"ಫ್ಲೈ ಹೈ" ಅಥವಾ "ಫ್ಲೈ ಹೈಯರ್" ಎಂಬ ಪದಗಳಿಗೆ ಸಂಬಂಧಿಸಿದಂತೆ ಯಾವುದೇ ವಾಣಿಜ್ಯ ಚಿಹ್ನೆ ಹಕ್ಕು ಪಡೆಯುವುದಿಲ್ಲ ಎಂದು ವಿಸ್ತಾರ ಏರ್‌ಲೈನ್ಸ್ ಇತ್ತೀಚೆಗೆ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ (ಫ್ರಾಂಕ್ಫಿನ್ ಏವಿಯೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಟಾಟಾ ಸಿಯಾ ಏರ್‌ಲೈನ್ಸ್ ಲಿಮಿಟೆಡ್ ನಡುವಣ ಪ್ರಕರಣ).
ವಾಯುಯಾನ ಮತ್ತು ಆತಿಥ್ಯದಂತಹ ಕ್ಷೇತ್ರಗಳಲ್ಲಿ ಜನರಿಗೆ ತರಬೇತಿ ನೀಡುವ ಫ್ರಾಂಕ್ಫಿನ್ ಏವಿಯೇಷನ್ ಸರ್ವೀಸಸ್ ಸಲ್ಲಿಸಿದ್ದ ವಾಣಿಜ್ಯ ಚಿಹ್ನೆ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾ. ಪ್ರತಿಭಾ ಎಂ ಸಿಂಗ್ ಅವರಿದ್ದ ಪೀಠಕ್ಕೆ ಈ ಭರವಸೆ ನೀಡಲಾಗಿದೆ.
ʼಫ್ಲೈ ಹೈʼ ಎಂಬ ಪದಕ್ಕೆ ಸಂಬಂಧಿಸಿದಂತೆ ಫ್ರಾಂಕ್ಫಿನ್ ವಾಣಿಜ್ಯ ಚಿಹ್ನೆ ಕೋರಿತ್ತು. 2018ರ ಜಾಹೀರಾತು ಅಭಿಯಾನದಲ್ಲಿ ವಿಸ್ತಾರ ʼಫ್ಲೈ ಹೈಯರ್ʼ ಘೋಷಣೆ ಬಳಸಲಾರಂಭಿಸಿತು. ಈ ಹಿನ್ನೆಲೆಯಲ್ಲಿ ಫೆಬ್ರವರಿ 2022 ರಲ್ಲಿ, ಫ್ರಾಂಕ್ಫಿನ್ ಪರಿಹಾರ ಕೋರಿದಾಗ ಹೈಕೋರ್ಟ್ ಈ ಘೋಷಣೆ ಬಳಸದಂತೆ ವಿಸ್ತಾರಕ್ಕೆ ನಿರ್ಬಂಧ ವಿಧೀಸಿತ್ತು. ಆದರೆ ಆದೇಶವನ್ನು ನವೆಂಬರ್ 2022ರಲ್ಲಿ ತೆರವುಗೊಳಿಸಲಾಗಿತ್ತು.
ವಿವಾದಕ್ಕೆ ಅಂತ್ಯ ಹಾಡಲು ಮುಂದಾದ ವಿಸ್ತಾರ ಕಳೆದ ಜುಲೈನಲ್ಲಿ ಫ್ರಾಂಕ್ಫಿನ್‌ಗೆ ಪರಿಹಾರದ ವಿಚಾರ ಪ್ರಸ್ತಾಪಿಸಿತು. ವಿಸ್ತಾರಾದ ಜಾಹೀರಾತುಗಳಲ್ಲಿ ಈ ಎರಡು ಚಿಹ್ನೆಗಳನ್ನು ವಾಣಿಜ್ಯ ಚಿಹ್ನೆ ರೂಪದಲ್ಲಿ ತಾನು ಬಳಸುವುದಿಲ್ಲ ಮತ್ತು ಅದಕ್ಕೆ ಫ್ರಾಂಕ್ಫಿನ್ ಒಪ್ಪುವುದಾದರೆ "ಫ್ಲೈ ಹೈ" ಅಥವಾ "ಫ್ಲೈ ಹೈಯರ್" ಪದಗಳನ್ನು ವಾಣಿಜ್ಯ ಚಿಹ್ನೆಯಾಗಿ ನೋಂದಾಯಿಸಲು ತಾನು ಅರ್ಜಿ ಸಲ್ಲಿಸುವುದಿಲ್ಲ ಎಂದು ಟಾಟಾ ಒಡೆತನದ ವಿಮಾನಯಾನ ಸಂಸ್ಥೆ ʼವಿಸ್ತಾರʼ ತಿಳಿಸಿತು.
ಘೋಷಣೆಗಳನ್ನು ವಾಣಿಜ್ಯ ಚಿಹ್ನೆಯಾಗದಂತೆ ಬಳಸಲು ತನ್ನ ಆಕ್ಷೇಪವಿಲ್ಲ ಎಂದು ಫ್ರಾಂಕ್ಫಿನ್ ಏವಿಯೇಷನ್ ಹೇಳಿದ್ದನ್ನು ಡಿಸೆಂಬರ್ 4ರ ಆದೇಶದಲ್ಲಿ, ನ್ಯಾ. ಸಿಂಗ್ ಅವರಿದ್ದ ಪೀಠ ಪರಿಗಣಿಸಿತು.
ವಾಣಿಜ್ಯ ಚಿಹ್ನೆಯ ರೂಪದಲ್ಲಿ ಫ್ಲೈ ಹೈಯರ್ ಪದವನ್ನು ತಾನು ಬಳಸುವುದಿಲ್ಲ. ʼಫ್ಲೈ ಹೈʼ ಘೋಷಣೆಗೆ ಸಂಬಂಧಿಸಿದಂತೆ ಫ್ರಾಂಕ್ಫಿನ್ ಏವಿಯೇಷನ್‌ನ ವಾಣಿಜ್ಯ ಚಿಹ್ನೆ ಹಕ್ಕನ್ನು ತಾನು ವಿರೋಧಿಸುವುದಿಲ್ಲ ಎಂದು ವಿಸ್ತಾರ ಒಪ್ಪಿಕೊಂಡಿರುವುದಾಗಿ ದಾಖಲಿಸಿದ ಪೀಠ ಫ್ರಾಂಕ್ಫಿನ್ ಏವಿಯೇಷನ್ ಸಲ್ಲಿಸಿದ ಮೊಕದ್ದಮೆಯನ್ನು ವಿಲೇವಾರಿ ಮಾಡಿತು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]