ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಕೃಷಿ ತ್ಯಾಜ್ಯ ಸುಡುವುದನ್ನು ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ತಿಳಿಸುವಂತೆ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ.
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿರುವುದರಿಂದ ಪ್ರಸ್ತುತ, ದೆಹಲಿಯಲ್ಲಿ ವಾಯುಮಾಲಿನ್ಯ ಸೂಚ್ಯಂಕ ಆಧಾರಿತ ಪ್ರತಿಕ್ರಿಯಾತ್ಮ ಕ್ರಿಯಾ ಯೋಜನೆ (ಜಿಆರ್‌ಎಪಿ) IIIನೇ ಹಂತ ಜಾರಿಯಲ್ಲಿದೆ ಎಂದು ತಿಳಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ಆದೇಶ ಹೊರಡಿಸಿತು. ನವೆಂಬರ್ 17 ರಂದು (ಸೋಮವಾರ) ಪ್ರಕರಣದ ವಿಚಾರಣೆ ನಡೆಯಲಿದೆ.
ದೀಪಾವಳಿ ಆಚರಣೆಯ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಹದಗೆಟ್ಟಿತ್ತು. ವಿವಿಧ ಮಾಲಿನ್ಯಕಾರಕ ಅಂಶಗಳಿಂದಾಗಿ ಗಾಳಿಯ ಗುಣಮಟ್ಟ ಹದಗೆಡುತ್ತಲೇ ಸಾಗಿದೆ. ದೆಹಲಿ ಸರ್ಕಾರ ಗಾಳಿಯ ಗುಣಮಟ್ಟದ ಮೇಲ್ವಿಚಾರಣಾ ಕೇಂದ್ರಗಳ ಸುತ್ತಲೂ ನೀರನ್ನು ಸಿಂಪಡಿಸಲು ಟ್ಯಾಂಕರ್‌ಗಳನ್ನು ನಿಯೋಜಿಸಿದ್ದು ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ರೀಡಿಂಗ್ ಮೀಟರ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಲು ಹೀಗೆ ಮಾಡಲಾಗಿದೆ ಎಂದು ಮಾಧ್ಯಮ ವರದಿಗಳು ಆರೋಪಿಸಿದ್ದವು.
ಸುಪ್ರೀಂ ಕೋರ್ಟ್ ಈ ಹಿಂದೆ ದೀಪಾವಳಿಯ ಸಮಯದಲ್ಲಿ ರಾಷ್ಟ್ರ ರಾಜಧಾನಿ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಹಸಿರು ಪಟಾಕಿ ಸಿಡಿಸಲು ಅನುಮತಿ ನೀಡಿತ್ತು. ಆದರೆ, ಮಾಲಿನ್ಯದ ಮಟ್ಟ ಹೆಚ್ಚುತ್ತಿರುವುದರಿಂದ, ಕೆಲವು ವಾರಗಳ ಕಾಲ ದೆಹಲಿಯನ್ನು ತೊರೆಯುವಂತೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಜನತೆಗೆ ವೈದ್ಯರು ಸಲಹೆ ನೀಡಿದ್ದಾರೆ.
ದೀಪಾವಳಿ ವೇಳೆ ದೆಹಲಿಯಲ್ಲಿರುವ 37 ಮೇಲ್ವಿಚಾರಣಾ ಕೇಂದ್ರಗಳಲ್ಲಿ ಕೇವಲ 9 ಮಾತ್ರ ಕಾರ್ಯನಿರ್ವಹಿಸುತ್ತಿದ್ದವು ಎಂಬುದನ್ನು ಗಮನಿಸಿದ್ದ ನ್ಯಾಯಾಲಯ ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ಸ್ಥಿತಿಗತಿ ವರದಿ ಸಲ್ಲಿಸುವಂತೆ ಕಳೆದ ವಾರ ತಿಳಿಸಿತ್ತು.
ಸಿಕ್ಯೂಎಎಂ ಪ್ರಕಾರ, ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಮಂಗಳವಾರ ಬೆಳಿಗ್ಗೆ 9 ಗಂಟೆಗೆ 425 ಕ್ಕೆ ತಲುಪಿತ್ತು. ನಂತರ ಅದು ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್‌ಸಿಆರ್) ಸಂಪೂರ್ಣ ವ್ಯಾಪ್ತಿಯಲ್ಲಿ ಜಿಆರ್‌ಎಪಿ ಹಂತ -3 ರ ಅಡಿಯಲ್ಲಿ 9 ಅಂಶಗಳ ಕ್ರಿಯಾ ಯೋಜನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಘೋಷಿಸಿತ್ತು.
ಗಾಳಿಯ ಗುಣಮಟ್ಟ ಅಪಾಯಕಾರಿ ಹಂತ ತಲುಪಿದೆ ಎಂದು ಮಾಲಿನ್ಯ ಪ್ರಕರಣದ ಅಮಿಕಸ್ ಕ್ಯೂರಿಯವರು ಸುಪ್ರೀಂ ಕೋರ್ಟ್‌ಗೆ ಇಂದು ತಿಳಿಸಿದರು.
ಗಾಳಿಯ ಗುಣಮಟ್ಟ ಕುರಿತು ಸುಳ್ಳು ಮಾಹಿತಿ ನೀಡುತ್ತಿರುವುದರಿಂದ ಅಧಿಕಾರಿಗಳು ಮಾಲಿನ್ಯ ದತ್ತಾಂಶ ನಿಗಾ ವ್ಯವಸ್ಥೆಯಲ್ಲಿನ ತೊಡಕುಗಳನ್ನು ವಿವರಿಸಬೇಕು ಎಂತಲೂ ಅವರು ಕೋರಿದರು. ಈ ಮಧ್ಯೆ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ವಾಯುಮಾಲಿನ್ಯ ಸೂಚ್ಯಂಕ ಆಧಾರಿತ ಪ್ರತಿಕ್ರಿಯಾತ್ಮ ಕ್ರಿಯಾ ಯೋಜನೆ-IV (ಜಿಆರ್‌ಎಪಿ - ಗ್ರಾಪ್ IV) ಜಾರಿಗೆ ತರಬೇಕು ಎಂದರು.
ಸುಪ್ರೀಂ ಕೋರ್ಟ್ ಅಂಗಳದಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಉಂಟಾಗುತ್ತಿರುವ ಮಾಲಿನ್ಯದ ಬಗ್ಗೆ ಗಮನ ಸೆಳೆದ ಅವರು ಕನಿಷ್ಠ ಸರ್ವೋಚ್ಚ ನ್ಯಾಯಾಲಯದಲ್ಲಿಯಾದರೂ ನಿರ್ಮಾಣ ಕಾರ್ಯದಿಂದ ಮಾಲಿನ್ಯ ಉಂಟಾಗಬಾರದು ಎಂದರು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಜೆಐ ಗವಾಯಿ ಪ್ರತಿಕ್ರಿಯಿಸಿದರು. "ಪ್ರಕರಣವನ್ನು ಸೋಮವಾರಕ್ಕೆ ಪಟ್ಟಿ ಮಾಡಿ. ನಾವು ನ್ಯಾಯಾಲಯದ ಸಿಬ್ಬಂದಿಗೂ ಅನೌಪಚಾರಿಕವಾಗಿ ತಿಳಿಸುತ್ತೇವೆ " ಎಂದು ಪೀಠ ಹೇಳಿತು.