Delhi Signboard
ಕೇಂದ್ರ ಸರ್ಕಾರವು ಶುಕ್ರವಾರ ಲೋಕಸಭೆಯಲ್ಲಿ ದೆಹಲಿ ಮುನಿಸಿಪಲ್ ಕಾರ್ಪೊರೇಷನ್ (ತಿದ್ದುಪಡಿ) ಮಸೂದೆ - 2022 ಅನ್ನು ಮಂಡಿಸಿದೆ. ದೆಹಲಿ ಮಹಾನಗರ ಪಾಲಿಕೆಯನ್ನು ಮೂರು ಪಾಲಿಕೆಗಳಾಗಿ 2012ರಲ್ಲಿ ವಿಭಾಗಿಸಲಾಗಿತ್ತು. ಈ ಮೂರು ಪಾಲಿಕೆಗಳನ್ನೂ ಮರಳಿ ಒಗ್ಗೂಡಿಸುವ ಸಲುವಾಗಿ ತಿದ್ದುಪಡಿ ಮಸೂದೆಯನ್ನು ರೂಪಿಸಲಾಗಿದ್ದು ಮಂಗಳವಾರ ಇದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು.
ಈ ಮಸೂದೆಯ ಕಾರಣಕ್ಕಾಗಿಯೇ ಏಪ್ರಿಲ್ ಮಧ್ಯಭಾಗದಲ್ಲಿ ನಡೆಯಬೇಕಿದ್ದ ದೆಹಲಿ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ರಾಜ್ಯ ಚುನಾವಣಾ ಆಯೋಗವು ಮುಂದೂಡಿತ್ತು. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಜನರಲ್ ಅನಿಲ್ ಬೈಜಾಲ್ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದು ಕೇಂದ್ರ ಸರ್ಕಾರವು ಮೂರು ಮಹಾನಗರ ಪಾಲಿಕೆಯನ್ನು ಒಂದುಗೂಡಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ್ದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡುತ್ತಿರುವುದಾಗಿ ಮಾರ್ಚ್ 9ರಂದು ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಆಯೋಗದ ಸಮಿತಿಯು ತಿಳಿಸಿತ್ತು.
ಪ್ರಸ್ತುತ ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಉತ್ತರ, ದಕ್ಷಿಣ ಮತ್ತು ಪೂರ್ವ ಎನ್ನುವ ಮೂರು ದೆಹಲಿ ಮಹಾನಗರ ಪಾಲಿಕೆಗಳಿವೆ. ಮೂವರು ಮೇಯರ್‌ಗಳು ಹಾಗೂ ಮೂವರು ಆಯುಕ್ತರನ್ನು ಇವು ಹೊಂದಿದ್ದು ಇವುಗಳ ಒಟ್ಟು ವಾರ್ಡ್‌ಗಳ ಸಂಖ್ಯೆ 272. ಇದಲ್ಲದೆ 66 ಇಲಾಖಾ ಮುಖ್ಯಸ್ಥರನ್ನು ಇವು ಹೊಂದಿವೆ.