CLAT and Delhi HC
CLAT and Delhi HC 
ಸುದ್ದಿಗಳು

ಪ್ರಾದೇಶಿಕ ಭಾಷೆಗಳಲ್ಲಿ ಸಿಎಲ್ಎಟಿ 2024: ಬಿಸಿಐ, ಎನ್ಎಲ್‌ಯು ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್

Bar & Bench

ಮುಂದಿನ ವರ್ಷ ಅಂದರೆ 2024ನೇ ಸಾಲಿನ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯನ್ನು (ಸಿಎಲ್‌ಎಟಿ- 2024) ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಪಟ್ಟಿ ಮಾಡಲಾದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ನಡೆಸಬೇಕು ಎಂಬ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಬುಧವಾರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ (ಎನ್‌ಎಲ್‌ಯು) ಮತ್ತು ಭಾರತೀಯ ವಕೀಲರ ಪರಿಷತ್ತಿಗೆ (ಬಿಸಿಐ) ನೋಟಿಸ್ ಜಾರಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್‌ ಅವರಿದ್ದ ವಿಭಾಗೀಯ ಪೀಠ ಅರ್ಜಿಗೆ ಪ್ರತಿಕ್ರಿಯೆ ನೀಡಲು ಅಧಿಕಾರಿಗಳಿಗೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆ ಮೇ 19ರಂದು ನಡೆಯಲಿದೆ.

ಕಾನೂನು ಶಿಕ್ಷಣಕ್ಕೆ ಪ್ರವೇಶವನ್ನು ಹೆಚ್ಚಿಸುವ ಮೂಲಕ ವೈವಿಧ್ಯತೆಯನ್ನು ತರುವ (ಇನ್‌ಕ್ರೀಸಿಂಗ್‌ ಅಕ್ಸೆಸ್‌ ಟು ಲೀಗಲ್‌ ಎಜುಕೇಷನ್‌- ಐಡಿಐಎ) ಟ್ರಸ್ಟ್‌ನ ಸಮೀಕ್ಷೆಯನ್ನು ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿ ಸುಧಾಂಶು ಪಾಠಕ್ ಅವರು ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಸಮೀಕ್ಷೆ ಮಾಡಲಾದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳಲ್ಲಿ (ಎನ್‌ಎಲ್‌ಯು) ಅಧ್ಯಯನ ಮಾಡುತ್ತಿರುವ ಶೇ 95ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಮಟ್ಟದಲ್ಲಿ ಇಂಗ್ಲಿಷ್ ಬೋಧನಾ ಮಾಧ್ಯಮವಾಗಿರುವ ಶಾಲೆಗಳಿಂದ ಬಂದವರು ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ಅರ್ಜಿಯ ಪ್ರಮುಖಾಂಶಗಳು

  • ಪರೀಕ್ಷೆಯನ್ನು ಇಂಗ್ಲಿಷ್‌ನಲ್ಲಿ ಮಾತ್ರ ನಡೆಸಲಾಗುತ್ತಿದ್ದು ಇದರಿಂದ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದದ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗುತ್ತದೆ.

  • ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಸಿಎಲ್‌ಎಟಿ ತಾರತಮ್ಯ ಎಸಗುತ್ತಿದ್ದು ಸಮಾನ ವೇದಿಕೆ ಕಲ್ಪಿಸಲು ವಿಫಲವಾಗಿದೆ.

  • ತೀವ್ರ ಸ್ಪರ್ಧೆ ಇರುವ ಪರೀಕ್ಷೆಯಲ್ಲಿ ಹೊಸ ಭಾಷೆ ಕಲಿತು ನೈಪುಣ್ಯತೆ ಗಳಿಸುವ ಹೆಚ್ಚುವರಿ ಅಡಚಣೆ ಇರುವುದರಿಂದ ಅಂತಹ ವಿದ್ಯಾರ್ಥಿಗಳು ಭಾಷಿಕ ನೆಲೆಯಲ್ಲಿ ಬಲ ಕಳೆದುಕೊಳ್ಳುತ್ತಾರೆ.

  • ಇಂಗ್ಲಿಷ್‌ ಭಾಷೆಯಲ್ಲಿ ಕಲಿತವರಿಗೆ ಉಳಿದವರಿಗಿಂತ ಸಹಜವಾಗಿಯೇ ಹೆಚ್ಚು ಅನುಕೂಲಗಳಿವೆ. ಅವರಿಗೆ ಹೋಲಿಸಿದರೆ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಕೇವಲ ಇಂಗ್ಲಿಷ್‌ ಭಾಷೆಯಿಂದ ಕೂಡಿದ ಪರೀಕ್ಷೆ ಸ್ಪಷ್ಟತೆ ನೀಡುವುದಿಲ್ಲ.

  • ಇಂಗ್ಲಿಷ್‌ನಲ್ಲಿ ಹೆಚ್ಚು ಪ್ರಾವೀಣ್ಯತೆ ಪಡೆದ ಮತ್ತು ಆ ಮೂಲಕ ಇಂಗ್ಲಿಷ್‌ ಮಾಧ್ಯಮದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳಿಗೆ ಪರೀಕ್ಷೆಯು ಅಂತರ್ಗತ ಅನುಕೂಲ ಕಲ್ಪಿಸುತ್ತದೆ.

  • ಐಡಿಐಎ 2013-14 ರಲ್ಲಿ ಮಾಡಿದ ಸಮೀಕ್ಷೆಯಲ್ಲಿ ʼಸಿಎಲ್‌ಎಟಿ ಪ್ರವೇಶಾತಿ ಪಡೆದ 96.77% ವಿದ್ಯಾರ್ಥಿಗಳು ಇಂಗ್ಲಿಷ್‌ ಮಾಧ್ಯಮದ ಹಿನ್ನೆಲೆಯಿಂದ ಬಂದವರು ಎಂದು ತಿಳಿಸಲಾಗಿದೆ. ಎನ್‌ಎಲ್‌ಯುಗಳಲ್ಲಿ ಪ್ರವೇಶಾತಿ ಪಡೆಯಲು ಇಂಗ್ಲಿಷ್‌ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಿರಬೇಕು ಎಂಬುದನ್ನು ಇದು ಬಹಿರಂಗಪಡಿಸಿದೆ.