ಸುದ್ದಿಗಳು

ಬಡ್ತಿಗಾಗಿ ಅರ್ಜುನ ಪ್ರಶಸ್ತಿ ಪುರಸ್ಕೃತನ ಮನವಿ: ಕೇಂದ್ರ, ಸಿಆರ್‌ಪಿಎಫ್‌ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್

2014ರ ಏಷ್ಯನ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಮುಖ್ಯ ಕೋಚ್ ಆಗಿ ಕಂಚಿನ ಪದಕ ಗೆದ್ದಿದ್ದ ಶಾ ಅವರು ಉಪ ಕಮಾಂಡೆಂಟ್ ಹುದ್ದೆಗೆ ಬಡ್ತಿ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Bar & Bench

ಎಂಟು ವರ್ಷಗಳ ಹಿಂದೆ ಅಂದರೆ 2014ನೇ ಸಾಲಿನ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ತಂದುಕೊಟ್ಟಿದ್ದ ಜೂಡೊ ಆಟಗಾರ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಅಕ್ರಂ ಶಾ ಅವರು ತಮಗೆ ಡೆಪ್ಯೂಟಿ ಕಮಾಂಡೆಂಟ್ ಹುದ್ದೆಗೆ ವಿಶೇಷ  ಬಡ್ತಿ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಕೇಂದ್ರ ಸರ್ಕಾರ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (ಸಿಆರ್‌ಪಿಎಫ್‌) ನೋಟಿಸ್ ಜಾರಿ ಮಾಡಿದೆ [ಅಕ್ರಂ ಶಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಪ್ರತಿವಾದಿಗಳಿಗೆ ಆರು ವಾರಗಳಲ್ಲಿ ತಮ್ಮ ಉತ್ತರ ಸಲ್ಲಿಸುವಂತೆ ಸೂಚಿಸಿದ ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಸೌರಭ್ ಬ್ಯಾನರ್ಜಿ ಅವರಿದ್ದ ವಿಭಾಗೀಯ ಪೀಠ ಅಂತಿಮ ವಾದ ಮಂಡನೆಗಾಗಿ ಜನವರಿ 11ಕ್ಕೆ ವಿಚಾರಣೆ ನಿಗದಿಪಡಿಸಿತು.

ಶಾ ಅವರನ್ನು ಅಕ್ಟೋಬರ್ 1998 ರಲ್ಲಿ ಕ್ರೀಡಾ ಕೋಟಾದಡಿ (ಜೂಡೋ) ಸಿಆರ್‌ಪಿಎಫ್‌ ಕಾನ್‌ಸ್ಟೇಬಲ್ ಆಗಿ ನೇಮಿಸಲಾಗಿತ್ತು. ಬಳಿಕ  2000ರಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗೆ ಔಟ್‌ ಆಫ್‌ ಟರ್ನ್‌ ಪ್ರೊಮೋಷನ್‌ (ಸೇವಾ ಹಿರಿತನ ಲೆಕ್ಕಿಸದೆ ಸಾಧನೆಗಾಗಿ ಕೊಡಲಾಗುವ ವಿಶೇಷ ಬಡ್ತಿ) ನೀಡಲಾಯಿತು.

ಏಷ್ಯನ್ ಗೇಮ್ಸ್‌ ಕ್ರೀಡಾಕೂಟದ ವೇಳೆ ಅಕ್ಟೋಬರ್ 24, 2014 ರಂದು ಮುಖ್ಯ ತರಬೇತುದಾರರಾಗಿ ಶಾ ಭಾಗವಹಿಸಿ ಕಂಚಿನ ಪದಕ ಗೆಲ್ಲಲು ಕಾರಣವಾಗಿದ್ದರು. ಹೀಗಾಗಿ 2012ರ ಕಚೇರಿ ಮೆಮೋರಾಂಡಂ ಪ್ಯಾರಾ (iv)ರ ಪ್ರಕಾರ ವಿಶೇಷ ಬಡ್ತಿ ಪಡೆಯಲು ಆ ದಿನಾಂಕದಿಂದ ತಾವು ಸಂಪೂರ್ಣ ಅರ್ಹರಿರುವುದಾಗಿ ನ್ಯಾಯಾಲಯಕ್ಕೆ ಶಾ ತಿಳಿಸಿದ್ದಾರೆ.

ಪದೇ ಪದೇ ಬಡ್ತಿಗಾಗಿ ಮನವಿ ಮಾಡಿದ್ದರೂ ಸಂಬಂಧಪಟ್ಟವರು ಇದುವರೆಗೆ ತಮ್ಮ ಅಹವಾಲು ಕೇಳಿಲ್ಲ. ಹೀಗಾಗಿ ಅರ್ಜಿದಾರರಿಗೆ ನ್ಯಾಯಾಲಯದ ಬಾಗಿಲು ತಟ್ಟುವುದನ್ನು ಬಿಟ್ಟರೆ ಪರ್ಯಾಯ ಮಾರ್ಗವಿರಲಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

AKRAM_SHAH__ORDER.pdf
Preview