ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯೂಎಸ್), ಅನನುಕೂಲಕರ ಗುಂಪು (ಡಿಜಿ) ಮತ್ತು ವಿಶೇಷ ಅಗತ್ಯತೆ ಇರುವ ಮಕ್ಕಳು (ಸಿಡಬ್ಲ್ಯೂಎಸ್‌ಎನ್) ವರ್ಗಗಳ ಅಡಿಯಲ್ಲಿ ನಗರದಲ್ಲಿ ಖಾಸಗಿ ಅನುದಾನರಹಿತ ಶಾಲೆಗಳಿಗೆ ಆಧಾರ್ ಕಡ್ಡಾಯಗೊಳಿಸುವ ದೆಹಲಿ ಸರ್ಕಾರದ ಸುತ್ತೋಲೆಗಳನ್ನು ದೆಹಲಿ ಹೈಕೋರ್ಟ್ ಇತ್ತೀಚೆಗೆ ಅಮಾನತುಗೊಳಿಸಿದೆ [ದೆಹಲಿ ಸರ್ಕಾರ ಮತ್ತು ಶಶಾಂಕ್ ಯಾದವ್ ನಡುವಣ ಪ್ರಕರಣ].
ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಮಗುವಿನ ಸೂಕ್ಷ್ಮ ವೈಯಕ್ತಿಕ ವಿವರಗಳನ್ನು ಪಡೆಯುವುದು ಅವರ ಖಾಸಗಿತನದ ಹಕ್ಕನ್ನು ಉಲ್ಲಂಘಿಸಬಲ್ಲದು ಎಂದು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ನರುಲಾ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.
ಕೆ.ಎಸ್.ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಅವಲಂಬಿಸಿದ ಹೈಕೋರ್ಟ್ ಸರ್ಕಾರದ ಸುತ್ತೋಲೆಗಳು ಮೇಲ್ನೋಟಕ್ಕೆ ಸಾಂವಿಧಾನಿಕ ನಿಬಂಧನೆಗಳಿಗೆ ವ್ಯತಿರಿಕ್ತವಾಗಿವೆ ಎಂದು ಹೇಳಿದೆ.
ಆದ್ದರಿಂದ ಈ ಸುತ್ತೋಲೆಗಳು ಜಾರಿಯಾಗದಂತೆ ಈ ಹಿಂದೆ ತಡೆ ನೀಡಿ ನ್ಯಾ. ಅನುಪ್ ಜೈರಾಮ್ ಭಂಭಾನಿ ಅವರು ನೀಡಿದ್ದ ಆದೇಶದಲ್ಲಿ ಮಧ್ಯಪ್ರವೇಶಿಸಲು ವಿಭಾಗೀಯ ಪೀಠ ನಿರಾಕರಿಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಏಕಸದಸ್ಯ ಪೀಠ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿರುವುದರಿಂದ ಸರ್ಕಾರದ ಮೇಲ್ಮನವಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಅಭಿಪ್ರಾಯಪಟ್ಟ ಪೀಠ ಅದನ್ನು ವಜಾಗೊಳಿಸಿತು. ಸುತ್ತೋಲೆಗಳನ್ನು ಪ್ರಶ್ನಿಸಿ ಐದು ವರ್ಷದ ಮಗುವಿನ ತಂದೆ ಅರ್ಜಿ ಸಲ್ಲಿಸಿದ್ದರು.