Courtroom 
ಸುದ್ದಿಗಳು

ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಡಲು ಉಚಿತ ಕಾನೂನು ಸೇವೆ ಒದಗಿಸಿ: ವಕೀಲರೊಬ್ಬರಿಗೆ ದೆಹಲಿ ಹೈಕೋರ್ಟ್ ಷರತ್ತು

ಪ್ರಕರಣವೊಂದರಲ್ಲಿ ವಾದ ಮಂಡಿಸುವಾಗ ನ್ಯಾಯಾಧೀಶರತ್ತ ಕೈಬೆರಳು ತೋರಿಸಿ ಆಕ್ರಮಣಕಾರಿಯಾಗಿ ವರ್ತಿಸಿದ್ದಕ್ಕಾಗಿ ವಕೀಲರೊಬ್ಬರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಹೂಡಲಾಗಿತ್ತು.

Bar & Bench

ದೆಹಲಿಯ ಸಾಕೇತ್‌ನಲ್ಲಿರುವ ಪೋಕ್ಸೊ ನ್ಯಾಯಾಲಯದಲ್ಲಿ ಕನಿಷ್ಠ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಉಚಿತ ಕಾನೂನು ಸೇವೆ ಒದಗಿಸಿದರೆ ತಮ್ಮ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಡಲಾಗುವುದು ಎಂದು ವಕೀಲರೊಬ್ಬರಿಗೆ ದೆಹಲಿ ಹೈಕೋರ್ಟ್‌ ಈಚೆಗೆ ಷರತ್ತು ವಿಧಿಸಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ, 2012ರ (ಪೋಕ್ಸೊ ಕಾಯಿದೆ) ಅಡಿಯಲ್ಲಿ ಅಪರಾಧ ಎಸಗಿದ ಆರೋಪ ಹೊತ್ತಿರುವ ವ್ಯಕ್ತಿಯ ಪರವಾಗಿ ವಿಚಾರಣಾ ನ್ಯಾಯಾಲಯದಲ್ಲಿ ವಾದ ಮಂಡಿಸುವಾಗ ವಕೀಲ ಶಿವಾಂಶು ಗುನ್ವಾಲ್‌ ಆಕ್ರಮಣಕಾರಿಯಾಗಿ ವರ್ತಿಸಿದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಾಗಿತ್ತು. ನಂತರ ತಮ್ಮ ವರ್ತನೆಗೆ ಅವರು ಕ್ಷಮೆ ಯಾಚಿಸಿದ್ದರು.

ಕ್ಷಮೆಯಾಚನೆಗೆ ನ್ಯಾಯಮೂರ್ತಿಗಳಾದ ಪ್ರತಿಭಾ ಎಂ ಸಿಂಗ್ ಮತ್ತು ರಜನೀಶ್ ಕುಮಾರ್ ಗುಪ್ತಾ ಅವರನ್ನೊಳಗೊಂಡ ವಿಭಾಗೀಯ ಪೀಠ ಒಪ್ಪಿತಾದರೂ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಸೂಚಿಸುವ ಕನಿಷ್ಠ ಎರಡು ಪೋಕ್ಸೊ ಪ್ರಕರಣಗಳಲ್ಲಿ ವಕೀಲ ಉಚಿತ ಕಾನೂನು ಸೇವೆ ನೀಡಬೇಕು ಎಂದು ಮಾರ್ಚ್‌ 12ರಂದು  ಷರತ್ತು ವಿಧಿಸಿತು.

ಅನಗತ್ಯ ಆಕ್ರಮಣಶೀಲತೆ ಮತ್ತು ನ್ಯಾಯಾಲಯದಲ್ಲಿ ಅಗೌರವ ತೋರುವಂತೆ ಧ್ವನಿ ಎರಿಸುವುದನ್ನು ಸಹಿಸಲಾಗದು.
ದೆಹಲಿ ಹೈಕೋರ್ಟ್

ನವೆಂಬರ್ 23, 2024 ರಂದು ಸಾಕೇತ್ ನ್ಯಾಯಾಲಯದಲ್ಲಿ ಪೋಕ್ಸೊ ಪ್ರಕರಣದ ವಿಚಾರಣೆಯ ಸಮಯದಲ್ಲಿ ಆಕ್ರಮಣಕಾರಿಯಾಗಿ ನಡೆದುಕೊಂಡ, ಧ್ವನಿ ಏರಿಸಿದ, ನ್ಯಾಯಾಧೀಶರತ್ತ ಬೆರಳು ಮಾಡಿದ, ನ್ಯಾಯಾಲಯದ ವಿವೇಚನಾಧಿಕಾರವನ್ನು ಪ್ರಶ್ನಿಸಿದ ಆರೋಪಕ್ಕೆ ವಕೀಲ ಶಿವಾಂಶು ಗುರಿಯಾಗಿದ್ದರು. ಪದೇ ಪದೇ ಎಚ್ಚರ ನೀಡಿದ್ದರೂ ವಾದ ಮುಂದುವರೆಸುತ್ತಾ ವಿಚಾರಣೆಗೆ ಅಡ್ಡಿ ಪಡಿಸಿ ಅದನ್ನು ವಿಳಂಬಗೊಳಿಸಿದ ಆರೋಪ ಅವರ ಮೇಲಿತ್ತು.

ʼನೀವು ನನಗೆ ಕಾನೂನಿನ ಬಗ್ಗೆ ಹೇಳಿಕೊಡಿʼ, ನೀವು ಈಗಲೇ ಆರೋಪಿಗೆ ಏಕೆ ಶಿಕ್ಷೆ ವಿಧಿಸಬಾರದುʼ ಎಂದು ನ್ಯಾಯಾಧೀಶರನ್ನು ಉದ್ದೇಶಿಸಿ ಅವರು ಹೇಳಿದ್ದರು ಎಂದು ವಿಚಾರಣಾ ನ್ಯಾಯಾಲಯ ತನ್ನ ಆದೇಶದಲ್ಲಿ ದಾಖಲಿಸಿತ್ತು. ಅರ್ಜಿದಾರರ ಪರವಾಗಿ ವಾದಿಸುವ ತನ್ನ ವಕಾಲತ್‌ನಾಮೆಯನ್ನು ಹಿಂಪಡೆದಿದ್ದ ವಕೀಲ ಕೆಲವರೊಂದಿಗೆ ನ್ಯಾಯಾಲಯದ ಕೊಠಡಿಯಲ್ಲಿಯೇ ಉಳಿದಿದ್ದರು. ಬೆದರಿಕೆಯ ವಾತಾವರಣ ಸೃಷ್ಟಿಸಿದ್ದಲ್ಲದೆ ನ್ಯಾಯಾಧೀಶರ ವಿರುದ್ಧ ದೂರು ದಾಖಲಿಸುವುದಾಗಿ ಹೆದರಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ಈ ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿತ್ತು.

ವಿಚಾರಣೆ ವೇಳೆ ವಕೀಲ ಶಿವಾಂಶು ಅವರು ಕ್ಷಮೆಯಾಚಿಸುವ ಜೊತೆಗೆ ಎರಡು ಪ್ರಕರಣಗಳಲ್ಲಿ ಅವರು ಉಚಿತ ಕಾನೂನು ಸೇವೆ ಒದಗಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ ಮುಕ್ತಾಯಗೊಳಿಸಿತು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Court_in_its_own_motion_Vs_Gunwal.pdf
Preview