ಅಪ್ರಾಪ್ತ ವಯಸ್ಕಳೊಂದಿಗೆ ಓಡಿಹೋದ ಕಾರಣಕ್ಕೆ ಅತ್ಯಾಚಾರ ಮತ್ತು ಅಪಹರಣ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧದ ಪ್ರಕರಣವನ್ನು ದೆಹಲಿ ಹೈಕೋರ್ಟ್ ಈಚೆಗೆ ರದ್ದುಗೊಳಿಸಿದೆ.
ಪ್ರಕರಣ ರದ್ದುಗೊಳಿಸಿದ ನ್ಯಾಯಮೂರ್ತಿ ಸ್ವರಣ ಕಾಂತಾ ಶರ್ಮಾ , "ಇಬ್ಬರು ವ್ಯಕ್ತಿಗಳ ನಡುವಿನ ನಿಜವಾದ ಪ್ರೀತಿಯನ್ನು, ಅವರಲ್ಲಿ ಒಬ್ಬರು ಅಪ್ರಾಪ್ತರಾಗಿರಲಿ ಅಥವಾ ಇಬ್ಬರೂ ಅಪ್ರಾಪ್ತರಾಗಿರಲಿ ಇಲ್ಲವೇ ಇಬ್ಬರೂ ಪ್ರೌಢ ವಯಸ್ಸಿನ ಸಮೀಪವಿರುವ ಅಪ್ರಾಪ್ತ ವಯಸ್ಕರಾಗಿರಲಿ, ಅವರನ್ನು ಕಾನೂನಿನ ಕಾಠಿಣ್ಯ ಅಥವಾ ಪ್ರಭುತ್ವದ ಕ್ರಮದ ಮೂಲಕ ನಿಯಂತ್ರಿಸಬಾರದು ಎಂಬ ತೀರ್ಮಾನಕ್ಕೆ ಈಗಾಗಲೇ ಹಲವು ಬಾರಿ ಈ ನ್ಯಾಯಾಲಯ ಬಂದಿದೆ" ಎಂದು ತಿಳಿಸಿದರು.
ನ್ಯಾಯದ ತಕ್ಕಡಿಯನ್ನು ಸರಿದೂಗಿಸುವುದಕ್ಕಾಗಿ ಯಾವಾಗಲೂ ಗಣಿತದ ನಿಖರತೆಯನ್ನು ಬಳಸಬೇಕಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು. "...ಕೆಲವೊಮ್ಮೆ, ತಕ್ಕಡಿಯ ಒಂದು ಬದಿಯಲ್ಲಿ ಕಾನೂನು ಇದ್ದರೆ , ಅದರ ಇನ್ನೊಂದು ಬದಿಯಲ್ಲಿ ಅಂಬೆಗಾಲಿಡಲಿರುವ ಚಿಣ್ಣರು, ಅವರ ಪೋಷಕರು ಹಾಗೂ ಆ ಪೋಷಕರನ್ನು ಹೆತ್ತವರ ಇಡೀ ಜೀವನ, ಖುಷಿ ಹಾಗೂ ಭವಿಷ್ಯವ ಇರುತ್ತದೆ" ಎಂದು ಭಾವಾನಾತ್ಮಕವಾಗಿ ವ್ಯಾಖ್ಯಾನಿಸಿದರು.
ತಾನು 2015ರಲ್ಲಿ ಅಪ್ರಾಪ್ತ ವಯಸ್ಕಳೊಂದಿಗೆ ಪಲಾಯನ ಮಾಡಿದ್ದ ಹಿನ್ನೆಲೆಯಲ್ಲಿ ಆಕೆಯ ಪೋಷಕರು ತನ್ನ ವಿರುದ್ಧ ದಾಖಲಿಸಿದ್ದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಆರಿಫ್ ಖಾನ್ ಎಂಬ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ದಂಪತಿ ಒಂದೇ ಧರ್ಮಕ್ಕೆ ಸೇರಿದವರಾಗಿದ್ದರಿಂದ ಮುಸ್ಲಿಂ ವಿಧಿ ವಿಧಾನದಂತೆ ವಿವಾಹವಾಗಿದ್ದರು.
ಖಾನ್ ಅವರ ಬಂಧನವಾದಾಗ ಅವರ ಪತ್ನಿ ಐದು ತಿಂಗಳ ಗರ್ಭಿಣಿಯಾಗಿದ್ದರು. ತನ್ನ ಗರ್ಭದಲ್ಲಿರುವ ಮಗು ತಮ್ಮ ಪ್ರೀತಿಯ ಧ್ಯೋತಕವಾಗಿದ್ದು ಗರ್ಭಪಾತ ಬೇಡ ಎಂದು ಆಕೆ ವಿನಂತಿಸಿಕೊಂಡಿದ್ದರು.
ಏಪ್ರಿಲ್ 2018ರಲ್ಲಿ ಜಾಮೀನು ಪಡೆಯುವ ಮೊದಲು ಖಾನ್ ಸುಮಾರು ಮೂರು ವರ್ಷಗಳ ಕಾಲ ಜೈಲಿನಲ್ಲಿದ್ದರು. ತರುವಾಯ, ದಂಪತಿ ಮತ್ತೆ ಒಂದಾಗಿದ್ದರು. ಮತ್ತೊಬ್ಬ ಪುತ್ರಿಗೆ ಜನ್ಮ ನೀಡಿದ್ದರು.
ಖಾನ್ ಅವರನ್ನು ಇಷ್ಟಪಟ್ಟು ಮಹಿಳೆ ಮದುವೆಯಾಗಿದ್ದು ಘಟನೆ ವೇಳೆ ಆಕೆಗೆ 18 ವರ್ಷ ವಯಸ್ಸಾಗಿತ್ತು ಎಂಬುದಾಗಿ ಮಹಿಳೆ ಪರ ವಕೀಲರು ವಾದಿಸಿದರು. ಆದರೆ ಶಾಲಾ ದಾಖಲಾತಿ ಪ್ರಕಾರ ಆಕೆಗೆ 18 ವರ್ಷ ತುಂಬಿರಲಿಲ್ಲ ಎಂಬುದು ದೆಹಲಿ ಪೊಲೀಸರ ವಾದವಾಗಿತ್ತು.
ವಾಸ್ತವಾಂಶಗಳನ್ನು ಪರಿಶೀಲಿಸಿದ ನಂತರ, ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಪಕ್ಷಕಾರರು ವಿವಾಹವಾಗಿರುವುದನ್ನು ಗಮನಿಸಿದ ನ್ಯಾಯಾಲಯ ಹೆಂಡತಿ ಹೆಜ್ಜೆ ಹೆಜ್ಜೆಗೂ ಗಂಡನ ಬೆಂಬಲಕ್ಕೆ ನಿಂತಿರುವುದನ್ನು ಹಾಗೂ ಅವರಿಗೆ ಇಬ್ಬರು ಹೆಣ್ಣುಮಕ್ಕಳಿರುವುದನ್ನು ಗಣನೆಗೆ ತೆಗೆದುಕೊಂಡಿತು.
ʼಒಬ್ಬ ಮಗಳಿಗೆ ಎಂಟು ವರ್ಷವಾಗಿದ್ದು ಆಕೆ ಶಾಲೆಗೆ ಹೋಗುತ್ತಿದ್ದಾಳೆ. ಮತ್ತೊಬ್ಬ ಮಗಳಿಗೆ ಎರಡೂವರೆ ವರ್ಷವಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಗೃಹಿಣಿಯಾಗಿರುವ ಪತ್ನಿ ಕಟ್ಟಿಕೊಂಡಿರುವ ಸುಂದರ ಸಾಮರಸ್ಯದ ಬದುಕು ಈಗ ಅಪಾಯದಲ್ಲಿದೆʼ ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿತು.
ತಾನು ಪ್ರಕರಣ ರದ್ದುಗೊಳಿಸದೆ ಇದ್ದರೆ ನಿಜವಾದ ನ್ಯಾಯಕ್ಕೆ ಸೋಲುಂಟಾಗುತ್ತದೆ ಎಂದ ಪೀಠ ಖಾನ್ ಅವರ ವಿರುದ್ಧದ ಪ್ರಕರಣ ರದ್ದುಗೊಳಿಸಿತು. ಅರ್ಜಿದಾರರ ಪರವಾಗಿ ವಕೀಲರಾದ ಧೀರಜ್ ಕುಮಾರ್ ಸಿಂಗ್ ಮತ್ತು ರಂಜನ್ ಕುಮಾರ್ ವಾದ ಮಂಡಿಸಿದ್ದರು. ಸರ್ಕಾರವನ್ನು ವಕೀಲ ಅಮೋಲ್ ಸಿನ್ಹಾ ಪ್ರತಿನಿಧಿಸಿದ್ದರು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]