Delhi HC and SpiceJet
Delhi HC and SpiceJet  
ಸುದ್ದಿಗಳು

ಸ್ಪೈಸ್‌ಜೆಟ್‌ ಮಾಜಿ ಪ್ರವರ್ತಕ ಮಾರನ್‌ಗೆ ₹380 ಕೋಟಿ ಪಾವತಿಸಲು ವಿಮಾನಯಾನ ಸಂಸ್ಥೆಗೆ ಸೂಚಿಸಿದ ದೆಹಲಿ ಹೈಕೋರ್ಟ್

Bar & Bench

ಸನ್‌ ಸಮೂಹದ ಅಧ್ಯಕ್ಷ ಮತ್ತು ಸ್ಪೈಸ್‌ಜೆಟ್‌ ಏರ್‌ಲೈನ್ಸ್‌ ಮಾಜಿ ಪ್ರವರ್ತಕ ಕಲಾನಿಧಿ ಮಾರನ್‌ ಅವರಿಗೆ ನೀಡಬೇಕಾದ ₹380 ಕೋಟಿ ಬಾಕಿ ಮೊತ್ತ ಪಾವತಿಸುವಂತೆ ದೆಹಲಿ ಹೈಕೋರ್ಟ್‌ ಸೋಮವಾರ ಸ್ಪೈಸ್‌ ಜೆಟ್‌ಗೆ ಆದೇಶ ನೀಡಿದೆ. [ಕಲ್‌ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್ ಮತ್ತು ಎಂ/ಎಸ್ ಸ್ಪೈಸ್‌ಜೆಟ್ ಲಿಮಿಟೆಡ್ ನಡುವಣ ಪ್ರಕರಣ].

ಕಕ್ಷಿದಾರರ ನಡುವಿನ ಷೇರು ವರ್ಗಾವಣೆ ಸಮಸ್ಯೆಯಿಂದ ತಲೆಯೆತ್ತಿದ್ದ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಈ ಹಿಂದೆ ಎತ್ತಿ ಹಿಡಿದಿತ್ತು. ಆದರೆ ಈ ತೀರ್ಪನ್ನು ಉಲ್ಲಂಘಿಸಲಾಗಿದೆ ಎಂದು ಮಾರನ್‌ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ನ್ಯಾ. ಯೋಗೇಶ್‌ ಖನ್ನಾ ಈ ಆದೇಶ ನೀಡಿದ್ದಾರೆ.

₹ 243 ಕೋಟಿ ಠೇವಣಿ ಇಡಲು ಸ್ಪೈಸ್‌ಜೆಟ್‌ ವಿಫಲವಾದ ಹಿನ್ನೆಲೆಯಲ್ಲಿ ಸ್ಪೈಸ್‌ಜೆಟ್ ಪ್ರವರ್ತಕ ಅಜಯ್ ಸಿಂಗ್ ಅವರ ಷೇರುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಮಾರನ್ ಅಕ್ಟೋಬರ್ 2020ರಲ್ಲಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಮನವಿ ಪುರಸ್ಕರಿಸಿದ್ದ ನ್ಯಾಯಾಲಯ ಮೂರು ವಾರಗಳಲ್ಲಿ ಮೊತ್ತವನ್ನು ಠೇವಣಿ ಇಡುವಂತೆ ಸೂಚಿಸಿತ್ತು. ಇದೇ ವೇಳೆ ಆದೇಶ ಮಾರ್ಪಡಿಸುವಂತೆ ಸ್ಪೈಸ್‌ಜೆಟ್‌ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿತ್ತು.

ಈ ಸಂಬಂಧ ಮೇಲ್ಮನವಿ ಸಲ್ಲಿಸಿದಾಗ ಸುಪ್ರೀಂ ಕೋರ್ಟ್‌ ʼಬ್ಯಾಂಕ್‌ ಗ್ಯಾರಂಟಿಯನ್ನು ನಗದುಗೊಳಿಸಿ ತಕ್ಷಣವೇ ಮಾರನ್‌ ಅವರಿಗೆ ಪಾವತಿಸುವಂತೆ ನಿರ್ದೇಶಿಸಿತು. ಇದಲ್ಲದೆ ಬಡ್ಡಿ ಬಾಧ್ಯತೆಗೆ ಸಂಬಂಧಿಸಿದಂತೆ ಮೂರು ತಿಂಗಳೊಳಗೆ ₹ 75 ಕೋಟಿ ಪಾವತಿಸುವಂತೆಯೂ ಏರ್‌ಲೈನ್ಸ್‌ಗೆ ಸೂಚಿಸಿತು.

ಹೈಕೋರ್ಟ್ ಎದುರು ವಾದ ಮಂಡಿಸಿದ ಮಾರನ್ ಪರ ವಕೀಲರು ₹ 75 ಕೋಟಿ ಇನ್ನೂ ಠೇವಣಿಯಾಗಿಲ್ಲ ಮತ್ತು ಬಡ್ಡಿಯೂ ಸೇರಿ ₹ 362 ಕೋಟಿಯಿಂದ ₹ 380 ಕೋಟಿಯಷ್ಟ ಮೊತ್ತ ಪಾವತಿಸಬೇಕಾಗುತ್ತದೆ ಎಂದರು.

ಉಳಿದ ಮೊತ್ತವನ್ನು ಪಾವತಿಸಲು ಮೂರು ತಿಂಗಳ ಗಡುವು ವಿಸ್ತರಿಸುವಂತೆ ಕೋರಿ ಈಗಾಗಲೇ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದಾಗಿ ಸ್ಪೈಸ್‌ಜೆಟ್ ವಾದಿಸಿತು. ಈ ವಾದಕ್ಕೆ ಮಾರನ್‌ ಆಕ್ಷೇಪಿಸಿದರು.

ಇದನ್ನು ಪರಿಗಣಿಸಿದ ನ್ಯಾಯಾಲಯ ಸಂಪೂರ್ಣ ಬಾಕಿ ಮೊತ್ತವನ್ನು ಠೇವಣಿ ಇಡುವಂತೆ ಸ್ಪೈಸ್‌ಜೆಟ್‌ಗೆ ಸೂಚಿಸಿತು. ಅಲ್ಲದೆ ನಾಲ್ಕು ವಾರಗಳಲ್ಲಿ ಆಸ್ತಿ ಅಫಿಡವಿಟ್ ಸಲ್ಲಿಸುವಂತೆಯೂ ಹೇಳಿತು. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 5 ರಂದು ನಡೆಯಲಿದೆ.