ಲೆಫ್ಟಿನೆಂಟ್ ಗವರ್ನರ್ ಭಾಷಣದ ವೇಳೆ ಗಲಾಟೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ವಿಧಾನಸಭೆಯಿಂದ ಅಮಾನತುಗೊಂಡಿದ್ದ ಏಳು ಬಿಜೆಪಿ ಶಾಸಕರ ಅನರ್ಹತೆಯನ್ನು ದೆಹಲಿ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.
ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಶಾಸಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿಯ ಎಂಟು ಶಾಸಕರು ಇದ್ದಾರೆ. ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಏಳು ಬಿಜೆಪಿ ಶಾಸಕರನ್ನು ಅಮಾನತುಗೊಳಿಸಲಾಗಿತ್ತು.
ವಿಜೇಂದರ್ ಗುಪ್ತಾ, ಅಜಯ್ ಕುಮಾರ್ ಮಹಾವರ್, ಅನಿಲ್ ಕುಮಾರ್ ಬಾಜಪೇಯಿ, ಓಂ ಪ್ರಕಾಶ್ ಶರ್ಮಾ, ಜಿತೇಂದರ್ ಮಹಾಜನ್, ಮೋಹನ್ ಸಿಂಗ್ ಬಿಶ್ತ್ ಹಾಗೂ ಅಭಯ್ ವರ್ಮಾ ಅಮಾನತುಗೊಂಡಿದ್ದರು.
ನಿಷ್ಪಕ್ಷಪಾತ ಮಧ್ಯಸ್ಥಿಕೆದಾರರಾಗಿರುವ ಮತ್ತು ಸದನವನ್ನು ನಡೆಸುವ ಸ್ಪೀಕರ್ ಸ್ವತಂತ್ರವಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಹಾಗೂ ಎಲ್ಲಿಯೂ ಪ್ರಕರಣ ಹಕ್ಕುಬಾಧ್ಯತಾ ಸಮಿತಿಗೆ ಕಳುಹಿಸಬೇಕಾದ ವಿಷಯ ಎಂದು ಹೇಳಿಲ್ಲ ಎಂದು ಹೈಕೋರ್ಟ್ ತನ್ನ ವಿಸ್ತೃತ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ಇದರ ಪರಿಣಾಮವಾಗಿ ಅಧ್ಯಾಯ 11ರ ನಿಯಮ 70ರ ಅಡಿ ಸೂಚಿಸಿರುವಂತೆ ಸ್ಪೀಕರ್ ಸ್ವತಂತ್ರವಾಗಿ ತಮ್ಮ ವಿವೇಚನೆಯನ್ನು ಬಳಸದೆ, ಬದಲಿಗೆ ಸದನವು ಹಕ್ಕುಭಾದ್ಯತಾ ಸಮಿತಿಗೆ ವಿಷಯವನ್ನು ಒಪ್ಪಿಸುವಂತಾಯಿತು ಹಾಗೂ ಹಕ್ಕು ಭಾದ್ಯತಾ ಸಮಿತಿಯು ನಿರ್ಣಯ ಕೈಗೊಳ್ಳುವವರೆಗೆ ಅರ್ಜಿದಾರರನ್ನು ಅಮಾನತುಗೊಳಿಸುವ ನಿರ್ಧಾರವನ್ನು ಸದನವು ತೆಗೆದುಕೊಂಡಿತು. ಈ ಎರಡೂ ನಿರ್ಧಾರಗಳು ಅಧ್ಯಾಯ 11 ಹಾಗೂ ಐದನೆ ಷೆಡ್ಯೂಲ್‌ನಲ್ಲಿ ವಿವರಿಸಿರುವ ಪ್ರಕ್ರಿಯೆಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಬಹುತೇಕ ಇಡೀ ವಿರೋಧ ಪಕ್ಷವನ್ನು ವಿಧಾನಸಭೆಯಿಂದ ಅಮಾನತುಗೊಳಿಸಿದ್ದರಿಂದ ತಮ್ಮನ್ನು ಅಮಾನತುಗೊಳಿಸುವ ಸ್ಪೀಕರ್ ನಿರ್ಧಾರ ಸಂಪೂರ್ಣವಾಗಿ ಅಸಾಂವಿಧಾನಿಕ ಎಂದು ಆರೋಪಿಸಿ ಬಿಜೆಪಿ ಶಾಸಕರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಎಎಪಿ ಶಾಸಕ ದಿಲೀಪ್ ಪಾಂಡೆ ಮಂಡಿಸಿದ ನಿರ್ಣಯವು ವಿರೋಧ ಪಕ್ಷದ ಸದಸ್ಯರು ಚರ್ಚೆಗಳಲ್ಲಿ ಭಾಗವಹಿಸದಂತೆ ಮಾಡಲು ಮತ್ತು ಅವರು ಬಜೆಟ್ ಅಧಿವೇಶನದಲ್ಲಿ ಭಾಗವಹಿಸುವುದನ್ನು ತಪ್ಪಿಸುವ ಉದ್ದೇಶದಿಂದ ದುರುದ್ದೇಶಪೂರಿತವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಅರ್ಜಿದಾರ ಶಾಸಕರು ವಾದಿಸಿದ್ದರು.
ಎಎಪಿ ಸಂಸದ ರಾಘವ್ ಚಡ್ಡಾ ಅವರನ್ನು ಸಂಸತ್ತಿನಿಂದ ಅಮಾನತುಗೊಳಿಸಿದ್ದಕ್ಕೆ ಹೋಲಿಸುವ ಮೂಲಕ ಆಡಳಿತಾರೂಢ ಎಎಪಿ ತಮ್ಮನ್ನು ಅಮಾನತುಗೊಳಿಸಿರುವ ಘಟನೆಗೆ ರಾಜಕೀಯ ಬಣ್ಣ ನೀಡುತ್ತಿದೆ ಎಂದು ದೆಹಲಿ ವಿಧಾನಸಭೆಯಿಂದ ಅಮಾನತುಗೊಂಡಿರುವ ಬಿಜೆಪಿ ಶಾಸಕರು ದೆಹಲಿ ಹೈಕೋರ್ಟ್ ಎದುರು ಈ ಹಿಂದೆ ಅಲವತ್ತುಕೊಂಡಿದ್ದರು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]