ತಮ್ಮ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಪ್ರಶ್ನಿಸಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಬುಧವಾರ ಜಾರಿ ನಿರ್ದೇಶನಾಲಯಕ್ಕೆ (ಇ ಡಿ) ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಮುಕ್ತಾ ಗುಪ್ತ ಮತ್ತು ಅನೀಶ್ ದಯಾಳ್ ಅವರಿದ್ದ ವಿಭಾಗೀಯ ಪೀಠ, ಮನವಿಗೆ ಪ್ರತಿಕ್ರಿಯಿಸಲು ಇ ಡಿಗೆ ಡಿಸೆಂಬರ್ 15ರವರೆಗೆ ಕಾಲಾವಕಾಶ ನೀಡಿದೆ.
ಆದರೆ ತಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನಿರ್ದೇಶಿಸಲು ಶಿವಕುಮಾರ್ ಅವರು ಅರ್ಜಿ ಸಲ್ಲಿಸಿರದ ಹಿನ್ನೆಲೆಯಲ್ಲಿ ಆ ಕುರಿತು ಯಾವುದೇ ಆದೇಶವನ್ನು ನ್ಯಾಯಾಲಯ ನೀಡಲಿಲ್ಲ.
2018ರಲ್ಲಿ ದಾಖಲಾದ ಪ್ರಕರಣವನ್ನು ಈಗಾಗಲೇ ತನಿಖೆ ನಡೆಸಿರುವ ಇ ಡಿ ಅದೇ ಅಪರಾಧ ಕುರಿತ ಮರುತನಿಖೆ ನಡೆಸುತ್ತಿದೆ ಎಂದು ಶಿವಕುಮಾರ್ ನ್ಯಾಯಾಲಯದ ಮೆಟ್ಟಿಲೇರಿದ್ದರು.
2018ರ ವಿಧೇಯ ಅಪರಾಧದಲ್ಲಿ (ವಿಸ್ತೃತ ಅಪರಾಧದ ಭಾಗ) ಶಿವಕುಮಾರ್ ಅವರು ಕರ್ನಾಟಕದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಅವಧಿಯಲ್ಲಿ ಗಳಿಸಿದ ಅಕ್ರಮ ಹಣವನ್ನು ಸಕ್ರಮಗೊಳಿಸಲು ಇತರರೊಂದಿಗೆ ಸಂಚು ರೂಪಿಸಿದ್ದಾರೆ ಎನ್ನಲಾಗಿತ್ತು. ಆದರೆ, ಮತ್ತೆ 2013ರಿಂದ 2018ರ ನಡುವಿನ ಅವಧಿಯಲ್ಲಿ ಶಿವಕುಮಾರ್ ತಮ್ಮ ಆದಾಯದ ಮೂಲಗಳಿಗೆ ಅಸಮಾನವಾಗಿ ಆಸ್ತಿ ಹೊಂದಿದ್ದಾರೆ ಎಂದು ಎರಡನೇ ಇಸಿಐಆರ್‌ನಲ್ಲಿ ಹೇಳಲಾಗಿದೆ. ಹೀಗೆ ಒಂದೇ ಅವಧಿಗೆ ಸಂಬಂಧಿಸಿದಂತೆ ಪಿಎಂಎಲ್ ಕಾಯಿದೆಯಡಿ ಎರಡೂ ಪ್ರಕರಣಗಳಲ್ಲಿ ತನಿಖೆಗೆ ಮುಂದಾಗಿರುವುದು ಸ್ಪಷ್ಟವಾಗುತ್ತದೆ. ಹೀಗಾಗಿ ಇದು ಸಂವಿಧಾನ ಒದಗಿಸಿರುವ 20(2) ಮತ್ತು 21ನೇ ವಿಧಿಯ ಉಲ್ಲಂಘನೆ ಎಂದು ಮನವಿ ತಿಳಿಸಿತ್ತು.
ಪಿಎಂಎಲ್ ಕಾಯಿದೆಯಡಿ ಸೂಚಿಸಲಾದ ವಿಧೇಯ ಅಪರಾಧ ಪಟ್ಟಿಯಲ್ಲಿರುವ ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 13 ಅನ್ನು ಒಳಗೊಂಡಿರುವ 2009ರ ಅಕ್ರಮ ಹಣ ವರ್ಗಾವಣೆ ತಡೆ (ತಿದ್ದುಪಡಿ) ಕಾಯಿದೆಯ ಸೆಕ್ಷನ್ 13 ಅನ್ನು ಅರ್ಜಿ ಪ್ರಶ್ನಿಸಿದೆ.
ಶಿವಕುಮಾರ್ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್, ಈ ಸೆಕ್ಷನ್ ಬಹಳ ಆಕರ್ಷಕ ಪ್ರಶ್ನೆ ಎತ್ತುತ್ತದೆ ಏಕೆಂದರೆ ಒಮ್ಮೆ ಆಸ್ತಿಯನ್ನು ಅಸಮರೂಪದಲ್ಲಿ ಗಳಿಸಿದ ಆಸ್ತಿ ಎಂದು ತೀರ್ಮಾನಿಸಿದರೆ ಅಕ್ರಮ ಹಣ ವರ್ಗಾವಣೆ ಸಾಧ್ಯವಾಗುವುದಿಲ್ಲ ಎಂದು ವಾದಿಸಿದರು. "ವಿಧೇಯ ಅಪರಾಧದ ಅಡಿ ಒಮ್ಮೆ ಕಾನೂನುಬಾಹಿರ ಮಾರ್ಗದಿಂದ ಪಡೆದ ಹಣವನ್ನು ಅಸಮಾನ ಆಸ್ತಿಯ ಖರೀದಿಯಲ್ಲಿ ತೊಡಗಿಸಿದ ಮೇಲೆ, ಅಕ್ರಮ ಹಣ ವರ್ಗಾವಣೆಯ ಮತ್ತಷ್ಟು ಅಪರಾಧಗಳನ್ನು ಹೂಡಲು ಸಾಧ್ಯವಾಗದು," ಎಂದು ಅವರು ವಾದಿಸಿದರು.