SpiceJet  
ಸುದ್ದಿಗಳು

ಎರಡು ವಿಮಾನ, 3 ಎಂಜಿನ್ ವಾಪಸ್: ಸ್ಪೈಸ್‌ಜೆಟ್‌ಗೆ ನೀಡಿದ್ದ ನಿರ್ದೇಶನ ಎತ್ತಿಹಿಡಿದ ದೆಹಲಿ ಹೈಕೋರ್ಟ್

Bar & Bench

ಎರಡು ಗುತ್ತಿಗೆ ಪಡೆದ ವಿಮಾನಗಳು ಮತ್ತು ಮೂರು ಎಂಜಿನ್‌ಗಳನ್ನು ಟಿಡಬ್ಲ್ಯೂಸಿ ಏವಿಯೇಷನ್ ​​ಕ್ಯಾಪಿಟಲ್‌ಗೆ ಮರಳಿಸುವಂತೆ ಬ್ರಿಟನ್‌ ನ್ಯಾಯಾಲಯ ನೀಡಿದ್ದ ಆದೇಶ ಪಾಲಿಸಬೇಕು ಎಂದು ಸ್ಪೈಸ್‌ಜೆಟ್‌ಗೆ ಸೂಚಿಸಿದ್ದ ಏಕಸದಸ್ಯ ಪೀಠದ ಆದೇಶದಲ್ಲಿ ಮಧ್ಯಪ್ರವೇಶಿಸಲು ದೆಹಲಿ ಹೈಕೋರ್ಟ್‌ ವಿಭಾಗೀಯ ಪೀಠ ಸೋಮವಾರ ನಿರಾಕರಿಸಿದೆ.

ಗುತ್ತಿಗೆದಾರ ಸಂಸ್ಥೆಗೆ ಕಡಿಮೆ ದರದ ವಿಮಾನಯಾನ ಕಲ್ಪಿಸುವ ಸ್ಪೈಸ್‌ಜೆಟ್‌ ಸುಮಾರು ₹ 120 ಕೋಟಿ ಬಾಕಿ ಪಾವತಿಸಬೇಕಿರುವುದರಿಂದ ಯಾವುದೇ ಮಧ್ಯಂತರ ಪರಿಹಾರ ನೀಡುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ರಾಜೀವ್ ಶಕ್ದೇರ್‌ ಮತ್ತು ಅಮಿತ್ ಬನ್ಸಾಲ್ ಅವರಿದ್ದ ಪೀಠ ತಿಳಿಸಿತು.

₹ 120 ಕೋಟಿ ದೊಡ್ಡ ಮೊತ್ತ ಎಂದಿರುವ ನ್ಯಾಯಾಲಯ ಸ್ಪೈಸ್‌ಜೆಟ್‌ ವಿಮಾನಗಳನ್ನು ಬಿಚ್ಚಿ ಎಂಜಿನ್‌ ತೆಗೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದಿತು.

ಸ್ಪೈಸ್‌ಜೆಟ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಅಮಿತ್‌ ಸಿಬಲ್‌, ಕಂಪನಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಗೋ ಏರ್‌ ಗತಿಯೇ ಇದಕ್ಕೂ ಒದಗಿದರೆ ವಿಮಾನಯಾನ ಉದ್ಯಮದಲ್ಲಿ  ಸ್ಪರ್ಧೆ ಇಲ್ಲದಂತಾಗುತ್ತದೆ ಎಂದರು.

ಸ್ಪೈಸ್‌ಜೆಟ್ ತನ್ನ ಮೇಲ್ಮನವಿ ಹಿಂಪಡೆದರೆ ಏಕಸದಸ್ಯ ಪೀಠ ನೀಡಿದ್ದ ಆದೇಶ ಪಾಲಿಸುವುದಕ್ಕೆ ಸಮಯಾವಕಾಶ ನೀಡುವುದಾಗಿ ವಿಭಾಗೀಯ ಪೀಠ ತಿಳಿಸಿತು. ಇದಕ್ಕೆ ತಲೆದೂಗಿದ ನ್ಯಾಯಾಲಯ ಮನವಿ ಹಿಂಪಡೆಯಿತು.

ಜೂನ್ 17ರೊಳಗೆ ವಿಮಾನ, ಎಂಜಿನ್ ಹಾಗೂ ತಾಂತ್ರಿಕ ದಾಖಲೆಗಳನ್ನು ಸ್ಪೈಸ್‌ಜೆಟ್‌ ಮರಳಿಸಬೇಕು ಎಂದು ಪೀಠ ನಂತರ ನುಡಿಯಿತು.

ಎರಡು ಗುತ್ತಿಗೆ ಪಡೆದ ವಿಮಾನಗಳು ಮತ್ತು ಮೂರು ಎಂಜಿನ್‌ಗಳನ್ನು ಟಿಡಬ್ಲ್ಯೂಸಿ ಏವಿಯೇಷನ್ ​​ಕ್ಯಾಪಿಟಲ್‌ಗೆ ಮರಳಿಸುವಂತೆ ಬ್ರಿಟನ್‌ ನ್ಯಾಯಾಲಯ ನೀಡಿದ್ದ ಆದೇಶ ಪಾಲಿಸಬೇಕು ಎಂದು ಸ್ಪೈಸ್‌ಜೆಟ್‌ಗೆ  ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರಿದ್ದ ಏಕಸದಸ್ಯ ಪೀಠ ಮೇ 15ರಂದು ಆದೇಶಿಸಿತ್ತು.