ಸುದ್ದಿಗಳು

ಹದಿನೈದನೇ ಪತ್ರಿಕಾ ಮಂಡಳಿ: ಎಡಿಟರ್ಸ್‌ ಗಿಲ್ಡ್‌ ಹೊರಗಿರಿಸಿದ ಪಿಸಿಐ ನಿರ್ಧಾರವನ್ನು ಎತ್ತಿಹಿಡಿದ ದೆಹಲಿ ಹೈಕೋರ್ಟ್‌

ಪಿಸಿಐ ವಿವಿಧ ನಾಮನಿರ್ದೇಶಿತ ಸದಸ್ಯರನ್ನು ಒಳಗೊಂಡಿದ್ದು, ಮುಖ್ಯವಾಗಿ ಕಾರ್ಯನಿರತ ಪತ್ರಕರ್ತರು, ಸಂಪಾದಕರು, ಸುದ್ದಿ ಸಂಸ್ಥೆಗಳ ಮಾಲೀಕರು/ವ್ಯವಸ್ಥಾಪಕರು, ಶಿಕ್ಷಣ, ಕಾನೂನು ಕ್ಷೇತ್ರದ ತಜ್ಞರು ಹಾಗೂ ಸಂಸದರನ್ನು ಒಳಗೊಳ್ಳುತ್ತದೆ.

Bar & Bench

ಹದಿನೈದನೇ ಅವಧಿಯ ಪತ್ರಿಕಾ ಮಂಡಳಿ ರಚನೆಗಾಗಿ ಭಾರತೀಯ ಪತ್ರಿಕಾ ಮಂಡಳಿ (ಪಿಸಿಐ) ಸೂಚಿಸಿದ “ವ್ಯಕ್ತಿಗಳ ಸಂಘಗಳ” ಪಟ್ಟಿಯಿಂದ ತನ್ನನ್ನು ಹೊರಗಿರಿಸಿರುವುದನ್ನು ಪ್ರಶ್ನಿಸಿ ಭಾರತೀಯ ಸಂಪಾದಕರ ಒಕ್ಕೂಟ (ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ) ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ [ಎಡಿಟರ್ಸ್‌ ಗಿಲ್ಡ್‌ ಆಫ್‌ ಇಂಡಿಯಾ ವರ್ಸಸ್‌ ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾ ಮತ್ತಿತರರು].

ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರ ಪೀಠವು ಸಂಪಾದಕರ ಒಕ್ಕೂಟದ ಅರ್ಜಿಯು ಅತಿಯಾದ ವಿಳಂಬದಿಂದ ಕೂಡಿದ್ದು, ವಿಚಾರಣಾರ್ಹತೆಯ ಕೊರತೆಯನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟಿದೆ.

“ಮೇಲೆ ಹೇಳಿದ ಕಾರಣಗಳಿಗಾಗಿ, 10.09.2024 ರಂದು ನಡೆದ ಪರಿಶೀಲನಾ ಸಮಿತಿಯ ವರದಿ/ಶಿಫಾರಸಿನಲ್ಲಿ ಹಾಗೂ ಅರ್ಜಿದಾರರಿಗೆ ಸಂಬಂಧಿಸಿದಂತೆ ಮಂಡಳಿ ಹೊರಡಿಸಿದ 28.10.2024ರ ಅಧಿಸೂಚನೆಯಲ್ಲಿ ಮಧ್ಯಪ್ರವೇಶಿಸಲು ನಮಗೆ ಯಾವುದೇ ಸೂಕ್ತ ಆಧಾರ ಸಿಗುತ್ತಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಪಿಸಿಐ ವಿವಿಧ "ವ್ಯಕ್ತಿಗಳ ಸಂಘಗಳಿಂದ" ನಾಮನಿರ್ದೇಶಿತ ಸದಸ್ಯರನ್ನು ಒಳಗೊಂಡಿದೆ. ಮುಖ್ಯವಾಗಿ ಕಾರ್ಯನಿರತ ಪತ್ರಕರ್ತರು, ಪತ್ರಿಕಾ ಸಂಪಾದಕರು, ಸುದ್ದಿ ಸಂಸ್ಥೆಗಳ ಮಾಲೀಕರು/ವ್ಯವಸ್ಥಾಪಕರು, ಅಲ್ಲದೆ ಶೈಕ್ಷಣಿಕ, ಕಾನೂನು ಕ್ಷೇತ್ರದ ಸದಸ್ಯರು ಮತ್ತು ಸಂಸದರನ್ನು ಒಳಗೊಳ್ಳುತ್ತದೆ.

ಮತ್ತೊಂದೆಡೆ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾವು 1978 ರಲ್ಲಿ ರಚನೆಯಾಗಿದ್ದು, ಇದರ ಕಾರ್ಯಕಾರಿ ಸಮಿತಿಯು ಶೇಖರ್ ಗುಪ್ತಾ, ರಾಜ್‌ದೀಪ್ ಸರ್ದೇಸಾಯಿ, ರಾಜ್ ಚೆಂಗಪ್ಪ, ಅಶುತೋಷ್ ಮತ್ತು ಇತರ ಪತ್ರಕರ್ತರನ್ನು ಒಳಗೊಂಡಿದೆ.

ಸಂಪಾದಕರ ಒಕ್ಕೂಟವು ತನ್ನ ರಿಟ್ ಅರ್ಜಿಯಲ್ಲಿ, 1978ರ ಪತ್ರಿಕಾ ಮಂಡಳಿಯ ಕಾಯ್ದೆಯ ಸೆಕ್ಷನ್ 5(3)(ಎ) ಅಡಿಯಲ್ಲಿ ಮಾನ್ಯತೆ ಕೋರಿದ್ದ ತನ್ನ ಹಕ್ಕನ್ನು ತಿರಸ್ಕರಿಸುವ ಪಿಸಿಐ ನಿರ್ಧಾರವನ್ನು ಪ್ರಶ್ನಿಸಿತ್ತು. ಈ ಸೆಕ್ಷನ್‌ ಕಾರ್ಯನಿರತ ಪತ್ರಕರ್ತರನ್ನು ಮಂಡಳಿಗೆ ನಾಮನಿರ್ದೇಶನ ಮಾಡುವುದಕ್ಕೆ ಸಂಬಂಧಿಸಿದ್ದಾಗಿದೆ.

ಪರಿಶೀಲನಾ ಸಮಿತಿಯು ಸಂಪಾದಕರ ಒಕ್ಕೂಟದ ಅರ್ಜಿಯನ್ನು ತಿರಸ್ಕರಿಸಲು ಹಲವು ಕಾರಣಗಳನ್ನು ನೀಡಿತ್ತು. ಒಕ್ಕೂಟವು ದಾಖಲೆಗಳ ನೋಟರೀಕೃತ ಪ್ರತಿಗಳನ್ನು ಸಲ್ಲಿಸದೆ ಇರುವುದು, ಆರು ವರ್ಷಗಳಿಂದ ನಿರಂತರವಾಗಿ ತಾನು ಕಾರ್ಯನಿರ್ವಹಿಸಿರುವ ಪುರಾವೆಗಳನ್ನು ನೀಡದೆ ಇರುವುದು, ಸಕ್ಷಮ ಪ್ರಾಧಿಕಾರದಿಂದ ಪ್ರಮಾಣಪತ್ರ ಪಡೆಯಲು ನಿಗದಿತ ನಮೂನೆಯಲ್ಲಿ ಮನವಿ ಸಲ್ಲಿಸಲು ವಿಫಲವಾಗಿರುವುದು, ಯಾವುದೇ ವ್ಯಾಜ್ಯ ಮತ್ತು ವಿವಾದಗಳಿಂದ ತನ್ನ ಹಕ್ಕುಸಾಧನೆಯು ಮುಕ್ತವಾಗಿದೆ ಎನ್ನುವ ಘೋಷಣಾಪತ್ರ ನೀಡದಿರುವುದು ಮುಂತಾದ ಅಂಶಗಳನ್ನು ಅದು ಉಲ್ಲೇಖಿಸಿ ಪರಿಶೀಲನಾ ಸಮಿತಿಯು ಗಿಲ್ಡ್‌ನ ಅರ್ಜಿಯನ್ನು ತಿರಸ್ಕರಿಸಿತ್ತು.

ಆದರೆ, ಈ ನ್ಯೂನತೆಗಳು ಕೇವಲ ತಾಂತ್ರಿಕವಾಗಿದ್ದು, ನಿಯಮಗಳು ಮತ್ತು ನೋಟಿಸ್‌ನ ಅಂಶಗಳನ್ನು ತಾನು ಅದರ ಸಾರ ಮತ್ತು ತಿರುಳಿನ ಹಿನ್ನೆಲೆಯಲ್ಲಿ ಈಡೇರಿಸಿರುವುದಾಗಿ ಒಕ್ಕೂಟವು ವಾದಿಸಿತ್ತು. ಅದರೆ, ನ್ಯಾಯಾಲಯವು ಒಕ್ಕೂಟದ ವಾದವನ್ನು ತಿರಸ್ಕರಿಸಿದ್ದು ಮಂಡಳಿಯು ನಿರ್ಧಾರವನ್ನು ಎತ್ತಿಹಿಡಿದಿದೆ.