Delhi HC and Udaipur Files 
ಸುದ್ದಿಗಳು

'ಉದಯಪುರ ಫೈಲ್ಸ್' ಚಿತ್ರ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ; ಚಿತ್ರದ ಕುರಿತು ನಿರ್ಧರಿಸಲು ಕೇಂದ್ರಕ್ಕೆ ಸೂಚನೆ

ಜಮಿಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಅವರು ಸಲ್ಲಿಸಿದ ಒಂದು ಅರ್ಜಿ ಸೇರಿದಂತೆ ಮೂರು ಅರ್ಜಿಗಳ ವಿಚಾರಣೆ ವೇಳೆ ಈ ಆದೇಶವನ್ನು ಮಾಡಲಾಗಿದೆ.

Bar & Bench

'ಉದಯಪುರ ಫೈಲ್ಸ್' ಚಿತ್ರದ ಬಿಡುಗಡೆಗೆ ದೆಹಲಿ ಹೈಕೋರ್ಟ್ ಗುರುವಾರ ತಡೆ ನೀಡಿದೆ. ಕೇಂದ್ರ ಸರ್ಕಾರವು ಚಿತ್ರದ ವಸ್ತುವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವವರೆಗೆ ತಡೆ ನೀಡಲಾಗಿದೆ [ಮೌಲಾನಾ ಅರ್ಷದ್ ಮದನಿ Vs ಯೂನಿಯನ್ ಆಫ್ ಇಂಡಿಯಾ & ಅದರ್ಸ್].

ಜಮಿಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಅವರು ಸಲ್ಲಿಸಿದ ಒಂದು ಅರ್ಜಿ ಸೇರಿದಂತೆ ಮೂರು ಅರ್ಜಿಗಳ ವಿಚಾರಣೆ ವೇಳೆ ಈ ಆದೇಶವನ್ನು ಮಾಡಲಾಗಿದೆ.

ಉದಯಪುರದಲ್ಲಿ ನಡೆದ ದರ್ಜಿ ಕನ್ಹಯ್ಯಾ ಲಾಲ್ ತೇಲಿ ಅವರ ಹತ್ಯೆಯನ್ನು ಆಧರಿಸಿದ ಚಿತ್ರವು ಮುಸ್ಲಿಮರನ್ನು ನಿಂದನೀಯವಾಗಿ ಚಿತ್ರಿಸಿದೆ ಎಂದು ಆರೋಪಿಸಲಾಗಿದ್ದು ಅದನ್ನು ನಿಷೇಧಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಜುಲೈ 11, ಶುಕ್ರವಾರ (ಇಂದು) ಈ ಚಿತ್ರ ಬಿಡುಗಡೆಯಾಗಬೇಕಿತ್ತು.

ಪ್ರಕರಣದ ವಿವರವಾದ ವಿಚಾರಣೆಯ ನಂತರ ಮುಖ್ಯ ನ್ಯಾಯಮೂರ್ತಿ ಡಿ ಕೆ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಅನೀಶ್ ದಯಾಳ್ ಅವರ ಪೀಠವು ಕೇಂದ್ರ ಸರ್ಕಾರವು ಸಿನಿಮಾಟೋಗ್ರಾಫ್ ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ತನ್ನ ಪರಿಷ್ಕರಣಾ ಅಧಿಕಾರವನ್ನು ಬಳಸಿಕೊಂಡು ಚಿತ್ರವನ್ನು ಪರಿಶೀಲಿಸುವಂತೆ ಆದೇಶಿಸಿತು.

ಕೇಂದ್ರ ಸರ್ಕಾರವು ಸ್ವಯಂಪ್ರೇರಿತವಾಗಿ ಅಥವಾ ಚಲನಚಿತ್ರ ಪ್ರಮಾಣೀಕರಣದ ವಿರುದ್ಧ ನೊಂದ ವ್ಯಕ್ತಿ ಸಲ್ಲಿಸಿದ ಅರ್ಜಿಯ ಮೇರೆಗೆ ಈ ಅಧಿಕಾರವನ್ನು ಚಲಾಯಿಸಬಹುದು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಈ ಸಂದರ್ಭದಲ್ಲಿ, ಅರ್ಜಿದಾರರು ಪರಿಹಾರದ ಕೋರಿಕೆಯನ್ನು ಮಾಡಿಲ್ಲ ಎನ್ನುವುದನ್ನು ಅದು ಗಮನಿಸಿತು. 226ನೇ ವಿಧಿಯ ಅಡಿಯಲ್ಲಿ ನ್ಯಾಯಾಲಯವು ತನ್ನ ವಿಶೇಷ ನ್ಯಾಯವ್ಯಾಪ್ತಿಯನ್ನು ಚಲಾಯಿಸಲು ಅಡ್ಡಿ ಇಲ್ಲವಾದರೂ ಅರ್ಜಿದಾರರು ಮೊದಲು ಕೇಂದ್ರ ಸರ್ಕಾರವನ್ನು ಈ ವಿಚಾರವಾಗಿ ಸಂಪರ್ಕಿಸಬೇಕು ಎಂದು ಪೀಠ ಹೇಳಿದೆ.

"ಅರ್ಜಿದಾರರು ಎರಡು ದಿನಗಳಲ್ಲಿ ಕೇಂದ್ರ ಸರ್ಕಾರವನ್ನು ಸಂಪರ್ಕಿಸಲು ನಾವು ಅನುಮತಿಸುತ್ತೇವೆ. ಅರ್ಜಿದಾರರು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದರೆ, ಅವರು ಮಧ್ಯಂತರ ಕ್ರಮಗಳಿಗಾಗಿ ಪ್ರಾರ್ಥನೆ ಸಲ್ಲಿಸಬಹುದು. ಒಮ್ಮೆ ಅರ್ಜಿದಾರರು ಪರಿಷ್ಕೃತ ಮನವಿಯೊಂದಿಗೆ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದ ನಂತರ, ನಿರ್ಮಾಪಕರಿಗೆ ಪ್ರತಿಕ್ರಿಯಿಸಲು ಅವಕಾಶ ನೀಡಿ ಅದನ್ನು ಪರಿಗಣಿಸಿ ಒಂದು ವಾರದೊಳಗೆ ಈ ಕುರಿತು ನಿರ್ಧರಿಸಬೇಕು" ಎಂದು ಅದು ಆದೇಶಿಸಿತು.

ಚಲನಚಿತ್ರದ ವಿರುದ್ಧದ ಮಧ್ಯಂತರ ಪರಿಹಾರಕ್ಕಾಗಿ ಸಲ್ಲಿಸಲಾದ ಅರ್ಜಿಯನ್ನು ಸಹ ಪರಿಗಣಿಸಬೇಕೆಂದು ನ್ಯಾಯಾಲಯವು ನಿರ್ದೇಶಿಸಿತು. ಈ ಮಧ್ಯೆ, ಚಲನಚಿತ್ರದ ಬಿಡುಗಡೆಗೆ ತಡೆಯಾಜ್ಞೆ ಮುಂದುವರಿಯುತ್ತದೆ ಎಂದು ಪೀಠವು ನಿರ್ದೇಶಿಸಿತು.

ಚಲನಚಿತ್ರದಲ್ಲಿನ ಕೆಲವು ಆಕ್ಷೇಪಾರ್ಹ ಭಾಗಗಳನ್ನು ತೆಗೆದುಹಾಕಲಾಗಿದೆ ಎಂದು ಸಿಬಿಎಫ್‌ಸಿ ಬುಧವಾರ ನ್ಯಾಯಾಲಯಕ್ಕೆ ತಿಳಿಸಿತ್ತು. ನಂತರ ನ್ಯಾಯಾಲಯವು ಈ ವಿಷಯದಲ್ಲಿ ಹಾಜರಾಗಿದ್ದ ವಕೀಲರಿಗೆ - ಮದನಿ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಸಿಬಿಎಫ್‌ಸಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಚೇತನ್ ಶರ್ಮಾ ಅವರಿಗೆ ಚಲನಚಿತ್ರ ಮತ್ತು ಟ್ರೇಲರ್‌ನ ಪ್ರದರ್ಶನವನ್ನು ಏರ್ಪಡಿಸುವಂತೆ ನಿರ್ಮಾಪಕರಿಗೆ ನಿರ್ದೇಶಿಸಿತ್ತು.