ಕಳೆದ ಫೆಬ್ರುವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದಂತೆ ಏಳು ತಿಂಗಳ ಬಳಿಕ ದೆಹಲಿ ಪೊಲೀಸರು ದೆಹಲಿಯ ಕಡಕಡಡೂಮ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರ ಪೀಠದ ಮುಂದೆ ಮೊದಲ ಆರೋಪಪಟ್ಟಿ ಸಲ್ಲಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತರ ಅಲೋಕ್ ಕುಮಾರ್ ಮತ್ತು ಡಿಸಿಪಿ ಪಿ ಎಸ್ ಕುಶ್ವಾಹ್ ಅವರು ಸೆಪ್ಟೆಂಬರ್ 16ರಂದು ಆರೋಪಪಟ್ಟಿ ಸಲ್ಲಿಸಿದ್ದು 15 ಮಂದಿಯನ್ನು ಆರೋಪಿಗಳು ಎಂದು ಹೆಸರಿಲಾಗಿದೆ. ಆರೋಪ ಪಟ್ಟಿಯ ಪ್ರಕಾರ ಒಟ್ಟು 751 ಪ್ರಥಮ ಮಾಹಿತಿ ವರದಿಗಳನ್ನು (ಎಫ್ ಐಆರ್) ದಾಖಲಿಸಲಾಗಿದೆ.
ಅಬ್ದುಲ್ ಖಾಲಿದ್ ಸೈಫಿ, ಇಸ್ರಾತ್ ಜಹಾನ್, ಮೀರನ್ ಹೈದರ್, ತಾಹೀರ್ ಹುಸೈನ್, ಗುಲ್ಫಿಶಾ ಖತೂನ್, ಸಫೂರಾ ಜಾರ್ಗರ್, ಸಫಾ-ಉರ್-ರೆಹಮಾನ್, ಆಸಿಫ್ ಇಕ್ಬಾಲ್ ತನ್ಹಾ, ಶದಾಬ್ ಅಹ್ಮದ್, ನತಾಷಾ ನರ್ವಾಲ್, ದೇವಾಂಗನಾ ಕಲಿತಾ, ತಸ್ಲೀಮ್ ಅಹ್ಮದ್, ಸಲೀಮ್ ಮಲಿಕ್, ಸಲೀಮ್ ಖಾನ್ ಮತ್ತು ಅಖ್ತರ್ ಖಾನ್ ವಿರುದ್ಧ ದೂರು ದಾಖಲಿಸಲಾಗಿದೆ. ಈ ಪೈಕಿ ಆರು ಮಂದಿ ವಿದ್ಯಾರ್ಥಿಗಳಾಗಿದ್ದು, ಸಫೂರ್ ಜರ್ಗಾರ್ ಹೊರತುಪಡಿಸಿ ಉಳಿದವರೆಲ್ಲಾ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮೊಹಮ್ಮದ್ ಡ್ಯಾನಿಷ್, ಮೊಹಮ್ಮದ್ ಇಲಿಯಾಸ್, ಮೊಹಮ್ಮದ್ ಪರ್ವೇಜ್ ಅಹ್ಮದ್ ಅವರನ್ನು ಶಂಕಿತರು ಎಂದು ಅಪರಾಧ ವಿಭಾಗದ ಪೊಲೀಸರು ಆರೋಪ ಪಟ್ಟಿಯಲ್ಲಿ ವಿವರಿಸಿದ್ದಾರೆ.
ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ), ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ತಡೆ ಕಾಯಿದೆ -1984ಯ ವಿರುದ್ಧದ ವಿವಿಧ ಸೆಕ್ಷನ್ ಗಳ ವಿರುದ್ಧ ದೂರು ದಾಖಲಿಸಲಾಗಿದೆ. ಫೆಬ್ರುವರಿ 22-26ರ ನಡುವೆ ನಡೆದಿದ್ದ ಗಲಭೆಯಲ್ಲಿ 53 ಮಂದಿ ಸಾವನ್ನಪ್ಪಿ, 530 ಮಂದಿ (106 ಪೊಲೀಸರೂ ಸೇರಿದ್ದಾರೆ) ಗಾಯಗೊಂಡಿದ್ದಾರೆ. ಇದೇ ಅವಧಿಯಲ್ಲಿ 16,381 ಪಿಸಿಆರ್ ಕರೆಗಳು ಪೊಲೀಸರಿಗೆ ಬಂದಿವೆ. ತನಿಖೆ ಆರಂಭವಾದ ಬಳಿಕ ಸಶಸ್ತ್ರ ಕಾಯಿದೆ ಮತ್ತು ಯುಎಪಿಎ ಅಡಿ ದಾಖಲಾಗಿದ್ದ ಪ್ರಕರಣಗಳನ್ನು ನೈಜ ಎಫ್‌ಐಆರ್‌ಗಳಿಗೆ ಸೇರಿಸಲಾಗಿದೆ.
ಆರೋಪಪಟ್ಟಿಯಲ್ಲಿ ಸಾರಾಂಶ ಹೀಗಿದೆ:
ಪೌರತ್ವ ತಿದ್ದುಪಡಿ ಮಸೂದೆಗೆ (ಸಿಎಬಿ) ಡಿಸೆಂಬರ್ 4,2019ರಂದು ಕೇಂದ್ರ ಸಂಪುಟ ಸಭೆಗೆ ಒಪ್ಪಿಗೆ ನೀಡುತ್ತಿದ್ದಂತೆ ಪಿತೂರಿ ಚಟುವಟಿಕೆಗಳು ಆರಂಭವಾದವು. ಶಾರ್ಜಿಲ್ ಇಮಾಮ್ ಸಕ್ರಿಯ ಸದಸ್ಯರಾಗಿದ್ದ ‘ಜೆಎನ್‌ಯುನ ಮುಸ್ಲಿಂ ವಿದ್ಯಾರ್ಥಿಗಳು’ (ಎಂಎಸ್ ಜೆ) ಎಂಬ ವಾಟ್ಸ್ ಅಪ್ ಗುಂಪು ಆರಂಭವಾಗಿತ್ತು. ಎಂಎಸ್‌ಜೆ ಜೊತೆಗೆ ‘ಜಾಮಿಯಾ ವಿದ್ಯಾರ್ಥಿಗಳು’ ಎಂಬ ಗುಂಪು ಅಸ್ತಿತ್ವದಲ್ಲಿತ್ತು. ಉಳಿದೆರಡು ಗುಂಪುಗಳು ಕರಪತ್ರ ಹಂಚುವುದು ಮತ್ತು ಪ್ರತಿಭಟನೆ ಯೋಜಿಸುವುದರಲ್ಲಿ ತೊಡಗಿದ್ದವು ಎಂದು ಪೊಲೀಸರು ವಿವರಿಸಿದ್ದಾರೆ.
2019ರ ಡಿಸೆಂಬರ್ 7ರಂದು ದ್ವೇಷದ ವಿರುದ್ಧ ಒಗ್ಗೂಡಿಕೆ ಎಂಬ ಗುಂಪು ಪ್ರತಿಭಟನೆ ಹಮ್ಮಿಕೊಂಡಿತ್ತು. ಶಾರ್ಜಿಲ್ ಇಮಾಮ್, ಯೋಗೇಂದ್ರ ಯಾದವ್ ಮತ್ತು ಉಮರ್ ಖಾಲಿದ್ ಅವರು ಸಾಮಾಜಿಕ ಜಾಲತಾಣದ ಮೂಲಕ ಸೈದ್ಧಾಂತಿಕ ಅರಿವು ಮೂಡಿಸಲು ಮತ್ತು ಜನರನ್ನು ಒಗ್ಗೂಡಿಸಲು ಮುಸ್ಲಿಮ್ ಬಾಹುಳ್ಯ ಪ್ರದೇಶಗಳಲ್ಲಿ ಅರಿವು ಮೂಡಿಸುವುದು ಹಾಗೂ ರಸ್ತೆ ತಡೆ ನಡೆಸಲು ಯುವಕರನ್ನು ಒಟ್ಟಾಗಿಸಲು ನಿರ್ಧರಿಸಿದ್ದರು. ಈ ಸಂದರ್ಭಕ್ಕಾಗಲೇ ಸಿಎಬಿಯು ಪೌರತ್ವ ತಿದ್ದುಪಡಿ ಕಾಯಿದೆಯಾಗಿತ್ತು. ಇದರ ವಿರುದ್ಧ ಸಾಮಾನ್ಯ ಪಿತೂರಿಗಳನ್ನು ಒಳಗೊಂಡ ಪ್ರತಿಭಟನೆ, ಧರಣಿ ನಡೆಸಲಾಯಿತು. ಇದರಲ್ಲಿ ಡಿಸೆಂಬರ್ ಮಧ್ಯದಲ್ಲಿ ನಡೆಸಲಾದ ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ಸಂಸತ್‌ನೆಡೆಗೆ ನಡಿಗೆ ಎಂಬ ಹೋರಾಟವು ಸೇರಿದೆ.
ರಸ್ತೆ ತಡೆ ಮಾದರಿಯಲ್ಲಿ ಶಾರ್ಜಿಲ್ ಇಮಾಮ್ ಮುಖಂಡತ್ವದಲ್ಲಿ 2019ರ ಡಿಸೆಂಬರ್ 15ರಂದು ಶಾಹೀನ್ ಭಾಗ್ ನಲ್ಲಿ ಮೊದಲ ಪ್ರತಿಭಟನೆ ನಡೆಸಲಾಯಿತು. ಆ ಬಳಿಕ 24/7 ಪ್ರತಿಭಟನೆ ನಡೆಸಲು, ಮಹಿಳೆಯರು ಮತ್ತು ಮಕ್ಕಳನ್ನು ಒಗ್ಗೂಡಿಸಲು, ಪೊಲೀಸರ ಮೇಲೆ ವ್ಯವಸ್ಥಿತ ದಾಳಿ ನಡೆಸಲು, ಗಲಭೆ ಕಿಚ್ಚು ಹೊತ್ತಿಸುವ ಉದ್ದೇಶದಿಂದ “ಜಾಮಿಯಾ ಸಂಚಾಲನಾ ಸಮಿತಿ” (ಜೆಸಿಸಿ) ರಚಿಸಲಾಯಿತು. ಜೆಸಿಸಿಯು ಉಮರ್ ಖಾಲಿದ್ ಮತ್ತು ನದೀಂ ಖಾನ್ ಅವರ ಕನಸಿನ ಕೂಸಾಗಿದ್ದು, ಇದರಲ್ಲಿ ಇಸ್ಲಾಮ್ ಸಂಘಟನೆ ವಿದ್ಯಾರ್ಥಿಗಳು, ಪಿಂಜ್ರಾ ತೋಡ್, ಎಸ್‌ಎಫ್‌ಐ ಮತ್ತು ವಿದ್ಯಾರ್ಥಿ ಸಂಘಟನೆಗಳನ್ನು ಸೇರಿಸಲಾಯಿತು.
ಫೆಬ್ರುವರಿ 2020ರಲ್ಲಿ ನಡೆದ ಹತ್ಯಾಕಾಂಡದ ಪ್ರಾಯೋಗಿಕ ಆವೃತ್ತಿಯೇ ಡಿಸೆಂಬರ್ 2019ರ ಘಟನಾವಳಿ.ದೆಹಲಿ ಪೊಲೀಸರ ಆರೋಪ ಪಟ್ಟಿ
ಫೆಬ್ರುವರಿ 2020ರಲ್ಲಿ ನಡೆದ ಹತ್ಯಾಕಾಂಡದ ಪ್ರಾಯೋಗಿಕ ಆವೃತ್ತಿಯೇ ಡಿಸೆಂಬರ್ 2019 ಎಂದಿರುವ ಪೊಲೀಸರು ಫೆಬ್ರವರಿ 2020ರಲ್ಲಿ ಆರ್ಥಿಕ, ಸಾಮಾಜಿಕ, ವಿಶಿಷ್ಟ ಜನಸಂಖ್ಯಾ ಸ್ವರೂಪದ ಕಾರಣದಿಂದ ಸುಲಭಕ್ಕೆ ಅಪಾಯಕ್ಕೆ ತುತ್ತಾಗಬಹುದಾದ ಈಶಾನ್ಯ ದೆಹಲಿಯ ಕಡೆಗೆ ಪ್ರತಿಭಟನೆಗಳ ಗುರಿ ವರ್ಗಾವಣೆಗೊಂಡಿತ್ತು. ಮುಸ್ಲಿಮ್ ಬಾಹುಳ್ಯ ಪ್ರದೇಶದಲ್ಲಿ ಅಪಪ್ರಚಾರ ಮಾಡಲು ಮತ್ತು ಮುಸ್ಲಿಮರನ್ನು ಕೆರಳಿಸಲು “ಜಾಮಿಯಾ ಜಾಗೃತಿ ಆಂದೋಲನಾ ಸಮಿತಿ” ರಚಿಸಲಾಯಿತು. ಅಂತಿಮವಾಗಿ ಎಲ್ಲಾ ಗುಂಪುಗಳು 'ದೆಹಲಿ ಪ್ರತಿಭಟನಾ ಐಕ್ಯತಾ (ಬೆಂಬಲ) ಗುಂಪು' - ಡಿಪಿಎಸ್‌ಜಿಯಲ್ಲಿ ಸೇರಿಕೊಂಡವು ಎಂದು ಅರೋಪಪಟ್ಟಿಯಲ್ಲಿ ಉಲ್ಲೇಖಿಸಾಗಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಯ ಹಿನ್ನೆಲೆಯಲ್ಲಿ ಚಾಂದ್ ಬಾಗ್ ನಲ್ಲಿ ಫೆಬ್ರವರಿ 16/17ರಂದು ಪಿತೂರಿಗಾರರು ಸಭೆ ನಡೆಸಿದ್ದರು. ಈ ಸಭೆಯಲ್ಲಿ ಫೆಬ್ರವರಿ 23ರಂದು ಒಟ್ಟಾಗಿ ರಸ್ತೆ ತಡೆ ನಡೆಸುವ ಮೂಲಕ ಟ್ರಾಫಿಕ್ ಉಂಟು ಮಾಡುವುದು ಬಳಿಕ ಪ್ರತಿಭಟನೆಯಲ್ಲಿ ತೊಡಗಿದ ಎಲ್ಲರೂ ಹಿಂಸಾತ್ಮಕ ಕ್ರಮಗಳನ್ನು ಅನುಸರಿಸುವ ಮೂಲಕ ಪ್ರತಿಭಟನೆ ವ್ಯಾಪಕಗೊಳ್ಳುವಂತೆ ಮಾಡುವುದು ಎಂದು ನಿರ್ಧರಿಸಲಾಗಿತ್ತು. ರಸ್ತೆ ತಡೆಯ ಮೂಲಕ ಹಿಂಸಾತ್ಮಾಕ ಹೋರಾಟವನ್ನು ಜೆಸಿಸಿ ನಡೆಸಿದರೆ ಡಿಪಿಎಸ್ ಜಿ ಎಲ್ಲಾ ನಿರ್ಧಾರಗಳ ಹಿಂದಿನ ಶಕ್ತಿಯಾಗಿತ್ತು. ಫೆಬ್ರುವರಿ 23ರಂದು ವಿವಿಧ ಭಾಗಗಳಲ್ಲಿದ್ದ ಪಿತೂರಿಗಾರರು ಹೊಂದಾಣಿಕೆಯ ಮೂಲಕ ಪ್ರತಿಭಟನೆಯನ್ನು ಒಂದು ಸ್ಥಳಕ್ಕೆ ಸೇರಿಸಿ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಉಂಟು ಮಾಡಿದರು ಎಂದು ದೂರಲಾಗಿದೆ.
ಆನಂತರ ಪೊಲೀಸರು ಮತ್ತು ಮುಸ್ಲಿಮೇತರರ ವಿರುದ್ಧ ದೊಂಬಿ, ಗಲಭೆ ಎಬ್ಬಿಸಿ ದಾಳಿ ನಡೆಸುವ ಮೂಲಕ ಸರ್ಕಾರ ಮತ್ತು ಖಾಸಗಿ ಆಸ್ತಿ-ಪಾಸ್ತಿಗೆ ಭಾರಿ ನಷ್ಟ ಉಂಟು ಮಾಡಲಾಗಿದೆ. ದಾಳಿಯಲ್ಲಿ ಪೆಟ್ರೋಲ್ ಬಾಂಬ್, ಆಸಿಡ್ ದಾಳಿ, ದೊಣ್ಣೆ ಸೇರಿದಂತೆ ವಿವಿಧ ಶಸ್ತ್ರಾಸ್ತ್ರಗಳನ್ನು ಬಳಸಲಾಗಿದ್ದು, ಪೊಲೀಸರು, ಸರ್ಕಾರಿ ಅಧಿಕಾರಿಗಳನ್ನು ಗಾಯಗೊಳಿಸಲಾಗಿದೆ. ಪೆಟ್ರೋಲ್ ಬಂಕ್ ಗೆ ಬೆಂಕಿ ಹಾಕಲಾಗಿದ್ದು, ಅಗತ್ಯ ವಸ್ತಗಳ ಸೇವೆಗೆ ನಿರ್ಬಂಧ ವಿಧಿಸಲಾಗಿತ್ತು ಎಂದು ವಿವರಿಸಲಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಮುಜುಗರ ಉಂಟು ಮಾಡುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷರ ಭಾರತ ಭೇಟಿಯ ದಿನವನ್ನು ಆಯ್ದುಕೊಂಡು ದೇಶದ ರಾಜಧಾನಿಯಲ್ಲಿ ಕೋಮು ಪ್ರಚೋದನೆ ಚಟುವಟಿಕೆ ನಡೆಸಲಾಗಿದೆ. ಭಾರತದ ಸಮಗ್ರತೆಯನ್ನು ನುಚ್ಚುನೂರು ಮಾಡುವ ಮೂಲಕ ದೇಶದ ಜನರ ಮೇಲೆ ಉಗ್ರದಾಳಿ ನಡೆಸಲಾಗಿದೆ. ಇದಕ್ಕಾಗಿ ಹಣವನ್ನೂ ಸಂಗ್ರಹಿಸಲಾಗಿದೆ. ಈ ಎಲ್ಲಾ ಪಿತೂರಿದಾರರ ಅಂತಿಮ ಉದ್ದೇಶ ದುಷ್ಟ, ಭಾವೋದ್ರೇಕಿತ ಕೋಮು ಹಿಂಸೆಯನ್ನು ವ್ಯವಸ್ಥಿತವಾಗಿ ನಡೆಸಿ ಚುನಾಯಿತ ಸರ್ಕಾರವನ್ನು ಉರುಳಿಸುವುದಾಗಿತ್ತು ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
2019ರ ಡಿಸೆಂಬರ್ 1ರಿಂದ 2020ರ ಫೆಬ್ರುವರಿ 26ರ ವರೆಗೆ ₹1,61,33,703ಯನ್ನು ಇಸ್ರಾತ್ ಜಹಾನ್, ಖಾಲಿದ್ ಸೈಫಿ, ತಾಹಿರ್ ಹುಸೈನ್, ಶಫಾ-ಉರ್-ರೆಹಮಾನ್ ಮತ್ತು ಮೀರನ್ ಹೈದರ್ ಅವರು ಬ್ಯಾಂಕ್ ಖಾತೆ ಅಥವಾ ನಗದಿನ ರೂಪದಲ್ಲಿ ಪ್ರತಿಭಟನೆ ನಿರ್ವಹಿಸಲು ಹಣ ಸಂಗ್ರಹಿಸಲಾಗಿದೆ. ಇದರ ಮೂಲಕ ದಂಗೆ ನಡೆಸಲಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.
ಸಂಘಟನೆಯ ಮಹಿಳಾ ಮುಖ ಇಸ್ರಾತ್ ಜಹಾನ್.ಆರೋಪ ಪಟ್ಟಿ
ಆರೋಪಿ ತಾಹಿರ್ ಹುಸೈನ್ ಅವರು ನಕಲಿ ಕಂಪೆನಿಗಳ ಮೂಲಕ ಹಣವನ್ನು ನಗದಾಗಿಸಿಕೊಂಡು ಪ್ರತಿಭಟನೆ, ದೊಂಬಿಗೆ ಜನರನ್ನು ಸೇರಿಸಲು ಮತ್ತು ದಾಳಿಗೆ ಬೇಕಾದ ವಸ್ತುಗಳನ್ನು ಖರೀದಿಸಲು ಹಣವನ್ನು ಬಳಿಸಿದ್ದಾರೆ ಎಂದು ದೂರಲಾಗಿದೆ.
ಪ್ರತಿಭಟನೆಗೆ ಜಾತ್ಯತೀತ ರೂಪ ನೀಡುವ ಮೂಲಕ ನಾಗರಿಕ ಸಮಾಜದಲ್ಲಿ ಸಹಮತ ಸೃಷ್ಟಿಸುವ ಕೆಲಸವನ್ನು ಡಿಪಿಎಸ್ ಜಿ ಮಾಡಿದೆ. ರಾಹುಲ್ ರಾಯ್ ಮತ್ತು ಸಬಾ ದೇವನ್ ಅವರು ಡಿಸೆಂಬರ್ 2019ರಲ್ಲಿ ಡಿಪಿಎಸ್ ಜಿ ರಚಿಸಿದ್ದರು. ಜೆಸಿಸಿ, ಪಿಂಜ್ರಾ ತೋಡ್ ಇತ್ಯಾದಿ, ಡಿಪಿಎಸ್ ಜಿ ವಾಟ್ಸ್ ಆಪ್ ಗುಂಪು ಸಹ ನಾಗರಿಕ ಸಮಾಜ, ಸಾಮಾಜಿಕ ಕಾರ್ಯಕರ್ತರಾದ ವಕೀಲರು ಮತ್ತಿತರರನ್ನು ಸದಸ್ಯರನ್ನಾಗಿ ಹೊಂದಿದೆ. ಪ್ರತಿಭಟನಾ ಸ್ಥಳಗಳಲ್ಲಿ ಡಿಪಿಎಸ್ ಜಿ ಜೊತೆ ಗುರುತಿಸಿಕೊಂಡಿರುವವರು ಭಾಗವಹಿಸುತ್ತಿದ್ದರು ಅಥವಾ ಅನಾಮಧೇಯವಾಗಿ ಚಟುವಟಿಕೆ ಮುನ್ನಡೆಸುತ್ತಿದ್ದರು. ರಾಹುಲ್ ರಾಯ್ ಮತ್ತು ಪ್ರೊ. ಅಪೂರ್ವಾನಂದ ಅವರ ವಾಟ್ಸಾಪ್ ಆಪ್ ಸಂಭಾಷಣೆಯನ್ನು ದೆಹಲಿ ಪೊಲೀಸರು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರು ದೆಹಲಿಯ ಮುಜಾಪುರ್ ಚೌಕ್ ನಲ್ಲಿ ಉಂಟಾಗಿದ್ದ ರಸ್ತೆ ತಡೆ ಸಮಸ್ಯೆ ಬಗೆಹರಿಸಲು ಅಲ್ಲಿಗೆ ಭೇಟಿ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಯಾವುದೇ ತೆರನಾದ ಭಾಷಣ ಮಾಡಿಲ್ಲ ಎಂದಿರುವ ಕಪಿಲ್ ಮಿಶ್ರಾ, ಮೂರು ದಿನಗಳಲ್ಲಿ ರಸ್ತೆ ತಡೆ ತೆರವುಗೊಳಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ. ಅಪರಾಧ ಕೃತ್ಯದ ವಿರುದ್ಧ ಮಾಹಿ ನೀಡಿದ ಶಿಳ್ಳೆಗಾರರಿಗೆ (ವಿಷಲ್ ಬ್ಲೋಯರ್) ಬೆದರಿಕೆ ಹಾಕುವ ಕೆಲಸವನ್ನು ಪಿತೂರಿದಾರರು ಮಾಡಿದ್ದಾರೆ. ಜಫ್ರಾಬಾದ್ ನಲ್ಲಿ ಕೋಮು ಸಂಘರ್ಷದ ಆರೋಪದಲ್ಲಿ ಕಪಿಲ್ ಮಿಶ್ರಾ ವಿರುದ್ಧ ದೂರು ದಾಖಲಿಸಿದ್ದ ಕುರಿತು ಡಿಪಿಎಸ್‌ಜಿಯಲ್ಲಿ ಚರ್ಚೆಯಾಗಿರುವುದನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ ಮೊದಲರ್ಧದಲ್ಲಿ ದೆಹಲಿ ಪೊಲೀಸರು ಉಮರ್ ಖಾಲಿದ್ ಅವರನ್ನು ಬಂಧಿಸಿದ್ದರು. ಆರಂಭದಲ್ಲಿ ಅವರನ್ನು 10 ದಿನ ಪೊಲೀಸ್ ವಶಕ್ಕೆ ನೀಡಲಾಗಿತ್ತು. ಬಳಿಕ ಅಕ್ಟೋಬರ್ 22ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪೂರಕ ಆರೋಪಪಟ್ಟಿಯನ್ನೂ ಸಲ್ಲಿಸುವ ಸಾಧ್ಯತೆ ಇದೆ. ಶಾರ್ಜಿಲ್ ಇಮಾಮ್ ಅವರ ಪ್ರಚೋದನಾಕಾರಿ ಭಾಷಣಗಳು ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಡಿಸೆಂಬರ್ ನಲ್ಲಿ ನಡೆದ ಗಲಭೆ ಮತ್ತಿತರ ವಿಚಾರಗಳ ಬಗ್ಗೆ ಪ್ರತ್ಯೇಕ ವಿಚಾರಣೆಯನ್ನು ದೆಹಲಿ ಪೊಲೀಸರು ನಡೆಸುತ್ತಿದ್ದಾರೆ.