ದೆಹಲಿ ಹೈಕೋರ್ಟ್ 
ಸುದ್ದಿಗಳು

ಅವಧಿ ಮೀರಿದ ಆಹಾರ ಉತ್ಪನ್ನ ಮಾರಾಟ: ಸ್ವಯಂಪ್ರೇರಿತ ವಿಚಾರಣೆಗೆ ಮುಂದಾದ ದೆಹಲಿ ಹೈಕೋರ್ಟ್

ಹರ್ಶೀ (Hershey) ಕಂಪೆನಿಯ ಚಾಕೊಲೇಟ್ ಉತ್ಪನ್ನಗಳನ್ನು ಬೇರೊಂದು ಕಂಪೆನಿ ಮರು ಪ್ಯಾಕ್ ಮಾಡಿ ಅವಧಿ ಮೀರಿದ ದಿನದ ಬಳಿಕ ಮಾರಾಟ ಮಾಡಿದ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ಏಕ ಸದಸ್ಯ ಪೀಠ ವಿಭಾಗೀಯ ಪೀಠಕ್ಕೆ ಉಲ್ಲೇಖಿಸಿತ್ತು.

Bar & Bench

ಅವಧಿ ಮೀರಿದ ಆಹಾರ ಉತ್ಪನ್ನಗಳಿಗೆ ಹೊಸ ಮುಕ್ತಾಯ ದಿನಾಂಕ ಮುದ್ರಿಸಿ ಮರು-ಪ್ಯಾಕ್ ಮಾಡಿ ಇಲ್ಲವೇ ಮರು-ಬ್ರಾಂಡ್ ಮಾಡಿ ಮಾರಾಟ ಮಾಡುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಸ್ವಯಂಪ್ರೇರಿತ ವಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ.

ಜನವರಿ 8ರಂದು ಪ್ರಕರಣ ಆಲಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ  ಮನ್ಮೀತ್ ಪ್ರೀತಮ್ ಸಿಂಗ್ ಅರೋರ ಅವರಿದ್ದ ವಿಭಾಗೀಯ ಪೀಠ ಕೇಂದ್ರ, ದೆಹಲಿ ಸರ್ಕಾರ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಹಾಗೂ ದೆಹಲಿ ಪೊಲೀಸರ ಪ್ರತಿಕ್ರಿಯೆ ಕೇಳಿದೆ.

ಪ್ರಕರಣದ ವಿಚಾರಣೆ ನಡೆಯಲಿರುವ ಫೆಬ್ರವರಿ 8ರೊಳಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಾಲಯ ಪ್ರತಿವಾದಿಗಳಿಗೆ ಸೂಚಿಸಿದೆ. ಪ್ರಕರಣದಲ್ಲಿ ವಕೀಲೆ ಶ್ವೇತಾಶ್ರೀ ಮಜುಂದಾರ್ ಅವರನ್ನು ಅಮಿಕಸ್ ಕ್ಯೂರಿಯಾಗಿ ನ್ಯಾಯಪೀಠ ನೇಮಿಸಿದೆ.

ಪ್ರಕರಣವನ್ನು ನ್ಯಾ. ಪ್ರತಿಭಾ ಎಂ ಸಿಂಗ್‌ ಅವರಿದ್ದ ಏಕಸದಸ್ಯ ಪೀಠ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅವರಿಗೆ ಉಲ್ಲೇಖಿಸಿದ ಹಿನ್ನೆಲೆಯಲ್ಲಿ ವಿಭಾಗೀಯ ಪೀಠ ಸ್ವಯಂ ಪ್ರೇರಿತವಾಗಿ ಪಿಐಎಲ್ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದೆ.

ತನ್ನ ಉತ್ಪನ್ನಗಳನ್ನು ಮರು ಪ್ಯಾಕ್‌ ಮಾಡುವ ಇಲ್ಲವೇ ಮರು ಬ್ರಾಂಡ್‌ ಮಾಡಿ ಮಾರಾಟ ಮಾಡುವ ಕೆಲ ನಕಲಿ ಕಂಪೆನಿಗಳಿಗೆ ತಡೆ ನೀಡುವಂತೆ ಕೋರಿ ಪ್ರಸಿದ್ಧ ಚಾಕೊಲೇಟ್‌ ತಯಾರಿಕಾ ಕಂಪೆನಿ ಹರ್ಶೀ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾ. ಪ್ರತಿಭಾ ನಡೆಸಿದ್ದರು. ಅನೇಕ ಸಂದರ್ಭಗಳಲ್ಲಿ ಅವಧಿ ಮೀರಿದ ಉತ್ಪನ್ನಗಳನ್ನು ಈ ನಕಲಿ ಕಂಪೆನಿಗಳು ಮಾರಾಟ ಮಾಡುತ್ತಿದ್ದುದು ಕಂಡುಬಂದಿತ್ತು.

ಮೊಕದ್ದಮೆಯು ಸಾರ್ವಜನಿಕ ಆರೋಗ್ಯವನ್ನು ಅದರಲ್ಲಿಯೂ ಆಹಾರದ ವಿಚಾರ ಒಳಗೊಳ್ಳುವ ಅಸಾಧಾರಣ ಪರಿಸ್ಥಿತಿಯನ್ನು ಹೊರಗೆಳೆಯುತ್ತದೆ ಎಂದು ಏಕ ಸದಸ್ಯ ಪೀಠ ಹೇಳಿತ್ತು.

ಅವಧಿ ಮೀರಿದ ಉತ್ಪನ್ನಗಳನ್ನು ಮರು-ಪ್ಯಾಕ್‌ ಮಾಡಿ ಅಥವಾ ಹೊಸ ಎಕ್ಸ್‌ಪೈರಿ ದಿನದೊಂದಿಗೆ ಮರು-ಬ್ರ್ಯಾಂಡ್‌ ಮಾಡಿ ಮಾರಾಟ ಮಾಡುವ ಒಂದು ಸಂಘಟಿತ ಮತ್ತು ವ್ಯವಸ್ಥಿತ ಕಾರ್ಯವಿಧಾನವಿದೆ ಎಂಬುದು ಸ್ಪಷ್ಟವಾಗಿದೆ ಎಂದ ನ್ಯಾ. ಪ್ರತಿಭಾ ದೆಹಲಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರವಾದ ತನಿಖೆ ನಡೆಸಬೇಕು ಎಂದು ಆದೇಶಿಸಿದ್ದರು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Court on its own motion v Atul Jalan Trading as Akshat Online Traders and Ors.pdf
Preview