ಸುದ್ದಿಗಳು

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣ: ವಿಶೇಷ ಸಿಬಿಐ ನ್ಯಾಯಾಲಯದ ವಿಚಾರಣೆ ತಡೆ ಹಿಡಿದ ದೆಹಲಿ ಹೈಕೋರ್ಟ್‌

ಆರೋಪಿಗಳಿಗೆ ಎಲ್ಲಾ ದಾಖಲೆಗಳನ್ನು ಪೂರೈಸುವಂತೆ ವಿಚಾರಣಾಧೀನ ನ್ಯಾಯಾಲಯ ನಿರ್ದೇಶನ ನೀಡಿದ್ದ ಆದೇಶದ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಹೈಕೋರ್ಟ್‌ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ತಡೆಯಾಜ್ಞೆ ನೀಡಲಾಗಿದೆ.

Bar & Bench

ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರು ಆರೋಪಿಗಳಾಗಿರುವ, ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ತನಿಖೆಗೆ ಒಳಪಟ್ಟಿರುವ ಐಎನ್‌ಎಕ್ಸ್‌ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಗೆ ಮಂಗಳವಾರ ದೆಹಲಿ ಹೈಕೋರ್ಟ್‌ ತಡೆ ನೀಡಿತು.

ಆರೋಪಿಗಳಿಗೆ ಎಲ್ಲಾ ದಾಖಲೆಗಳನ್ನು ಪೂರೈಸುವಂತೆ ವಿಶೇಷ ಸಿಬಿಐ ನ್ಯಾಯಾಧೀಶರು ನಿರ್ದೇಶಿಸಿದ್ದ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸುರೇಶ್‌ ಕುಮಾರ್‌ ಕೈಟ್‌ ಅವರಿದ್ದ ಏಕಸದಸ್ಯ ಪೀಠವು ತಡೆಯಾಜ್ಞೆ ನೀಡಿತು.

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಆರೋಪಿಗಳಾಗಿರುವ ಎಲ್ಲರಿಗೂ ನೋಟಿಸ್‌ ಜಾರಿಗೊಳಿಸಿದ್ದು, ಉತ್ತರಿಸುವಂತೆ ನ್ಯಾಯಾಲಯ ಆದೇಶಿಸಿದೆ. ಸಿಆರ್‌ಪಿಸಿ ಸೆಕ್ಷನ್‌ 207 ಜಾರಿಯಲ್ಲಿರುವ ಸಂದರ್ಭದಲ್ಲಿ ವಿಚಾರಣಾಧೀನ ನ್ಯಾಯಾಲಯವು ತಪ್ಪಾಗಿ ಎಲ್ಲಾ ದಾಖಲೆಗಳನ್ನು ಆರೋಪಿಗಳಿಗೆ ಪೂರೈಸುವಂತೆ ಸೂಚಿಸಿದೆ ಎಂದು ಸಿಬಿಐ ಪರ ವಕೀಲ ಅನುಪಮ್‌ ಎಸ್‌ ಶರ್ಮಾ ವಾದಿಸಿದರು. ಪ್ರಾಸಿಕ್ಯೂಷನ್ ಅವಲಂಬಿಸಿರುವ ದಾಖಲೆಗಳನ್ನು ಪಡೆಯಲು ಮಾತ್ರವೇ ಆರೋಪಿಗಳಿಗೆ ಅರ್ಹತೆ ಇದೆ ಎಂದು ಅವರು ವಾದಿಸಿದರು.

ವಿಚಾರಣೆಯ ಸಂದರ್ಭದಲ್ಲಿ ನ್ಯಾಯಯುತ ವಿಚಾರಣೆಯ ಉದ್ದೇಶಗಳಿಗಾಗಿ ಯಾವುದೇ ಹಂತದಲ್ಲಿ ಯಾವುದೇ ದಾಖಲೆಯನ್ನುಆರೋಪಿ ದಾಖಲಿಸಬಹುದು ಎಂದು ನ್ಯಾಯಾಲಯವು ಹೇಳಿತು.

“ಈ ದಾಖಲೆಗಳನ್ನು ಯಾವ ಉದ್ದೇಶಕ್ಕಾಗಿ ನೀವು ಇಟ್ಟುಕೊಂಡಿದ್ದೀರಿ?” ಎಂದು ನ್ಯಾಯಾಲಯ ಸಿಬಿಐ ಅನ್ನು ಇದೇ ವೇಳೆ ಪ್ರಶ್ನಿಸಿತು. ಅಲ್ಲದೆ, ಅವುಗಳನ್ನು ಆರೋಪಿಗಳಿಂದಲೇ ವಶಪಡಿಸಿಕೊಂಡಿರುವುದಲ್ಲವೇ ಎಂದಿತು. ಈ ವೇಳೆ ಪಿತೂರಿಯ ಅಗಾಧತೆಯ ವ್ಯಾಪ್ತಿಯ ತನಿಖೆಯು ಇನ್ನೂ ನಡೆಯುತ್ತಿರುವುದಾಗಿ ತಿಳಿಸಿದ ಶರ್ಮಾ ದಾಖಲೆಗಳನ್ನು ಇರಿಸಿಕೊಂಡಿರುವ ಬಗ್ಗೆ ಸಮರ್ಥಿಸಿದರು. ಶರ್ಮಾ ವಾದವನ್ನು ಆಲಿಸಿದ ಪೀಠವು ನೋಟಿಸ್‌ ಜಾರಿಗೊಳಿಸಲು ನಿರ್ಧರಿಸಿತು.

ಪಿ ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಮತ್ತಿತರರ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿದ್ದನ್ನು ವಿಶೇಷ ಸಿಬಿಐ ನ್ಯಾಯಾಲಯವು ಅಕ್ಟೋಬರ್‌ 21, 2019ರಂದು ಪರಿಗಣಿಸಿತ್ತು.