ಸುದ್ದಿಗಳು

ಪ್ರಾಚಾ ಕಚೇರಿ ಮೇಲೆ ಪೊಲೀಸ್ ದಾಳಿ ಪ್ರಕರಣ: ಆಕ್ರೋಶ ವ್ಯಕ್ತಪಡಿಸಿದ ದೆಹಲಿ ಹೈಕೋರ್ಟ್‌ ಮಹಿಳಾ ವಕೀಲರ ಸಂಘ

Bar & Bench

ಸಿಎಎ ಕಾಯಿದೆ ವಿರೋಧಿಸಿ ಪ್ರತಿಭಟನೆ ನಡೆಸಿ ಬಂಧಿತರಾಗಿದ್ದವರ ಪರ ಕಾನೂನಾತ್ಮಕ ಹೋರಾಟ ನಡೆಸುತ್ತಿದ್ದ ಹಿರಿಯ ನ್ಯಾಯವಾದಿ ಮೆಹ್ಮೂದ್ ಪ್ರಾಚಾ ಅವರ ಕಚೇರಿ ಮೇಲೆ ದೆಹಲಿ ಪೊಲೀಸರು ಗುರುವಾರ ನಡೆಸಿದ್ದ ದಾಳಿಯನ್ನು ದೆಹಲಿ ಹೈಕೋರ್ಟ್ ಮಹಿಳಾ ವಕೀಲರ ವೇದಿಕೆ ಖಂಡಿಸಿದೆ. ಈ ಸಂಬಂಧ ದೆಹಲಿ ಹೈಕೋರ್ಟ್ ವಕೀಲರ ಸಂಘದ (ಡಿಎಚ್ಸಿಬಿಎ) ಅಧ್ಯಕ್ಷ ಮೋಹಿತ್ ಮಾಥುರ್ ಅವರಿಗೆ ಪತ್ರ ಬರೆದಿರುವ ವೇದಿಕೆಯ ಸದಸ್ಯೆಯರು “ವಕೀಲರನ್ನು ಪೊಲೀಸರು ಕ್ರಿಮಿನಲ್ ಪ್ರಕರಣಗಳ ಆರೋಪಿಗಳ ರೀತಿ ನಡೆಸಿಕೊಳ್ಳುತ್ತಿದ್ದಾರೆ” ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ವಕೀಲರ ವಿರುದ್ಧ ಕೈಗೊಳ್ಳುವ ಕ್ರಮಗಳಿಗೂ ಅವರು ನಿರ್ವಹಿಸುವ ಪ್ರಕರಣಗಳಿಗೂ ವ್ಯತ್ಯಾಸ ಇರುತ್ತದೆ. ಹೀಗಿದ್ದರೂ ವಕೀಲರನ್ನು ಗುರಿಯಾಗಿಸುವ ಅಂತಹ ಎಲ್ಲಾ ನಿದರ್ಶನಗಳು ಹೊರಹೊಮ್ಮಿಸುತ್ತಿರುವ ಮಾದರಿಯನ್ನು ನಿರ್ಲಕ್ಷಿಸಲಾಗದು” ಎಂದು ಪತ್ರದಲ್ಲಿಉಲ್ಲೇಖಿಸಲಾಗಿದೆ.

"ದೆಹಲಿ ಪೊಲೀಸರ ಬೆದರಿಕೆಗಳಿಗೆ ಇತ್ತೀಚಿನ ಉದಾಹರಣೆ ಮೆಹ್ಮೂದ್‌ ಪ್ರಾಚಾ ಅವರ ಕಚೇರಿ ಮೇಲೆ ನಡೆದ ದಾಳಿ. ದೆಹಲಿಯಲ್ಲಿ ಇತ್ತೀಚೆಗೆ ನಡೆದ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಾಚಾ ಅವರು ಹಲವು ಆರೋಪಿಗಳ ಪರ ವಾದ ಮಂಡಿಸುತ್ತಿದ್ದಾರೆ. ಇಂತಹ ಘಟನೆಗಳ ಮೂಲಕ ತಮ್ಮ ಕಕ್ಷೀದಾರರ ಪರ ವಾದ ಮಂಡಿಸುವವರನ್ನು ಬೆದರಿಸಿ ಎದೆಗುಂದಿಸಲಾಗುತ್ತಿದೆ. ಇದು ಕೇವಲ ಗಲಭೆ ಪ್ರಕರಣಕ್ಕಷ್ಟೇ ಸೀಮಿತವಾಗಿರದೆ, ನಾಗರಿಕ ಸ್ವಾತಂತ್ರ್ಯದ ಪರ ಧ್ವನಿ ಎತ್ತುವ ವಕೀಲರನ್ನು ವ್ಯವಸ್ಥಿತವಾಗಿ ಗುರಿಯಾಗಿಸಲಾಗುತ್ತಿದೆ” ಎಂದು ವಕೀಲೆಯರು ತಿಳಿಸಿದ್ದಾರೆ.

“ಪೊಲೀಸರ ನಡವಳಿಕೆ ಸ್ಪಷ್ಟವಾಗಿ ಪ್ರತೀಕಾರದ ಕ್ರಮ. ಇದರ ಹಿಂದೆ ವಕೀಲರು ತಮ್ಮ ಕರ್ತವ್ಯ ನಿರ್ವಹಿಸುವುದನ್ನು ತಡೆಯುವ ಉದ್ದೇಶ ಇದೆ” ಎಂದು ಹೇಳಲಾಗಿದೆ. ಪತ್ರದಲ್ಲಿ ಘಟನೆಯನ್ನು ತೀವ್ರವಾಗಿ ಖಂಡಿಸಲಾಗಿದ್ದು ಇಂತಹ ಪ್ರವೃತ್ತಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು ಮತ್ತು ವಕೀಲರ ಸಂಘಗಳ ಸದಸ್ಯರನ್ನು ರಕ್ಷಿಸುವ ಸಲುವಾಗಿ ಸೂಕ್ತ ವೇದಿಕೆಗಳಲ್ಲಿ ಸಮಸ್ಯೆಗಳ ಪರ ಧ್ವನಿ ಎತ್ತಬೇಕು ಎಂದು ಮಾಥುರ್‌ ಅವರನ್ನು ಒತ್ತಾಯಿಸಲಾಗಿದೆ.

ಪತ್ರಕ್ಕೆ ವಕೀಲೆಯರಾದ ಅನುರಾಧಾ ದತ್, ಮಾಳವಿಕಾ ರಾಜಕೋಟಿಯಾ, ರಿತು ಭಲ್ಲಾ, ವಾರೀಶಾ ಫರಾಸತ್, ನವೋಮಿ ಚಂದ್ರ, ಪೂಜಾ ಸೈಗಲ್, ಜುಂ ಜುಂ ಸರ್ಕಾರ್, ಅನುಭಾ ರಾಸ್ಟೋಗಿ, ಅಂಜಲಿ ಶರ್ಮಾ, ಸೌಮ್ಯಾ ಟಂಡನ್, ನಂದಿತಾ ರಾವ್, ಇರಾಂ ಮಜೀದ್‌, ರಾಗಿಣಿ ವಿನಾಯ್ಕ್‌, ಸುರುಚಿ ಸೂರಿ, ಕೀರ್ತಿ ಸಿಂಗ್‌, ಶ್ವೇತಾ ಕಪೂರ್, ಗಾಯತ್ರಿ ವಿರ್ಮಾನಿ, ಸುಮಿತಾ ಕಪಿಲ್, ಮಿರಿಯಮ್ ಫೋಜಿಯಾ ರಹಮಾನ್, ಮನಾಲಿ ಸಿಂಘಾಲ್, ನಿಧಿ ಮೋಹನ್ ಪರಾಶರ್, ಸ್ವಾತಿ ಸಿಂಗ್ ಮಲಿಕ್, ರುಚಿ ಸಿಂಗ್, ಮಣಿ ಗುಪ್ತಾ, ತನೀಮಾ ಕಿಶೋರ್, ತರಣುಮ್ ಚೀಮಾ, ಮೆಹಜಬೀನ್, ಅನುಪಮ್‌ ಸಂಘಿ, ಆಕಾಂಕ್ಷಾ ನೆಹ್ರಾ, ಶಾರೂಖ್‌ ಆಲಂ ಅವರು ಸಹಿ ಹಾಕಿದ್ದಾರೆ.

ದೆಹಲಿ ಗಲಭೆ ಪ್ರಕರಣ ಆರೋಪಿಗಳ ಪರ ವಾದ ಮಂಡಿಸುತಿದ್ದ ಪ್ರಚಾ ಅವರ ಕಚೇರಿ ಮೇಲೆ ಡಿಸೆಂಬರ್ 24ರಂದು ಪೊಲೀಸರು ದಾಳಿ ನಡೆಸಿದ್ದರು. ದೋಷಾರೋಪಣೆ ಮಾಡುವ ದಾಖಲೆಗಳು ಮತ್ತು ಪ್ರಾಚಾ ಅವರ ಇಮೇಲ್‌ ಔಟ್‌ಬಾಕ್ಸ್‌ನಲ್ಲಿ ಇರುವ ಮೆಟಾ ದತ್ತಾಂಶ ಹುಡುಕುತ್ತಿರುವುದಾಗಿ ತಿಳಿಸಿದ್ದರು.

ಬಳಿಕ ಪ್ರಾಚಾ ಅವರು "ಪೊಲೀಸರು ತಾವು ನಡೆಸಿದ ದಾಳಿಯ ವೇಳೆ ಖುದ್ದು ದಾಖಲಿಸಿದ್ದ ವೀಡಿಯೊ ತುಣುಕನ್ನು ತಮಗೆ ನೀಡಲು ನಿರಾಕರಿಸುತ್ತಿದ್ದಾರೆ. ಅದನ್ನು ಸಂರಕ್ಷಿಸಿಡಬೇಕು" ಎಂದು ದೆಹಲಿಯ ನ್ಯಾಯಾಲಯವೊಂದಕ್ಕೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ "ದಾಳಿಯ ಸಂಪೂರ್ಣ ವೀಡಿಯೊದೊಂದಿಗೆ ಮುಂದಿನ ವಿಚಾರಣೆ ವೇಳೆಗೆ ಹಾಜರಾಗಬೇಕು" ಎಂದು ನ್ಯಾಯಾಲಯ ಪ್ರಕರಣದ ತನಿಖಾಧಿಕಾರಿಗೆ ಸೂಚಿಸಿದೆ.