Deepfake and Delhi High Court 
ಸುದ್ದಿಗಳು

[ಲೋಕಸಭೆ ಚುನಾವಣೆ] ಡೀಪ್‌ಫೇಕ್‌ ವಿಡಿಯೋ ಬಗ್ಗೆ ಇಸಿಐ ಕ್ರಮಕೈಗೊಳ್ಳುವ ವಿಶ್ವಾಸ ಇದೆ ಎಂದ ದೆಹಲಿ ಹೈಕೋರ್ಟ್

ಆದರೆ ಪದೇ ಪದೇ ನಕಲಿ ವೀಡಿಯೊಗಳನ್ನು ಪ್ರಸಾರ ಮಾಡುವ ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಅವರ ಹೆಸರನ್ನು ಸಾರ್ವಜನಿಕ ತಾಣದಲ್ಲಿ ಪ್ರಕಟಿಸಬೇಕು ಎಂದು ನ್ಯಾಯಾಲಯ ಮೌಖಿಕವಾಗಿ ಸೂಚಿಸಿತು.

Bar & Bench

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಡೀಪ್‌ಫೇಕ್ ವಿಡಿಯೋ ಪ್ರಸಾರ ತಡೆಯುವ ಸಂಬಂಧ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶನ ನೀಡಲು ದೆಹಲಿ ಹೈಕೋರ್ಟ್ ಗುರುವಾರ ನಿರಾಕರಿಸಿದೆ.

ಚುನಾವಣಾ ಸಮಯದಲ್ಲಿ ನ್ಯಾಯಾಲಯ ಅಂತಹ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ ಮತ್ತು ಭಾರತೀಯ ಚುನಾವಣಾ ಆಯೋ (ಇಸಿಐ) ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದು ತನಗೆ ವಿಶ್ವಾಸ ಇರುವುದಾಗಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಜಯಂತ್ ಮೆಹ್ತಾ ಅವರು, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ಸಂಬಂಧಿಸಿದ ಯಾವುದೇ ರಾಜಕೀಯ ಜಾಹೀರಾತನ್ನು ಇಸಿಐ ಪ್ರಮಾಣೀಕರಿಸುತ್ತದೆ. ಅಂತೆಯೇ ಸಾಮಾಜಿಕ ಮಾಧ್ಯಮಗಳಲ್ಲಿನ ವಸ್ತುವಿಷಯಗಳಿಗೂ ಇದೇ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

 ಆದರೆ, ಈ ಸಲಹೆ ಸೂಕ್ತವಲ್ಲದೆ ಇರಬಹುದು. ಇದು ತುಂಬಾ ಕಷ್ಟಕರವಾಗಿರಲಿದ್ದು ರಾಜಕಾರಣಿಗಳು ಹಾದಿ ಬೀದಿಗಳಲ್ಲಿ ಜನರೊಂದಿಗೆ ಸಂವಹನ ನಡೆಸುತ್ತಾರೆ. ಇದು ರಾಜಕೀಯ ಸಮಾವೇಶದಲ್ಲಿ ಪಾಲ್ಗೊಳ್ಳುವ ರಾಜಕಾರಣಿ ಚುನಾವಣಾ ಆಯೋಗದಿಂದ ಅನುಮತಿ ಪಡೆಯಬೇಕು ಎಂದು ಹೇಳುವಂತಿದೆ ಎಂಬುದಾಗಿ ಪೀಠ ಪ್ರತಿಕ್ರಿಯಿಸಿತು

 ಚುನಾವಣಾ ಆಯೋಗ ಮೇ 6ರೊಳಗೆ ನಿರ್ಧರಿಸಿ ಕ್ರಮ ಕೈಗೊಳ್ಳಲು ಅನುವಾಗುವಂತೆ ಅರ್ಜಿದಾರರು ಪತ್ರ ಬರೆಯಬೇಕು ಎಂದು ಅದು ಸೂಚಿಸಿತು.

ಈ ಮಧ್ಯೆ ಅರ್ಜಿಯಲ್ಲಿ ಉಲ್ಲೇಖಿಸಲಾದ ರಾಜಕಾರಣಿಗಳಾದ ಅಮಿತ್ ಶಾ, ರಾಹುಲ್ ಗಾಂಧಿ, ಬಾಲಿವುಡ್‌ ತಾರೆಯರಾದ ಅಮೀರ್ ಖಾನ್ ಮತ್ತು ರಣವೀರ್ ಸಿಂಗ್ ಅವರ (ಡೀಪ್‌ಫೇಕ್‌) ವೀಡಿಯೊಗಳನ್ನು ತೆಗೆದುಹಾಕಲಾಗಿದ್ದು ಕ್ರಿಮಿನಲ್ ದೂರುಗಳನ್ನು ಸಹ ದಾಖಲಿಸಲಾಗಿದೆ ಎಂದು ಇಸಿಐ ಪೀಠಕ್ಕೆ ಹೇಳಿತು.

ಆದರೆ ಪದೇ ಪದೇ ನಕಲಿ ವೀಡಿಯೊಗಳನ್ನು ಪ್ರಕಟಿಸುವ ಸಾಮಾಜಿಕ ಜಾಲತಾಣದ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಅವರ ಹೆಸರನ್ನು ಸಾರ್ವಜನಿಕ ತಾಣದಲ್ಲಿ (ಪಬ್ಲಿಕ್‌ ಡೊಮೇನ್‌) ಪ್ರಕಟಿಸಬೇಕು ಎಂದು ನ್ಯಾಯಾಲಯ ಈ ಹಂತದಲ್ಲಿ ಮೌಖಿಕವಾಗಿ ಸೂಚಿಸಿತು.

ಡೀಪ್‌ಫೇಕ್ ವಿಡಿಯೋಗಳ ಮರು ಟ್ವೀಟ್‌ ಮಾಡುವುದನ್ನು ಸಹ ನಿಷ್ಕ್ರಿಯಗೊಳಿಸಲು ಸಾಧ್ಯವಾಗುವಂತೆ ಇಸಿಐ ಸಂಭಾವ್ಯ ತಡೆಯಾಜ್ಞೆಯ ಬಗ್ಗೆಯೂ ಯೋಚಿಸಬಹುದು ಎಂದು ನ್ಯಾಯಾಲಯ ನುಡಿಯಿತು.

ಆದರೆ ಈ ಸಂಬಂಧ ಮಾರ್ಗಸೂಚಿ ರೂಪಿಸುವುದಕ್ಕಾಗಿ ಇಸಿಐಗೆ ನಿರ್ದೇಶನ ನೀಡಲು ನ್ಯಾಯಾಲಯ ನಿರಾಕರಿಸಿತು. ಚುನಾವಣೆ ನಡುವೆ ಅಂತಹ ಯಾವುದೇ ನಿರ್ದೇಶನಗಳನ್ನು ನೀಡುವುದಿಲ್ಲ ಎಂದು ಅದು ಹೇಳಿತು.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಡೀಪ್‌ಫೇಕ್ ತಂತ್ರಜ್ಞಾನದ ವ್ಯಾಪಕ ಬಳಕೆಯಿಂದ ಉಂಟಾದ ಸಾರ್ವಜನಿಕ ಹಾನಿ ಮತ್ತು ಪ್ರಜಾಸತ್ತಾತ್ಮಕ ಬಿಕ್ಕಟ್ಟನ್ನು ಪರಿಹರಿಸಲು ಅಗತ್ಯವಾದ ಮಾರ್ಗಸೂಚಿ ಮತ್ತು ಕ್ರಮಗಳನ್ನು ಜಾರಿಗೆ ತರಲು ಇಸಿಐಗೆ ನಿರ್ದೇಶನ ನೀಡುವಂತೆ ಕೋರಿ ಲಾಯರ್ಸ್‌ ವಾಯ್ಸ್‌ ಎಂಬ ವಕೀಲರ ಸಂಸ್ಥೆ  ಅರ್ಜಿ ಸಲ್ಲಿಸಿತ್ತು.