಂದನೆ ಎನಿಸಿಕೊಳ್ಳುತ್ತವೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ ಎಂದಿತು. ಅಂತೆಯೇ ಡಿಜಿಸಿಎಗೆ ನೋಟಿಸ್ ಜಾರಿ ಮಾಡಿದ ನ್ಯಾಯಾಲಯ ನ್ಯಾಯಾಂಗ ನಿಂದನೆ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿತು.