Delhi High Court 
ಸುದ್ದಿಗಳು

ʼಡೌರಿ ಕ್ಯಾಲ್ಕ್ಯುಲೇಟರ್ʼ ಜಾಲತಾಣ ನಿರ್ಬಂಧ: ಕೇಂದ್ರದ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್

ʼವರದಕ್ಷಿಣೆ ಶಬ್ದ ಕೇಳುವುನ್ನು ನಿಲ್ಲಿಸಿದರೆ ಸಾಕು ವರದಕ್ಷಿಣೆ ದೂರವಾಗುತ್ತದೆ ಎಂದು ಸರ್ಕಾರ ಅಂದುಕೊಂಡಂತಿದೆʼ ಎಂದು ಜಾಲತಾಣದ ಪರ ವಕೀಲರು ತಿಳಿಸಿದರು. ʼಜಾಲತಾಣ ಕ್ರಿಯಾಶೀಲತೆಯಿಂದ ಕೂಡಿದೆʼ ಎಂದು ನ್ಯಾ. ಪ್ರತಿಭಾ ಪ್ರತಿಕ್ರಿಯಿಸಿದರು.

Bar & Bench

ವಿಡಂಬನಾತ್ಮಕ ಜಾಲತಾಣ ʼಡೌರಿ ಕ್ಯಾಲ್ಕ್ಯುಲೇಟರ್‌ʼ ನಿರ್ಬಂಧಿಸುವ ನಿರ್ಧಾರ ಪ್ರಶ್ನಿಸಿ ಜಾಲತಾಣದ ಮಾಲೀಕರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಸೋಮವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಸರ್ಕಾರ ಮತ್ತು ಅರ್ಜಿದಾರರು ತಮ್ಮ ಲಿಖಿತ ವಾದ ಮಂಡಿಸುವಂತೆ ಸೂಚಿಸಿದ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು ಪ್ರಕರಣವನ್ನು ವಿಚಾರಣೆಗಾಗಿ ಮೇ 15ಕ್ಕೆ ಪಟ್ಟಿ ಮಾಡಿದರು.

ತನುಲ್‌ ಠಾಕೂರ್‌ ಎಂಬುವವರು 2011ರಲ್ಲಿ ರೂಪಿಸಿದ್ದ ಈ ಜಾಲತಾಣವನ್ನು ಜುಲೈ 2018ರಲ್ಲಿ ಅಂದಿನ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರ ದೂರಿನ ಮೇರೆಗೆ ಸರ್ಕಾರ ನಿರ್ಬಂಧಿಸಿತ್ತು.

ಜಾಲತಾಣ ತಡೆಯುವ ಆದೇಶ ಕುರಿತಂತೆ ನಿರ್ಧಾರೋತ್ತರ ವಿಚಾರಣೆಗೆ ತನುಲ್‌ ಅವರಿಗೆ ಅವಕಾಶ ನೀಡಬೇಕೆಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ರಚಿಸಿದ್ದ ಸಮಿತಿಗೆ ಹೈಕೋರ್ಟ್‌ ನಿರ್ದೇಶಿಸಿತ್ತು. ಆದರೆ  ಜಾಲತಾಣವನ್ನು ನಿರ್ಬಂಧಿಸುವ ನಿರ್ಧಾರವನ್ನು ಮುಂದುವರೆಸುವಂತೆ ಸಮಿತಿ ಶಿಫಾರಸು ಮಾಡಿದ್ದರಿಂದ ಇಲ್ಲಿಯವರೆಗೆ ನಿರ್ಬಂಧ ಮುಂದುವರೆದಿದೆ ಎಂದು ಇಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ತನುಲ್‌ ಅವರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಸಿದ್ಧಾರ್ಥ್‌ ಅಗರ್‌ವಾಲ್‌ ಅವರು ಸಾಮಾಜಿಕ ಅನಿಷ್ಟವಾದ ವರದಕ್ಷಿಣೆಯನ್ನು ಗೇಲಿ ಮಾಡಲು ಜಾಲತಾಣ ರೂಪುಗೊಂಡಿದೆ. ಆದರೆ ಜಗತ್ತಿನ ದೃಷ್ಟಿಯಲ್ಲಿ ಭಾರತವನ್ನು ಅದು ದೂಷಿಸುತ್ತದೆ ಎಂಬುದು ಸರ್ಕಾರದ ನಿಲುವಾಗಿದೆ” ಎಂದರು.

"ಇದು ಉಚಿತ ಜಾಲತಾಣ, ಆದಾಯ ಶೂನ್ಯ... ಇದು ಕನ್ನಡಿಯಂತೆ ಇದ್ದುದ್ದನ್ನು ಇದ್ದಂತೆ ತೋರಿಸುತ್ತದೆ... ವರದಕ್ಷಿಣೆ ಎಂಬ ಶಬ್ದ ಕೇಳುವುನ್ನು ನಿಲ್ಲಿಸಿದರೆ ಸಾಕು ವರದಕ್ಷಿಣೆ ದೂರವಾಗುತ್ತದೆ ಎಂದು ಸರ್ಕಾರ ಅಂದುಕೊಂಡಂತಿದೆ" ಎಂದು ಅಗರ್‌ವಾಲ್‌ ಆಕ್ಷೇಪಿಸಿದರು. ಇದೇ ವೇಳೆ ನ್ಯಾ. ಪ್ರತಿಭಾ ಸಿಂಗ್‌ ʼಜಾಲತಾಣ ಕ್ರಿಯಾಶೀಲತೆಯಿಂದ ಕೂಡಿದೆʼ ಎಂದು ಪ್ರತಿಕ್ರಿಯಿಸಿದರು.

ಕೇಂದ್ರ ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಗೈರುಹಾಜರಾದ ಹಿನ್ನೆಲೆಯಲ್ಲಿ ಪೀಠ ಪ್ರಕರಣವನ್ನು ಮೇ ತಿಂಗಳಿಗೆ ಮುಂದೂಡಿತು. ತನುಲ್‌ ಅವರನ್ನು ಇಂಟರ್‌ನೆಟ್ ಫ್ರೀಡಂ ಫೌಂಡೇಶನ್ (ಐಎಫ್‌ಎಫ್‌) ಪ್ರತಿನಿಧಿಸಿತ್ತು.