Ship  
ಸುದ್ದಿಗಳು

ಕರಾವಳಿ ಕಾವಲು ಪಡೆ: ರ‍್ಯಾಂಕ್ ಆಧಾರಿತ ನಿವೃತ್ತಿ ವಯೋಮಿತಿ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

ರ‍್ಯಾಂಕ್ ಆಧಾರದ ಮೇಲೆ ನಿವೃತ್ತಿ ವಯಸ್ಸಿನ ಅಂತರ ಸೃಷ್ಟಿಸುವ ನಿಯಮ ಅಸಾಂವಿಧಾನಿಕ ಎಂದಿದೆ ಪೀಠ.

Bar & Bench

ಅಧಿಕಾರಿಗಳ ರ‍್ಯಾಂಕ್ ಆಧಾರದ ಮೇಲೆ ವಿಭಿನ್ನ ನಿವೃತ್ತಿ ವಯಸ್ಸನ್ನು ನಿಗದಿಪಡಿಸುತ್ತಿದ್ದ ಕರಾವಳಿ ಕಾವಲು ಪಡೆ (ಸಾಮಾನ್ಯ) ನಿಯಮಾವಳಿ 1986ರ ನಿಯಮಗಳನ್ನು ದೆಹಲಿ ಹೈಕೋರ್ಟ್‌ ಸೋಮವಾರ ರದ್ದುಗೊಳಿಸಿದೆ [ಚೇತಲಿ ಜೆ ರತ್ನಮನ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ರ‍್ಯಾಂಕ್ ಆಧಾರದ ಮೇಲೆ ನಿವೃತ್ತಿ ವಯಸ್ಸಿನ ಅಂತರ  ಸೃಷ್ಟಿಸುವ ನಿಯಮ ಅಸಾಂವಿಧಾನಿಕ ಮತ್ತು ತಾರ್ಕಿಕವಾಗಿ ಅಸಮರ್ಥನೀಯ ಎಂದು ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್ ಶುಕ್ಲಾ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ಕರಾವಳಿ ಕಾವಲು ಪಡೆ (ಸಾಮಾನ್ಯ) ನಿಯಮಾವಳಿ 1986ರ ನಿಯಮಗಳಾದ 20(1) ಮತ್ತು 20(2)ರ ಪ್ರಕಾರ ಕಮಾಂಡೆಂಟ್ ಶ್ರೇಣಿಯ ಮತ್ತು ಅದಕ್ಕಿಂತ ಕಡಿಮೆ ಶ್ರೇಣಿಯ ಅಧಿಕಾರಿಗಳು 57 ವರ್ಷಕ್ಕೆ ನಿವೃತ್ತಿಯಾದರೆ ಕಮಾಂಡೆಂಟ್‌ಗಿಂತಲೂ ಮೇಲಧಿಕಾರಿಗಳಿಗೆ 60 ವರ್ಷಕ್ಕೆ ನಿವೃತ್ತಿಯಾಗಲು ಅವಕಾಶ ಇರುವುದನ್ನು ಸಂವಿಧಾನದ 14 ಮತ್ತು 16 ನೇ ವಿಧಿಗಳಡಿ  ಬೆಂಬಲಿಸಲು ಸಾಧ್ಯವಿಲ್ಲ. ಹೀಗಾಗಿ ಅವುಗಳನ್ನು ರದ್ದುಗೊಳಿಸಲಾಗಿದೆ. ನಿವೃತ್ತಿಯಾಗಲು , 60 ವರ್ಷಗಳ ನಿವೃತ್ತಿ ವಯೋಮಿತಿ ಕರಾವಳಿ ಕಾವಲುಪಡೆಯ ಎಲ್ಲರಿಗೂ ಅನ್ವಯವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಕರಾವಳಿ ಕಾವಲು ಪಡೆ (ಸಾಮಾನ್ಯ) ನಿಯಮಾವಳಿಯ 20(1) ಮತ್ತು 20(2)ನ್ನು ಪ್ರಶ್ನಿಸಿದ್ದ ಅರ್ಜಿದಾರರು ಈ ಅಂತರ ಅನ್ಯಾಯಯುತವಾಗಿದ್ದು ವಿವೇಚನೆ ಆಧರಿಸಿಲ್ಲ. ಸಂವಿಧಾನದ  14 ಮತ್ತು 16ನೇ ವಿಧಿಯನ್ನು (ಸಮಾನತೆ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶ) ಉಲ್ಲಂಘಿಸುತ್ತದೆ ಎಂದು ದೂರಿದ್ದರು.

ಆದರೆ ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ, ಕೆಳ ಹಂತದ ಹುದ್ದೆಗಳಿಗೆ ಯುವಕರ ಸಂಖ್ಯೆ ಹೆಚ್ಚಿರಬೇಕಾಗಿದೆ. ಸಮುದ್ರ ಯಾನಕ್ಕೆ ಅಗತ್ಯವಾದ ವೈದ್ಯಕೀಯ ಕ್ಷಮತೆ, ವೃತ್ತಿ ಜಡತೆ ತಪ್ಪಿಸಲು ಹಾಗೂ ಆಜ್ಞೆ ಮತ್ತು ನಿಯಂತ್ರಣ ಸಮಸ್ಯೆ ಕಾರಣಕ್ಕೆ  57 ವರ್ಷಕ್ಕೇ ನಿವೃತ್ತಿ ಅಗತ್ಯವಿದೆ ಎಂದು ಹೇಳಿತ್ತು.

ಆದರೆ ಸರ್ಕಾರದ ಕಾರಣಗಳು ಕಪೋಲಕಲ್ಪಿತವಾದವು ಮತ್ತು ಅವುಗಳಿಗೆ ದಾಖಲೆಗಳಿಲ್ಲ. 57 ಮತ್ತು 60 ಎಂದು ನಿವೃತ್ತಿ ವಯಸ್ಸನ್ನು ವಿಭಜಿಸುವುದು ಅನ್ಯಾಯ ಮತ್ತು ವಿವೇಚನಾಯುಕ್ತವಲ್ಲ ಎಂದು ನ್ಯಾಯಪೀಠ ಹೇಳಿತು. ಅಂತೆಯೇ ಕೆಳಹಂತದ ಸಿಬ್ಬಂದಿಗೆ ಇದ್ದ 57 ವರ್ಷದ ನಿವೃತ್ತಿ ವಯೋಮಿತಿ ರದ್ದುಪಡಿಸಿ ಕರಾವಳಿ ಕಾವಲುಪಡೆಯ ಎಲ್ಲಾ ಹುದ್ದೆಗಳಿಗೂ ನಿವೃತ್ತಿ ವಯಸ್ಸು 60 ವರ್ಷ ಎಂದು ತೀರ್ಪು ನೀಡಿತು.