ದೆಹಲಿಯ ಕಲ್ಕಾಜಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅತಿಶಿ ಅವರಿಗೆ ದೆಹಲಿ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ.
ಅತಿಶಿ ಅವರ ಕ್ಷೇತ್ರದ ಮತದಾರರಾದ ಕಮಲ್‌ಜಿತ್ ಸಿಂಗ್ ದುಗ್ಗಲ್ ಮತ್ತು ಆಯುಷ್ ರಾಣಾ ಅವರು ಸಲ್ಲಿಸಿದ್ದ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರು ವಿರೋಧ ಪಕ್ಷದ ಹಾಲಿ ನಾಯಕಿಯೂ ಆಗಿರುವ ಅತಿಶಿ ಅವರಿಗೆ ನೋಟಿಸ್ ಜಾರಿ ಮಾಡಿದರು.
ಕಳೆದ ಫೆಬ್ರವರಿಯಲ್ಲಿ ನಡೆದ ಚುನಾವಣೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಂರಕ್ಷಿಸುವಂತೆ ಭಾರತದ ಚುನಾವಣಾ ಆಯೋಗ, ಚುನಾವಣಾ ಅಧಿಕಾರಿ ಮತ್ತು ದೆಹಲಿ ಪೊಲೀಸರಿಗೆ ನ್ಯಾಯಾಲಯ ಇದೇ ವೇಳೆ ನಿರ್ದೇಶನ ನೀಡಿತು. ಪ್ರಕರಣದ ಮುಂದಿನ ವಿಚಾರಣೆ ಜುಲೈ 30ರಂದು ನಡೆಯಲಿದೆ.
ವಿಧಾನಸಭಾ ಚುನಾವಣೆ ವೇಳೆ ಅತಿಶಿ ಮತ್ತು ಅವರ ಚುನಾವಣಾ ಪ್ರತಿನಿಧಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
ನಿರ್ದಿಷ್ಟವಾಗಿ ಹೇಳುವುದಾದರೆ, ಮತದಾನಕ್ಕೆ ಒಂದು ದಿನ ಮೊದಲು, ಕಲ್ಕಾಜಿ ಕ್ಷೇತ್ರದಲ್ಲಿ ಅತಿಶಿ ಅವರ ಆಪ್ತರು ₹5 ಲಕ್ಷ ನಗದು ಸಹಿತ ಸಿಕ್ಕಿಬಿದ್ದಿದ್ದಾರೆ. ಈ ಹಣವನ್ನು ಮತ ಖರೀದಿಸಲು ಅಥವಾ ಮತದಾರರಿಗೆ ಲಂಚ ನೀಡಲು ಉದ್ದೇಶಿಸಲಾಗಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ವಿರುದ್ಧ ಎಎಪಿ ಕಾರ್ಯಕರ್ತರು "ಸುಳ್ಳು ಹೇಳಿಕೆ" ಪ್ರಕಟಿಸಿದ್ದಾರೆ. ಆಗಿನ ಮುಖ್ಯಮಂತ್ರಿ ತಮ್ಮ ಚುನಾವಣಾ ಲಾಭಕ್ಕಾಗಿ ಸಾರ್ವಜನಿಕ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕೂಡ ಅರ್ಜಿಯಲ್ಲಿ ಆರೋಪಿಸಲಾಗಿದೆ.