Mahua Moitra, Delhi High Court Mahua Moitra (Facebook)
ಸುದ್ದಿಗಳು

ಪ್ರಶ್ನೆ ಕೇಳಲು ಲಂಚ ಆರೋಪ: ಮಹುವಾ ವಿರುದ್ಧ ಲೋಕಪಾಲ್ ನೀಡಿದ್ದ ಆದೇಶ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

ಲೋಕಪಾಲ್ ನೀಡಿದ್ದ ಅನುಮತಿ ವಿರುದ್ಧ ಮಹುವಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತರ್‌ಪಾಲ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ವಿಭಾಗೀಯ ಪೀಠ ಪುರಸ್ಕರಿಸಿತು.

Bar & Bench

ಸದನದಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿ ಲೋಕಪಾಲ್ ಹೊರಡಿಸಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.

ಲೋಕಪಾಲ್ ನೀಡಿದ್ದ ಅನುಮತಿ ವಿರುದ್ಧ ಮಹುವಾ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಅನಿಲ್ ಕ್ಷೇತರ್‌ಪಾಲ್‌ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ವಿಭಾಗೀಯ ಪೀಠ  ಲೋಕಪಾಲ್ ತನ್ನ ಆದೇಶದಲ್ಲಿ ತಪ್ಪು ಮಾಡಿದೆ ಎಂದು ತೀರ್ಪು ನೀಡಿತು.

ಲೋಕಪಾಲ್ ಮತ್ತು ಲೋಕಾಯುಕ್ತ ಕಾಯಿದೆಯ ಸೆಕ್ಷನ್‌ಗಳ ಪ್ರಕಾರ ಪ್ರಕರಣ ಮರುಪರಿಶೀಲಿಸಿ ಒಂದು ತಿಂಗಳೊಳಗೆ ಹೊಸ ನಿರ್ಧಾರ ತೆಗೆದುಕೊಳ್ಳುವಂತೆ ನ್ಯಾಯಾಲಯ ಲೋಕಪಾಲ್‌ಗೆ ಸೂಚಿಸಿತು.

ಲೋಕಪಾಲ್‌ ಮತ್ತು ಲೋಕಾಯುಕ್ತ ಕಾಯಿದೆ- 2013ರ ಸೆಕ್ಷನ್ 20(7)(ಎ) ಸಹವಾಚನ ಸೆಕ್ಷನ್ 23(1) ರ ಅಡಿಯಲ್ಲಿ ತನ್ನ ಅಧಿಕಾರ ಚಲಾಯಿಸಿದ್ದ ಲೋಕಪಾಲ್‌ ಪೂರ್ಣ ಪೀಠ, ಸಿಬಿಐಗೆ ಆರೋಪಪಟ್ಟಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತು.  ಅದರ ಪ್ರತಿಯನ್ನು ತನಗೆ ಸಲ್ಲಿಸುವಂತೆ ಆದೇಶಿಸಿತ್ತು.  

ಉದ್ಯಮಿ ದರ್ಶನ್ ಹಿರಾನಂದಾನಿ ಪರವಾಗಿ ಸಂಸತ್‌ನಲ್ಲಿ ಪ್ರಶ್ನೆ ಕೇಳಲು ನಗದು ಹಾಗೂ ಉಡುಗೊರೆಗಳನ್ನು ಮಹುವಾ ಪಡೆದಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಆರೋಪಿಸಿದ್ದರು.  ಕಾಯಿದೆಯ ಸೆಕ್ಷನ್ 20(3)(ಎ) ಅಡಿಯಲ್ಲಿ ಎಲ್ಲಾ ಅಂಶಗಳನ್ನು ತನಿಖೆ ಮಾಡಿ 6 ತಿಂಗಳೊಳಗೆ ವರದಿ ಸಲ್ಲಿಸುವಂತೆ ಲೋಕಪಾಲ್ ಈ ಹಿಂದೆ ಸಿಬಿಐಗೆ ನಿರ್ದೇಶಿಸಿತ್ತು.

ತಮ್ಮ ವಿವರವಾದ ಲಿಖಿತ ಮತ್ತು ಮೌಖಿಕವಾದಗಳನ್ನು ಪರಿಗಣಿಸದೆಯೇ ಲೋಕಪಾಲ್‌ ಹೊರಡಿಸಿದ ಆದೇಶ ಲೋಕಪಾಲ್ ಮತ್ತು ಲೋಕಾಯುಕ್ತ ಕಾಯಿದೆ 2013ಕ್ಕೆ ವಿರುದ್ಧವಾಗಿದ್ದು  ಸ್ವಾಭಾವಿಕ ನ್ಯಾಯ ತತ್ವಗಳ ಉಲ್ಲಂಘಿಸಿದೆ ಎಂದು ಮೊಯಿತ್ರಾ ಪರವಾಗಿ ಹಿರಿಯ ವಕೀಲ ನಿಧೇಶ್ ಗುಪ್ತಾ  ವಿಚಾರಣೆ ವೇಳೆ ವಾದಿಸಿದರು.

ಕಾನೂನಿನ ಪ್ರಕಾರ ಆರೋಪಪಟ್ಟಿ ಸಲ್ಲಿಸಲು ಅನುಮತಿಸುವ ಮೊದಲು ಸಂಬಂಧಿಸಿದ ವ್ಯಕ್ತಿಯ ಅಭಿಪ್ರಾಯಗಳನ್ನು ಸಮರ್ಪಕವಾಗಿ ಪರಿಗಣಿಸಬೇಕೆಂಬ ವಾದವನ್ನು ಹೈಕೋರ್ಟ್ ಪುರಸ್ಕರಿಸಿತು.

ಕಾನೂನು ಪ್ರಕಾರವೇ ಸಿಬಿಐ ಪರವಾಗಿ ಲೋಕಪಾಲ್‌ ಆದೇಶ ಬಂದಿದೆ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು ವಾದಿಸಿದರು. ಆದರೆ ಹೈಕೋರ್ಟ್‌ ಈ ವಾದ ಪುರಸ್ಕರಿಸದೆ ಲೋಕಪಾಲ್‌ ಆದೇಶ ರದ್ದುಪಡಿಸಿ ಪ್ರಕರಣ ಮರುಪರಿಶೀಲಿಸುವಂತೆ ನಿರ್ದೇಶಿಸಿತು.