Supreme Court and Delhi MCD, AAP 
ಸುದ್ದಿಗಳು

ದೆಹಲಿ ಮೇಯರ್ ಚುನಾವಣೆ: ಆಪ್‌ ಸಲ್ಲಿಸಿದ್ದ ಮನವಿ ಕುರಿತು ಲೆಫ್ಟಿನೆಂಟ್‌ ಗವರ್ನರ್ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವುದಕ್ಕೆ ಮನವಿಯಲ್ಲಿ ಆಕ್ಷೇಪ ವ್ಯಕ್ತವಾಗಿದೆ.

Bar & Bench

ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ದೆಹಲಿಯ ಮಹಾನಗರ ಪಾಲಿಕೆಯ (ಎಂಸಿಡಿ) ನಾಮನಿರ್ದೇಶನಗೊಂಡ ಸದಸ್ಯರಿಗೆ ಮತ ಚಲಾಯಿಸಲು ಅವಕಾಶ ನೀಡಿದ ಲೆಫ್ಟಿನೆಂಟ್‌ ಗವರ್ನರ್‌ ಕ್ರಮ ಪ್ರಶ್ನಿಸಿ ಆಮ್ ಆದ್ಮಿ ಪಕ್ಷ (ಎಎಪಿ) ಸಲ್ಲಿಸಿದ್ದ ಮನವಿ ಸಂಬಂಧ  ಸುಪ್ರೀಂ ಕೋರ್ಟ್ ಬುಧವಾರ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರ ಪ್ರತಿಕ್ರಿಯೆ ಕೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಪಾಲಿಕೆಯ ತಾತ್ಕಾಲಿಕ ಅಧಿಕಾರಿ ಸತ್ಯ ಶರ್ಮಾ ಅವರಿಂದಲೂ ಪ್ರತಿಕ್ರಿಯೆ ಬಯಸಿದೆ.

ಸೋಮವಾರದೊಳಗೆ (ಫೆಬ್ರವರಿ 13) ಪ್ರತಿಕ್ರಿಯಿಸುವಂತೆ ಸೂಚಿಸಿರುವ ನ್ಯಾಯಾಲಯ ಮೇಯರ್, ಉಪಮೇಯರ್ ಮತ್ತು ಸ್ಥಾಯಿ ಸಮಿತಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಮನವಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿರುವ ವಿಚಾರವನ್ನು ಸಹ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಮೇಯರ್, ಉಪ ಮೇಯರ್ ಹಾಗೂ ಸ್ಥಾಯಿ ಸಮಿತಿ ಚುನಾವಣೆಯನ್ನು ಕಾನೂನಿಗೆ ವಿರುದ್ಧವಾಗಿ ಒಟ್ಟಿಗೆ ನಡೆಸುವಂತೆ ಸಭಾಧ್ಯಕ್ಷರು (ಸ್ಪೀಕರ್‌) ಸೂಚಿಸಿದ್ದಾರೆ ಎಂಬುದಾಗಿ ಎಎಪಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಆಕ್ಷೇಪಿಸಿದರು.

“ಅಧ್ಯಕ್ಷತೆ ವಹಿಸಿರುವವರೇ ಹಂಗಾಮಿ ಅಧಿಕಾರಿಯಾಗಿದ್ದಾರೆ. ಆಕೆಯ ನೇಮಕವೇ ಸ್ವಯಂ ಅಕ್ರಮವಾಗಿದ್ದು ಆಕೆಗೆ ಹಿರಿತನ ಇಲ್ಲ. ಆಕೆ  ಮೇಯರ್, ಉಪಮೇಯರ್ ಮತ್ತು ಸ್ಥಾಯಿ ಸಮಿತಿ ಚುನಾವಣೆಗಳನ್ನು ಒಟ್ಟಿಗೆ ನಡೆಸುವಂತೆ ಹೇಳುತ್ತಾರೆ. ಹಾಗೆ ಮಾಡುವಂತಿಲ್ಲ ಎಂದು ಸೆಕ್ಷನ್ 76 ನೇರವಾಗಿ ಹೇಳುತ್ತದೆ. ಚುನಾವಣೆಯ ಪ್ರತಿ ಸಭೆಯಲ್ಲಿ ಮೇಯರ್‌ ಉಪ ಮೇಯರ್‌ ಅಧ್ಯಕ್ಷತೆ ವಹಿಸಬೇಕು. ಚುನಾಯಿತರಾದ ಬಳಿಕವಷ್ಟೇ ಮೇಯರ್‌ ಅಧ್ಯಕ್ಷತೆ ವಹಿಸಬಹುದಾಗಿದ್ದು ಹಂಗಾಮಿ ಅಧಿಕಾರಿ ಈ ಆದೇಶ ಹೊರಡಿಸುವಂತಿಲ್ಲ” ಎಂದರು.

ನ್ಯಾಯಾಲಯ ವಕೀಲರ ಹೇಳಿಕೆಗಳನ್ನು ದಾಖಲಿಸಿಕೊಂಡಿತು. "ಡಿಸೆಂಬರ್ 4, 2022ರಂದು ಚುನಾವಣೆ ನಡೆದಿದ್ದರೂ, ಮೇಯರ್ ಉಪ ಮೇಯರ್‌ ಹುದ್ದೆಗೆ ಚುನಾವಣೆ ನಡೆದಿಲ್ಲ. ಸ್ಥಾಯಿ ಸಮಿತಿ ರಚನೆಯಾಗಿಲ್ಲ ಎಂದು ಹೇಳಲಾಗಿದೆ. ನಾಮನಿರ್ದೇಶಿತ ವ್ಯಕ್ತಿಗಳು ಪಾಲಿಕೆ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ ಎನ್ನಲಾಗಿದೆ. ಮೇಯರ್, ಉಪ ಮೇಯರ್ ಮತ್ತು ಸ್ಥಾಯಿ ಸಮಿತಿಯ ಮೂರು ಹುದ್ದೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದು ನೇರವಾಗಿ ಕಾನೂನಿಗೆ ವಿರುದ್ಧವಾಗಿದೆ ಎಂದು ವಾದಿಸಲಾಗಿದೆ” ಎಂದು ಆದೇಶದಲ್ಲಿ ಉಲ್ಲೇಖಿಸಿದ ಪೀಠ, ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿತು.