Delhi Signboard
Delhi Signboard 
ಸುದ್ದಿಗಳು

ದೆಹಲಿ ಮೇಯರ್ ಚುನಾವಣೆ: ಎಲ್‌ಜಿ ನಾಮನಿರ್ದೇಶಿತ ಸದಸ್ಯರ ಮತದಾನ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಆಪ್

Bar & Bench

ದೆಹಲಿ ಮಹಾನಗರಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಮತ ಚಲಾಯಿಸಲು ಅವಕಾಶ ಮಾಡಿಕೊಟ್ಟ ದೆಹಲಿ ಲೆಫ್ಟಿನೆಂಟ್-ಗವರ್ನರ್ ಕ್ರಮ ಪ್ರಶ್ನಿಸಿ ಆಮ್ ಆದ್ಮಿ ಪಕ್ಷ (ಎಎಪಿ) ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಿಚಾರಣೆ ನಡೆಸಲಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ನೇತೃತ್ವದ ಪೀಠದೆದುರು ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು ಪ್ರಕರಣವನ್ನು ಪ್ರಸ್ತಾಪಿಸಿದರು. "ಇದು ನಾಚಿಕೆಗೇಡಿನ ಸಂಗತಿ. ಅವರು ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಮಾಡಲು ಅವಕಾಶ ನೀಡುತ್ತಿದ್ದಾರೆ. ತಾತ್ಕಾಲಿಕ ವ್ಯಕ್ತಿ ಇದೆಲ್ಲವನ್ನೂ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಎರಡು ತಿಂಗಳು ಕಳೆದಿವೆ (ಚುನಾವಣಾ ಫಲಿತಾಂಶ ಹೊರಬಂದು). ಇದು ಸಂಪೂರ್ಣವಾಗಿ ನಿರ್ಲಜ್ಜೆಯಿಂದ ಕೂಡಿದೆ" ಎಂದು ಪ್ರಕರಣವನ್ನು ಆಲಿಸುವಂತೆ ಹಿರಿಯ ವಕೀಲರು ಮನವಿ ಸಲ್ಲಿಸಿದರು. ಈ ಹಂತದಲ್ಲಿ ಪ್ರಕರಣವನ್ನು ನಾಳೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಒಪ್ಪಿತು.

ದೆಹಲಿಯ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳಿಗೆ ತ್ವರಿತವಾಗಿ ಚುನಾವಣೆ ನಡೆಸಲು ನಿರ್ದೇಶನ ನೀಡುವಂತೆ ಪಕ್ಷದ ನಾಯಕಿ ಶೆಲ್ಲಿ ಒಬೆರಾಯ್ ಅವರು ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಕಾಲಮಿತಿಯಲ್ಲಿ ಚುನಾವಣೆ ನಡೆಸಲು ಆದೇಶಿಸುವಂತೆ ಮತ್ತು ನಾಮನಿರ್ದೇಶಿತ ಸದಸ್ಯರಿಗೆ ಮತ ಚಲಾಯಿಸಲು ಅವಕಾಶ ನೀಡದಂತೆ ಆಕೆ ನ್ಯಾಯಾಲಯವನ್ನು ಕೋರಿದ್ದರು.  ಆದರೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ನಿನ್ನೆ ಪಾಲಿಕೆ ಸಭೆ ನಡೆಯಲಿದ್ದ ಕಾರಣ ಪರಿಹಾರೋಪಾಯಗಳು ಮುಕ್ತವಾಗಿರುವುದಾಗಿ ನ್ಯಾಯಾಲಯ ತಿಳಿಸಿದ್ದ ಹಿನ್ನೆಲೆಯಲ್ಲಿ ಮನವಿ ಹಿಂಪಡೆಯಲಾಗಿತ್ತು.

ಕಳೆದ ಡಿಸೆಂಬರ್‌ ವೇಳೆಗೆ ಪಾಲಿಕೆ ಸದಸ್ಯರು ಮತದಾನ ಮಾಡಿದರೂ ದೆಹಲಿಗೆ ಇನ್ನೂ ಮೇಯರ್ ನೇಮಕವಾಗಿಲ್ಲ. ದೆಹಲಿಯ ಒಟ್ಟು 250 ವಾರ್ಡ್‌ಗಳಲ್ಲಿ 134 ಸ್ಥಾನವನ್ನು ಗೆದ್ದಿತ್ತು. ಬಿಜೆಪಿ 104 ಸ್ಥಾನಗಳಲ್ಲಿ ವಿಜಯ ಸಾಧಿಸಿತ್ತು. ಫಲಿತಾಂಶ  ಡಿಸೆಂಬರ್ 7, 2022ರಂದು ಹೊರಬಿದ್ದಿತ್ತು. ಪಾಲಿಕೆಯ ಹಿಂದಿನ ಎರಡು ಸಭೆಗಳಲ್ಲಿ ಗದ್ದಲ ಏರ್ಪಟ್ಟು ಮುಂದೂಡಲಾಗಿತ್ತು. ಆರಂಭದಲ್ಲಿ, ಬಹುಮತದ ಕೊರತೆಯಿಂದಾಗಿ, ಕೇಸರಿ ಪಕ್ಷವು ಎರಡು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಹಾಕುವುದಾಗಿ ಹೇಳಿತ್ತು, ಆದರೆ ನಂತರ ಆ ನಿರ್ಧಾರದಿಂದ ಹಿಂದೆ ಸರಿದಿತ್ತು. ಪಿಟಿಐ ವರದಿಯ ಪ್ರಕಾರ, ಗದ್ದಲದ ನಡುವೆ ಸದನವನ್ನು ಜನವರಿ 6 ಮತ್ತು ಜನವರಿ 24 ಕ್ಕೆ ಮುಂದೂಡಲಾಯಿತು. ನಿನ್ನೆ ಕೂಡ ಫೆಬ್ರವರಿ 6 ರಂದು ಇದೇ ಪರಿಸ್ಥಿತಿ ಎದುರಾಯಿತು.